ADVERTISEMENT

ಕೆ.ಸಿ.ವೀರೇಂದ್ರ ವಿರುದ್ಧದ ಸಿಬಿಐ ಪ್ರಕರಣ ಆದೇಶ ಕಾಯ್ದರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಕೆ.ಸಿ.ವೀರೇಂದ್ರ ವಿರುದ್ಧದ ಸಿಬಿಐ ಪ್ರಕರಣ ಆದೇಶ ಕಾಯ್ದರಿಸಿದ ಹೈಕೋರ್ಟ್‌
ಕೆ.ಸಿ.ವೀರೇಂದ್ರ ವಿರುದ್ಧದ ಸಿಬಿಐ ಪ್ರಕರಣ ಆದೇಶ ಕಾಯ್ದರಿಸಿದ ಹೈಕೋರ್ಟ್‌   

ಬೆಂಗಳೂರು: ‘ರಿಸರ್ವ್‌ ಬ್ಯಾಂಕ್‌ ನಿಯಮ ಅಥವಾ ಅಧಿಸೂಚನೆಗಳನ್ನು ಉಲ್ಲಂಘಿಸಿ, ಕಾನೂನುಬದ್ಧ ಲೆಕ್ಕದಲ್ಲಿ ಒಂದೇ ಒಂದು ರೂಪಾಯಿ ವ್ಯತ್ಯಾಸ ಕಂಡು ಬಂದರೂ ಅದು ಕ್ರಿಮಿನಲ್‌ ಅಪರಾಧವಾಗುತ್ತದೆ’ ಎಂದು ಹೈಕೋರ್ಟ್‌ಗೆ ಸಿಬಿಐ ಸ್ಪಷ್ಟಪಡಿಸಿತು.

‘ನನ್ನ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಪ್ರಕರಣ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ಚಳ್ಳಕೆರೆಯ ಹವಾಲಾ ದಲ್ಲಾಳಿ ಹಾಗೂ ಸ್ಥಳೀಯ ಜೆಡಿಎಸ್‌ ಮುಖಂಡ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ವೇಳೆ ಸಿಬಿಐ ವಕೀಲ ಪಿ.ಪ್ರಸನ್ನ ಕುಮಾರ್‌, ‘ಪ್ರಕರಣ ಗಂಭೀರ ಸ್ವರೂಪದಾಗಿದ್ದು ರದ್ದುಪಡಿಸಲು ನಿರ್ದೇಶಿಸಬಾರದು’ ಎಂದು ಕೋರಿದರು.

‘ಆರೋಪಿಗೆ ಚಿತ್ರದುರ್ಗದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಶಾಖೆಯಿಂದ ಚಳ್ಳಕೆರೆಗೆ ಹಣ  ವರ್ಗಾವಣೆ ಆಗಿರುವುದು ಪ್ರಾಸಿಕ್ಯೂಷನ್‌ ತನಿಖೆ ವೇಳೆ ಕಂಡು ಬಂದಿದೆ’ ಎಂದರು.

ADVERTISEMENT

ವೀರೇಂದ್ರ ಪರ ವಕೀಲ ಚಂದ್ರಮೌಳಿ, ‘ಹಣ ನಮ್ಮ ಅರ್ಜಿದಾರರದ್ದೇ ಎಂಬುದರಲ್ಲಿ ಯಾವುದೇ ತಕರಾರಿಲ್ಲ. ಈ ಹಣಕ್ಕೆ ಅರ್ಜಿದಾರರು ಆದಾಯ ತೆರಿಗೆ ಕಾಯ್ದೆಯ ಕಲಂ 69 (ಎ) ಅನುಸಾರ ಕಾಲಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೆ, ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಿ ದೂರು ದಾಖಲಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು. ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಪೀಠ ಆದೇಶ ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.