ADVERTISEMENT

`ಕೈಗಾರಿಕೆಗಳಿಗೆ ಜಲಾಶಯದ ನೀರಿಲ್ಲ'

ಪ್ರವೀಣ ಕುಲಕರ್ಣಿ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಸುವರ್ಣ ವಿಧಾನಸೌಧ (ಬೆಳಗಾವಿ): `ರಾಜ್ಯದ ಯಾವುದೇ ಜಲಾಶಯಗಳಿಂದ ಕೈಗಾರಿಕೆಗಳಿಗೆ ಇನ್ನು ಮುಂದೆ ನೀರು ಕೊಡುವುದಿಲ್ಲ' ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ವಿಧಾನ ಪರಿಷತ್‌ನಲ್ಲಿ ಕೃಷ್ಣಾ ನೀರು ಬಳಕೆ ಕುರಿತಂತೆ ನಡೆದ ಸುದೀರ್ಘ ಚರ್ಚೆಗೆ ಬುಧವಾರ ಅವರು ಉತ್ತರ ನೀಡಿದರು. `ನೀರಿಗಾಗಿ ಕೃಷಿ ಕ್ಷೇತ್ರದ ಜೊತೆ ಕೈಗಾರಿಕೆಗಳು ಸಮರ ನಡೆಸಲು  ರಾಜ್ಯದಲ್ಲಿ ಆಸ್ಪದ ಇಲ್ಲ' ಎಂದು ಸ್ಪಷ್ಟಪಡಿಸಿದರು.

`ರಾಜ್ಯ ಸರ್ಕಾರ ಜಲನೀತಿ ರೂಪಿಸಿದೆ. ಅದರ ಅನುಸಾರ ಜನರಿಗೆ ಕುಡಿಯುವ ನೀರನ್ನು ಒದಗಿಸುವುದು  ಮೊದಲ ಆದ್ಯತೆ. ಕೃಷಿ ಎರಡನೇ ಆದ್ಯತೆ. ಈ ಎರಡೂ ಉದ್ದೇಶಗಳು ಈಡೇರಿದ ಮೇಲೂ ನೀರು ಲಭ್ಯವಿದ್ದರೆ ಕೃಷಿ ಆಧಾರಿತ ಕೈಗಾರಿಕೆಗಳಿಗಷ್ಟೇ ನೀಡಲಾಗುವುದು' ಎಂದು ವಿವರಿಸಿದರು.
`ಆಲಮಟ್ಟಿ ಜಲಾಶಯದಿಂದ ನೀರು ಒದಗಿಸಲು ಈ ಹಿಂದೆ ಹಲವು ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದುವರೆಗೆ ಅವುಗಳು ನೀರು ಬಳಸಿಕೊಂಡಿಲ್ಲ. ನಿಯಮದಂತೆ ಮೂರು ಬಾರಿ ನೋಟಿಸ್ ನೀಡಿ, ಆ ಕೈಗಾರಿಕೆಗಳಿಗೆ ಮಾಡಿದ್ದ ನೀರಿನ ಹಂಚಿಕೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ' ಎಂದು ತಿಳಿಸಿದರು.

`ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಮತ್ತು ಮುಖ್ಯ ಎಂಜಿನಿಯರ್ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದ್ದು, ನೀರಿನ ಹಂಚಿಕೆ ಕುರಿತ ನಿರ್ಧಾರಗಳನ್ನು ಆ ಸಮಿತಿ ತೆಗೆದುಕೊಳ್ಳಲಿದೆ' ಎಂದು ಹೇಳಿದರು. `ಈ ಸರ್ಕಾರದ ಅವಧಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಮೊದಲ ಸಮಾವೇಶ (ಜಿಮ್) ನಡೆದಾಗಲೇ ಜಲ ಸಂಪನ್ಮೂಲ ಇಲಾಖೆ ಜಾಗೃತಗೊಂಡಿದ್ದು, ನೀರಿನ ಸಮರ್ಪಕ ಬಳಕೆಗೆ ಅಗತ್ಯ ಕ್ರಮ ಕೈಗೊಂಡಿದೆ. ಮಳೆಗಾಲದಲ್ಲಿ ಮಾತ್ರ ಜಲಾಶಯದ ಕೆಳಭಾಗದಿಂದ ನೀರು ಪಡೆಯಲು ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಬೇಸಿಗೆಯಲ್ಲಿ ನೀರಿನ ವ್ಯವಸ್ಥೆಯನ್ನು ಅವುಗಳೇ ಮಾಡಿಕೊಳ್ಳಬೇಕು. ಅದಕ್ಕಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳುವುದು ಕಡ್ಡಾಯ' ಎಂದು ಮಾಹಿತಿ ನೀಡಿದರು.

`ಜಲ ವಿದ್ಯುತ್ ಯೋಜನೆಗಳಿಗೆ ನೀರು ಪೂರೈಸುವ ಪ್ರಕ್ರಿಯೆ ಯಥಾಪ್ರಕಾರ ಮುಂದುವರಿಯಲಿದೆ. ಏಕೆಂದರೆ ಇದರಿಂದ ಒಂದಿನಿತೂ ನೀರು ಪೋಲಾಗುವುದಿಲ್ಲ. ವಿದ್ಯುತ್ ಉತ್ಪಾದನೆಗೆ ನೀಡಿದ ನೀರು ಮತ್ತೆ ಬಳಕೆಗೆ ಸಿಗಲಿದೆ' ಎಂದು ಹೇಳಿದರು. `ರಾಜ್ಯದ ಎಲ್ಲ ಜಲಾನಯನ ಪ್ರದೇಶದ ಕೃಷಿಭೂಮಿಯಲ್ಲಿ ಸುಮಾರು 20 ಟಿಎಂಸಿ ಅಡಿಯಷ್ಟು ನೀರು ತುಂಬಿಕೊಂಡಿದೆ. ಆ ಪ್ರದೇಶ ಸವಳು ಭೂಮಿಯಾಗಿ ಪರಿವರ್ತನೆಗೊಂಡಿದ್ದು, ಕೃಷಿಗೆ ಅಯೋಗ್ಯವಾಗಿದೆ. ಅಲ್ಲಿನ ನೀರನ್ನು ತೆಗೆದು ಮರುಬಳಕೆ ಮಾಡಲು ವೈಜ್ಞಾನಿಕವಾದ ಯೋಜನೆ ರೂಪಿಸಲಾಗಿದೆ' ಎಂದು ಬೊಮ್ಮಾಯಿ ವಿವರಿಸಿದರು.
`ಲಭ್ಯವಿರುವ ನೀರಿನಲ್ಲೇ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಇಂತಹ ಯೋಜನೆ ತಂದ ಮೊದಲ ರಾಜ್ಯ ನಮ್ಮದಾಗಿದ್ದು, ಕೇಂದ್ರವೂ ಸಾವಿರಾರು ಕೋಟಿ ರೂಪಾಯಿ ನೆರವು ನೀಡಲು ಮುಂದೆ ಬಂದಿದೆ' ಎಂದು ತಿಳಿಸಿದರು.

`ಕನ್ನಡ ಗಂಗಾ ಯೋಜನೆ ಮೂಲಕ ನಾಲ್ಕು ಟಿಎಂಸಿ ಅಡಿ ನೀರು ಪಡೆದು ವಿಜಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ವಿವರಿಸಿದರು. `ಜಲ ಸಂಪನ್ಮೂಲ ಇಲಾಖೆಗೆ ಶೀಘ್ರವೇ ಪ್ರತ್ಯೇಕವಾದ ಎಂಜಿನಿಯರಿಂಗ್ ವಿಭಾಗ ಬರಲಿದೆ. ಈಗ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಎಂಜಿನಿಯರ್‌ಗಳ ಸೇವೆಯನ್ನು ಲೋಕೋಪಯೋಗಿ ಇಲಾಖೆಯಿಂದ ಎರವಲು ಪಡೆಯಲಾಗುತ್ತಿದ್ದು, ಇದರಿಂದ ಕಾಮಗಾರಿ ವೇಗ ಕುಂಠಿತಗೊಂಡಿದೆ' ಎಂದು ಸಚಿವರು ತಿಳಿಸಿದರು.

ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ನೀರಾವರಿ ಯೋಜನೆಗಳಿಗೆ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ತೆರೆಯಲು ಈಗಾಗಲೇ ಅನುಮತಿ ನೀಡಿದ್ದೇನೆ. ಲೋಕೋಪಯೋಗಿ ಎಂಜಿನಿಯರಿಂಗ್ ವಿಭಾಗವನ್ನು ಕೆಲವೇ ದಿನಗಳಲ್ಲಿ ಇಬ್ಭಾಗ ಮಾಡಲಾಗುವುದು' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.