ADVERTISEMENT

ಕೈ,ಕಮಲದಲ್ಲಿ ಬಂಡಾಯ

ರಾಜ್ಯದ ಹಲವೆಡೆ ಕಾಂಗ್ರೆಸಿಗರ ದಾಂದಲೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಟಿಕೆಟ್‌ ನೀಡದಿರುವುದನ್ನು ಖಂಡಿಸಿ ಕೆಪಿಸಿಸಿ ಕಚೇರಿಯ ಎದುರು ಮಂಜುಳಾ ನಾಯ್ಡು ಅವರು ಸೋಮವಾರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು
ಟಿಕೆಟ್‌ ನೀಡದಿರುವುದನ್ನು ಖಂಡಿಸಿ ಕೆಪಿಸಿಸಿ ಕಚೇರಿಯ ಎದುರು ಮಂಜುಳಾ ನಾಯ್ಡು ಅವರು ಸೋಮವಾರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಮುಂದಿನ ಐದು ವರ್ಷ ರಾಜ್ಯ ಆಳುವವರ ಹಣೆಬರಹ ನಿರ್ಧರಿಸುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ (ಏ.17) ಆರಂಭವಾಗಲಿದೆ.

ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಹುರಿಯಾಳುಗಳ ಪಟ್ಟಿಯನ್ನು ಘೋಷಿಸುತ್ತಿದ್ದಂತೆ ವಿವಿಧೆಡೆ ಬಂಡಾಯದ ಕಹಳೆ ಮೊಳಗಿದ್ದು, ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಿದವರು ರೊಚ್ಚಿಗೆದ್ದಿದ್ದಾರೆ.

ಟಿಕೆಟ್ ಸಿಗದೇ ನಿರಾಶೆಗೊಳಗಾದ ಅನೇಕರು ಎದುರಾಳಿ ಪಕ್ಷದ ಮೆಟ್ಟಿಲು ತುಳಿದಿದ್ದಾರೆ. ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಯಾಗಿ ಸಡ್ಡು ಹೊಡೆಯುವ ಸುಳಿವು ನೀಡಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ ಮತ್ತು ಬಿಜೆಪಿಯ ನಾಯಕರನ್ನು ಕಂಗಾಲು ಮಾಡಿದೆ.

ADVERTISEMENT

ಈ ಮಧ್ಯೆ,  ಅಭ್ಯರ್ಥಿಗಳಿಗೆ ಮಂಗಳವಾರದಿಂದಲೇ ‘ಬಿ’ ಫಾರಂ ವಿತರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಎರಡು ಪಕ್ಷಗಳ ವರಿಷ್ಠರು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಧಗ ಧಗ: ಏಕಕಾಲದಲ್ಲಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕಾಂಗ್ರೆಸ್ ಬಿಡುಗಡೆ ಮಾಡಿದ ಬೆನ್ನಲ್ಲೆ ಟಿಕೆಟ್ ಕೈತಪ್ಪಿದ ಕಾಂಗ್ರೆಸ್ ಆಕಾಂಕ್ಷಿಗಳ ಅನುಯಾಯಿಗಳು ದಾಂದಲೆ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತೇಗೌಡ, ಮಂಡ್ಯದಲ್ಲಿ ಗಣಿಗ ಪಿ.ರವಿಕುಮಾರ್‌ಗೌಡ ಅನುಯಾಯಿಗಳು ಜಿಲ್ಲಾ ಕಾಂಗ್ರೆಸ್ ಕಚೇರಿಯ ಪೀಠೋಪಕರಣ ಹಾಗೂ ಕಿಟಕಿ ಗಾಜು ಒಡೆದು ಗದ್ದಲ ಎಬ್ಬಿಸಿದರು.

ತಿಪಟೂರು ಶಾಸಕ ಕೆ. ಷಡಕ್ಷರಿ ಬೆಂಬಲಿಗರಿಬ್ಬರು ಸೀಮೆಎಣ್ಣೆ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಬಂದ್‌ ಆಚರಿಸಿದರು. ಕುಣಿಗಲ್‌, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ, ಕೋಲಾರ, ಬಾಗೇಪಲ್ಲಿ ಕ್ಷೇತ್ರದಲ್ಲಿ ತೀವ್ರ ಪ್ರತಿಭಟನೆ ನಡೆದಿದೆ. ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಪತ್ನಿ ವಾಣಿ ಶ್ರೀನಿವಾಸ್ ಮತ್ತು ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ.

ಟಿಕೆಟ್‌ ಕೈತಪ್ಪಿದ್ದರಿಂದಾಗಿ ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ ‌ಬೆಂಬಲಿಗರು ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕೃತಿಗೆ ಬೆಂಕಿ ಹಚ್ಚಿದರೆ, ಕಾರ್ಕಳದಲ್ಲಿ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಸಿಡಿಮಿಡಿಕೊಂಡಿರುವ ಬೆಂಬಲಿಗರು, ಸಂಸದ ಎಂ.ವೀರಪ್ಪ ಮೊಯಿಲಿ ಪ್ರತಿಕೃತಿ ದಹಿಸಿದರು. ಬಾಗೇಪಲ್ಲಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಮೊಯಿಲಿ ಮತ್ತು ವರಿಷ್ಠರ ವಿರುದ್ಧ ಮಾಜಿ ಶಾಸಕ ಎನ್. ಸಂಪಂಗಿ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಟಿಕೆಟ್ ಕೈತಪ್ಪಿದ್ದಕ್ಕೆ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ಕಣ್ಣೀರು ಹಾಕಿದರು. ಮತ್ತೆ ಟಿಕೆಟ್‌ ನೀಡುವಂತೆ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್‌ ಅವರು ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದು ಅಲವತ್ತುಕೊಂಡರು.

ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಮಾಜಿ ಶಾಸಕ ಪಿ.ಎಚ್. ಪೂಜಾರ ಬೆಂಬಲಿಗರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಮನೆ ಎದುರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪಾಟೀಲರ ಮನೆಗೆ ಅರೆಸೇನಾ ಪಡೆಯ ಭದ್ರತೆ ಒದಗಿಸಲಾಗಿದೆ.

ಬಾದಾಮಿಯಲ್ಲಿ ಪ್ರತಿಭಟನೆ ನಡೆಸಿದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಬೆಂಬಲಿಗರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಮುಖ್ಯ
ಮಂತ್ರಿ ಜೊತೆ ಚರ್ಚಿಸಿರುವ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ‘ನೀವು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಿ ಎಂಬ ಕಾರಣಕ್ಕೆ ‌ಕ್ಷೇತ್ರ ತ್ಯಾಗ ಮಾಡಲು ನಿರ್ಧರಿಸಿದ್ದೆ. ಆದರೆ, ಅಲ್ಲಿ ಬೇರೆಯವರಿಗೆ ಟಿಕೆಟ್ ಘೋಷಣೆಯಾಗಿದೆ. ನಾನೇ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ’ ಎಂದು ಪಟ್ಟು ಹಿಡಿದಿದ್ದಾರೆ.

‘ಬೇಲೂರಿನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ಶಿವರಾಂ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗಿರೀಶ್ ನಾಶಿ, ರಾಜಾಜಿನಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಆಕಾಂಕ್ಷಿ ಮಂಜುಳಾ ನಾಯ್ಡು ಬೆಂಬಲಿಗರ ಜೊತೆ ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು. ಪುಲಕೇಶಿ ನಗರದ ಟಿಕೆಟ್ ಕೈತಪ್ಪಿದ್ದರಿಂದ ಸಿಟ್ಟಿಗೆದ್ದಿರುವ ಬಿ.ಪ್ರಸನ್ನ ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಬಿಜೆಪಿಯಲ್ಲೂ ಅತೃಪ್ತಿಯ ಹೊಗೆ: ಬಿಜೆಪಿ ಎರಡನೆ ಪಟ್ಟಿ ಬಿಡುಗಡೆಯ ಬಳಿಕ ರಾಜ್ಯದ ಹಲವೆಡೆ ಟಿಕೆಟ್‌ ಕೈತಪ್ಪಿದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಸಾಗರ ಕ್ಷೇತ್ರದಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ಬಂಡಾಯ ಏಳುವ ಸುಳಿವು ನೀಡಿದ್ದಾರೆ. ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ಖಚಿತವಾದ ಸುದ್ದಿ ಹರಡುತ್ತಿದ್ದಂತೆ ಬೇಳೂರು ಬೆಂಬಲಿಗರು ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ, ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಪ್ರಚಾರ ವಾಹನದ ಮೇಲೆ ಕಲ್ಲು ತೂರಿದರು. ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ಬ್ಯಾನರ್, ಫ್ಲೆಕ್ಸ್ ಹರಿದು ಹಾಕಿದರು.

ಬೇಳೂರು ಅನುಯಾಯಿಗಳು ಹಲ್ಲೆ ನಡೆಸಿದ್ದರಿಂದಾಗಿ ಹರತಾಳು ಜತೆ ಗುರುತಿಸಿಕೊಂಡಿದ್ದ ವಿನಾಯಕ ಎಂಬುವವರ ತಲೆಗೆ ಗಂಭೀರ ಗಾಯವಾಗಿದೆ. ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

ಕಲಬುರ್ಗಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಶಿಲ್ ಜಿ.ನಮೋಶಿಗೆ ಟಿಕೆಟ್ ತಪ್ಪಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ಟಿಕೆಟ್‌ ಸಿಗದೇ ತೀವ್ರ ನಿರಾಶೆಗೊಂಡ ನಮೋಶಿ ಕಣ್ಣೀರಿಟ್ಟರು. ಟಿಕೆಟ್‌ ಸಿಗದೇ ಇರುವುದರಿಂದ ರೊಚ್ಚಿಗೆದ್ದಿರುವ ಸಿ.ಎಂ. ನಿಂಬಣ್ಣನವರ ಅವರ ಬೆಂಬಲಿಗರು, ಮಂಗಳವಾರ ಕಲಘಟಗಿ ಕ್ಷೇತ್ರದ ಬಂದ್‌ಗೆ ಕರೆ ನೀಡಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ಕ್ಷೇತ್ರದಲ್ಲಿ ಟಿಕೆಟ್‌ ವಂಚಿತ ಮಾಜಿ ಉಪಮೇಯರ್‌ ಹರೀಶ್‌ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ
ಹಾಕಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ತುಮಕೂರಿನಲ್ಲಿ ಸೊಗಡು ಶಿವಣ್ಣ, ಬೆಳ್ತಂಗಡಿಯಲ್ಲಿ ಗಂಗಾಧರಗೌಡ ಸಿಡಿಮಿಡಿಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.