ADVERTISEMENT

ಕೆಪಿಎಸ್‌ಸಿ ಹಗರಣ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಬೆಂಗಳೂರು: 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿರುವ ಸಂದರ್ಶನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಶನಿವಾರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.

ಸಂದರ್ಶನ ಪ್ರಕ್ರಿಯೆಗೆ ಸಂಬಂಧ ಕೇಳಿಬಂದಿರುವ ಆರೋಪಗಳ ವಿಸ್ತೃತವಾದ ವಿವರಗಳನ್ನು ಒಳಗೊಂಡ ದೂರನ್ನು ಇಲಾಖೆ ಸಲ್ಲಿಸಿದೆ. ಆದರೆ, ಈ ದೂರು ಆಧರಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ತನಿಖೆ ಆರಂಭಿಸಬೇಕೇ ಅಥವಾ ಪ್ರಾಥಮಿಕ ತನಿಖೆ ಕೈಗೆತ್ತಿಕೊಳ್ಳಬೇಕೇ ಎಂಬ ಜಿಜ್ಞಾಸೆ ಪೊಲೀಸರನ್ನು ಕಾಡುತ್ತಿದೆ. ಈ ಕಾರಣದಿಂದ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಕೋರಿದ್ದಾರೆ.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ನಡೆದ ಸಂದರ್ಶನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳೇ ನೇರವಾಗಿ ಆರೋಪಿಸಿದ್ದರು. ಸರ್ಕಾರಿ ನೌಕರರೇ ಮಧ್ಯವರ್ತಿಗಳಾಗಿ ಲಂಚದ ವ್ಯವಹಾರ ನಡೆಸಿದ ಆರೋಪವೂ ಕೇಳಿಬಂದಿತ್ತು.

ಈ ಕುರಿತು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಮಂಡಲ ಅಧಿವೇಶನದಲ್ಲಿ ಪ್ರಕಟಿಸಿದ್ದರು.

ಸಿಐಡಿ ತನಿಖೆಗೆ ಪೂರಕವಾಗಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಸರ್ಕಾರ ಆದೇಶಿಸಿತ್ತು. ಅದರಂತೆ ಶನಿವಾರ ವಿಧಾನಸೌಧ ಪೊಲೀಸ್ ಠಾಣೆಗೆ ವಿಸ್ತೃತವಾದ ದೂರು ಸಲ್ಲಿಸಿರುವ ಅಧಿಕಾರಿಗಳು, ಕೆಪಿಎಸ್‌ಸಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ನಿರ್ದಿಷ್ಟವಾಗಿ ಆಯೋಗದ ಕೆಲ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಈ ದೂರು ಸಲ್ಲಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಾನೂನು ತಜ್ಞರ ಮೊರೆ: ಆದರೆ, ಡಿಪಿಎಆರ್ ಅಧಿಕಾರಿಗಳು ಸಲ್ಲಿಸಿರುವ ದೂರನ್ನು ಆಧರಿಸಿ ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸಿಲ್ಲ. ಕೆಪಿಎಸ್‌ಸಿ ಒಂದು ಸಾಂವಿಧಾನಿಕ ಸಂಸ್ಥೆ ಆಗಿರುವುದರಿಂದ ಅದರ ಹಾಲಿ ಸದಸ್ಯರ ವಿರುದ್ಧ ನೇರವಾಗಿ ತನಿಖೆ ಆರಂಭಿಸಬಹುದೇ? ಇಲಾಖೆ ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳನ್ನು ಆಧರಿಸಿ ಮೊಕದ್ದಮೆ ದಾಖಲಿಸಲು ಸಾಧ್ಯವೇ? ಎಂಬ ಪ್ರಶ್ನೆ ಪೊಲೀಸರ ಮುಂದಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಈಗ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

`ಡಿಪಿಎಆರ್ ಅಧಿಕಾರಿಗಳು ಸಲ್ಲಿಸಿರುವ ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೋರಲಾಗಿದೆ. ಈ ದೂರು ಒಂದು ಅರ್ಜಿಯ ಸ್ವರೂಪದಲ್ಲಿದೆ. ಅದರ ಆಧಾರದಲ್ಲಿ ನೇರವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕೇ ಅಥವಾ ಪ್ರಾಥಮಿಕ ವಿಚಾರಣೆ ಕೈಗೆತ್ತಿಕೊಳ್ಳಬಹುದೇ ಎಂಬುದನ್ನು ಕಾನೂನು ತಜ್ಞರ ಅಭಿಪ್ರಾಯ ದೊರೆತ ಬಳಿಕ ನಿರ್ಧರಿಸಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ದೂರಿನಲ್ಲಿ ಯಾರ ವಿರುದ್ಧ ಆರೋಪ ಮಾಡಲಾಗಿದೆ ಎಂಬುದನ್ನು ಗೌಪ್ಯವಾಗಿ ಇರಿಸಲು ಪೊಲೀಸರು ಮತ್ತು ಡಿಪಿಎಆರ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯುವ ಹಂತದಲ್ಲೂ ಈ ಮಾಹಿತಿ ಸೋರಿಕೆ ಆಗಬಾರದು ಎಂಬ ಮುನ್ನೆಚ್ಚರಿಕೆಯನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ತನಿಖೆಯ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರುವವರೆಗೂ ದೂರಿನಲ್ಲಿರುವ ಅಂಶಗಳನ್ನು ಬಹಿರಂಗಪಡಿಸದಂತೆ ಡಿಪಿಎಆರ್ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.

ಗೃಹ ಇಲಾಖೆ ಸನ್ನದ್ಧ: ಕೆಪಿಎಸ್‌ಸಿ ಸಂದರ್ಶನ ಪ್ರಕ್ರಿಯೆಗೆ ಸಂಬಂಧಿಸಿದ ತನಿಖೆಯನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಲು ಗೃಹ ಇಲಾಖೆ ಸನ್ನದ್ಧವಾಗಿದೆ. ಆದರೆ, ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಅದರ ಪ್ರತಿಯನ್ನು ಇಲಾಖೆಗೆ ಸಲ್ಲಿಸುವವರೆಗೂ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸಿಐಡಿ ತನಿಖೆಗೆ ಆದೇಶಿಸಲು ಕಡತ ಸಿದ್ಧಪಡಿಸಿಕೊಂಡಿರುವ ಗೃಹ ಇಲಾಖೆ, ಎಫ್‌ಐಆರ್ ಪ್ರತಿಗಾಗಿ ಕಾಯುತ್ತಿದೆ.

ಈ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, `ಯಾವುದೇ ಪ್ರಕರಣದಲ್ಲೂ ನೇರವಾಗಿ ಸಿಐಡಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಪೊಲೀಸ್ ಠಾಣೆಯೊಂದರಲ್ಲಿ ಮೊದಲು ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ನಂತರ ಆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಬಹುದು.

ಕೆಪಿಎಸ್‌ಸಿ ಸಂದರ್ಶನ ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳ ಕುರಿತು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಡಿಪಿಎಆರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಫ್‌ಐಆರ್ ಪ್ರತಿ ಕೈಸೇರಿದ ತಕ್ಷಣವೇ ಸಿಐಡಿ ತನಿಖೆಗೆ ಆದೇಶ ಹೊರಡಿಸುತ್ತೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.