ADVERTISEMENT

ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಪ್ರಕರಣ: ‘ಸುಪ್ರೀಂ’ ಕಳವಳ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:40 IST
Last Updated 13 ಏಪ್ರಿಲ್ 2018, 19:40 IST
ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಪ್ರಕರಣ: ‘ಸುಪ್ರೀಂ’ ಕಳವಳ
ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಪ್ರಕರಣ: ‘ಸುಪ್ರೀಂ’ ಕಳವಳ   

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಂತಹ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲಿ ವಂಚನೆ ಮಾಡಿ ವಿಚಾರಣೆಗೆ ಒಳಗಾಗುವಂತಹ ಸ್ಥಿತಿ ನಿರ್ಮಾಣ ಆಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

‘ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ’ ಎಂದು ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಮತ್ತು ಆರ್‌. ಭಾನುಮತಿ ಪ್ರಶ್ನಿಸಿದ್ದಾರೆ.

ಕೆ.ಎ.ಎಸ್‌ ಅಧಿಕಾರಿಗಳಾದ ಆಶಾ ಪರ್ವೀನ್‌, ಸಲ್ಮಾ ಫಿರ್ದೋಸ್‌ (ಇಬ್ಬರೂ 1998ರ ಬ್ಯಾಚ್‌ನ ಅಧಿಕಾರಿಗಳು), ಕೆಪಿಎಸ್‌ಸಿ ಉದ್ಯೋಗಿಗಳಾದ ಕೆ. ನರಸಿಂಹ ಹಾಗೂ ಎಂ.ಬಿ. ಬಣಕಾರ್‌ (2004ರ ತಂಡದ ಅಧಿಕಾರಿಗಳು) ಹಾಗೂ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಡಾ. ಎಚ್‌.ಎನ್‌.ಕೃಷ್ಣ ಅವರ ಆಪ್ತಸಹಾಯಕರಾಗಿದ್ದ ಪಿ. ಗೋಪಿಕೃಷ್ಣ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ ಬಳಿಕ ನ್ಯಾಯಪೀಠ ಹೀಗೆ ಹೇಳಿದೆ.

ADVERTISEMENT

ಈ ಮೇಲಿನವರ ವಿರುದ್ಧದ ಅಪರಾಧ ತನಿಖಾ ಪ್ರಕ್ರಿಯೆಯನ್ನು ರದ್ದು ಮಾಡಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು. ಆರೋಪಿಗಳ ಮೇಲಿರುವ ವಂಚನೆ, ಅಪರಾಧ ಒಳಸಂಚು ಮತ್ತು ಇತರ ಆಪಾದನೆಗಳನ್ನು ಕೈಬಿಟ್ಟರೆ ಅದು ಬಹುದೊಡ್ಡ ಅನ್ಯಾಯ ಎಂದು ರಾಜ್ಯ ಸರ್ಕಾರ ವಾದಿಸಿತು.

ಪ‍ರ್ವೀನ್‌ ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಅವರ ಪರ ವಕೀಲ ಬಸವ ಪ್ರಭು ಪಾಟೀಲ ಪ್ರತಿಪಾದನೆಯನ್ನು ಪೀಠವು ತಿರಸ್ಕರಿಸಿತು.

ಆರೋಪಿಗಳು ತಮ್ಮ ಜಾತಿ ಪ್ರಮಾಣಪತ್ರಗಳನ್ನು ತಿದ್ದಿದ್ದರು ಎಂಬುದು ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ.

ಇದು ಬಹಳ ಗಂಭೀರವಾದ ಆರೋಪ. ಪ್ರಮಾಣಪತ್ರದಲ್ಲಿ ಇರುವ ಸಹಿ ಆ ಪ್ರಮಾಣಪತ್ರ ನೀಡಿದ ಅಧಿಕಾರಿಯದ್ದಲ್ಲ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ಎರಡನೇ ವರದಿ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಈ ಪ್ರಕರಣದ ವಿಚಾರಣೆ ಅಗತ್ಯ ಎಂದು ಕರ್ನಾಟಕ ಸರ್ಕಾರದ ಪರ ವಕೀಲ ಜೋಸೆಫ್‌ ಅರಿಸ್ಟಾಟಲ್‌ ಹೇಳಿದರು.

‘ಪ್ರಕರಣವನ್ನು ಪರಿಶೀಲಿಸಲಾಗಿದೆ. ಇದು ವಿಚಾರಣೆಗೆ ಅರ್ಹವಾಗಿದೆ. ವಿಚಾರಣೆಯನ್ನು ಈಗಲೇ ಆರಂಭಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಪೀಠ ತಿಳಿಸಿತು.

ಏನಿದು ಪ್ರಕರಣ

ಪರ್ವೀನ್‌ ಅವರು ತಹಶೀಲ್ದಾರರಾಗಿ ಮತ್ತು ಸಲ್ಮಾ ಫಿರ್ದೋಸ್‌ ಅವರು ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ಆಗಿ ಆಯ್ಕೆಯಾಗಿದ್ದರು. ಆದರೆ ಇವರು ಜಾತಿ ಪ್ರಮಾಣಪತ್ರಗಳನ್ನು ತಿದ್ದಿದ್ದಾರೆ ಎಂಬ ಪ್ರಕರಣ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ 2011ರ ಆಗಸ್ಟ್‌ 11ರಂದು ದಾಖಲಾಗಿತ್ತು.

ಕೆಪಿಎಸ್‌ಸಿ ನಡೆಸಿದ ಎ ಮತ್ತು ಬಿ ವರ್ಗದ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಳಿಕ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿತ್ತು. ಸಿಐಡಿ ನಡೆಸಿದ ತನಿಖೆಯ ಆಧಾರದಲ್ಲಿ ಈ ದೂರು ದಾಖಲಿಸಲಾಗಿತ್ತು.

ಐವರು ಆರೋಪಿಗಳ ಜತೆಗೆ, ಆಗ ಕೆಪಿಎಸ್‌ಸಿ ಸದಸ್ಯರಾಗಿದ್ದ ಎಚ್‌.ಎನ್‌. ಕೃಷ್ಣ (ಬಳಿಕ ಅವರು ಅಧ್ಯಕ್ಷರಾದರು) ವಿರುದ್ಧವೂ ಆರೋಪಪಟ್ಟಿ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.