ADVERTISEMENT

ಕೆಲಸ ನಮ್ಮದು; ಉದ್ಘಾಟನೆ ಅವರದ್ದು: ಖರ್ಗೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST

ಕಲಬುರ್ಗಿ: ‘ಕಲಬುರ್ಗಿ–ಬೀದರ್ ರೈಲು ಮಾರ್ಗದ ಕಾಮಗಾರಿ ನಮ್ಮದಾಗಿದ್ದು, ಇದೀಗ ಬಿಜೆಪಿಯವರು ಉದ್ಘಾಟನೆ ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಕೆಲಸ ನಮ್ಮದು, ಉದ್ಘಾಟನೆ ಅವರದ್ದು ಎನ್ನುವಂತಾಗಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

ಸೋಮವಾರ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಲಬುರ್ಗಿಯಿಂದ ಮಹಾಗಾಂವದ ವರೆಗೆ ಮತ್ತು ಬೀದರ್‌ನಿಂದ ಹುಮನಾಬಾದ್‌ವರೆಗಿನ ಕಾಮಗಾರಿ ಆಗಲೇ ಪೂರ್ಣಗೊಂಡಿತ್ತು. ಮರಗುತ್ತಿ ಬಳಿಯ ಸುರಂಗ ಮಾರ್ಗದ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಅದು ಆರು ತಿಂಗಳಲ್ಲಿ ಮಗಿಯಬೇಕಾದ ಕಾಮಗಾರಿ. ಆದರೆ, ಅದನ್ನು ಪೂರ್ಣಗೊಳಿಸಲು ಮೂರು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಈ ಯೋಜನೆಯನ್ನು ತಮ್ಮದು ಎಂಬಂತೆ ಬಿಂಬಿಸುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕಲಬುರ್ಗಿ–ಬೀದರ್ ರೈಲು ಮಾರ್ಗವನ್ನು ಕಲಬುರ್ಗಿಯಲ್ಲೇ ಉದ್ಘಾಟಿಸಬಹುದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಬೀದರ್‌ನಲ್ಲಿ ಉದ್ಘಾಟಿಸುತ್ತಿದ್ದು, ಇದು ಚುನಾವಣಾ ಗಿಮಿಕ್ ಆಗಿದೆ. ಈ ಕಾಮಗಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50ರಷ್ಟು ಅನುದಾನವನ್ನು ಕೊಟ್ಟಿದೆ. ಹೀಗಾಗಿ ಮುಖ್ಯಮಂತ್ರಿ ಅವರಿಗೂ ಆಹ್ವಾನ ನೀಡಬೇಕಿತ್ತು. ಆದರೆ ಪ್ರಧಾನಿ ಮೋದಿ ಅವರು ಎಲ್ಲವನ್ನೂ ತಮ್ಮಿಷ್ಟದಂತೆ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.