ADVERTISEMENT

ಖಡಕ್ ರೊಟ್ಟಿ, ಬೆಣ್ಣೆ ಪ್ರಿಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಗದಗ: “ಗದುಗಿಗೆ ಬಂದು ಇಪ್ಪತ್ತು ವರ್ಷವಾಯಿತು. ಅದೇ ಕೊನೆ ಬಾರಿ. ನಮ್ಮ ಅಭಿನಯ ರಂಗ ಸಂಸ್ಥೆ ವತಿಯಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದೆವು. ರೂ 4,000 ಸಂಭಾವನೆ ತಗೆದುಕೊಂಡು, ಸಹ ಕಲಾವಿದರಿಗೆ ಹಂಚಿಬಿಟ್ಟರು” ಎಂದು ಭೀಮಸೇನ ಜೋಷಿ ಬಗ್ಗೆ ಹೇಳುತ್ತಲೇ ಸಹೋದರ ಸುಶಿಲೇಂದ್ರ ಜೋಷಿ ಭಾವುಕರಾದರು.

ಗದುಗಿನ ವೀರನಾರಾಯಣ ಗುಡಿಯ ಗೋಪುರದ ಮೇಲೆ ಆಡಿ ಬೆಳೆದ ಪೋರ ಭೀಮಸೇನ ಜೋಷಿ, ಮುನ್ಸಿಪಲ್ ಮೈದಾನದಲ್ಲಿ ಫುಟ್ಬಾಲ್ ಆಡಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ತಮ್ಮ ಮನೆಯ ಬಾವಿಯಿಂದ ನೀರನ್ನು ಜಗ್ಗಿ ಖುಷಿ ಪಟ್ಟಿದ್ದಾರೆ. ಮಲ್ಲಕಂಭ ಏರಿ ಸಾಧನೆಯನ್ನೂ ಮಾಡಿದ್ದಾರೆ. ಆದರೆ ಇವೆಲ್ಲ ‘ಪಕ್ಕವಾದ್ಯ’ಗಳಾದವೇ ಹೊರತು ಅವರು ಸಂಪೂರ್ಣವಾಗಿ ತೊಡಗಿಸಿಕೊಂಡದ್ದು ಗಾಯನ ಕ್ಷೇತ್ರದಲ್ಲಿ.

ಗದಗ ತಾಲ್ಲೂಕಿನ ಹೊಂಬಳ ಜೋಷಿಯವರ ಕುಟುಂಬದ ಮೂಲ ಗ್ರಾಮ. ರೋಣದಲ್ಲಿ 1922ರ ಫೆಬ್ರವರಿ 4ರಂದು ಹುಟ್ಟಿದ ಜೋಷಿಗೆ ಬಾಲ್ಯದಲ್ಲಿಯೇ ಸಂಗೀತದ ಹುಚ್ಚು. ಜೋಷಿಯವರ ತಂದೆ ಗುರಾಚಾರ್ಯ ಜೋಷಿಯವರು ಬಾಗಲಕೋಟೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದಾಗ ಅಲ್ಲಿ ಮನೆಯ ಪಕ್ಕದಲ್ಲಿ ಇದ್ದ ಮಸೀದಿಯಿಂದ ಕೇಳಿ ಬರುತ್ತಿದ್ದ ಪ್ರಾರ್ಥನೆಯ ಧ್ವನಿಯನ್ನು ಅನುಸರಿಕೊಂಡು ಮಸೀದಿಗೆ ಹೋಗಿ ಕುಳಿತು ಬಿಡುತ್ತಿದ್ದ ಭೀಮಸೇನ ಜೋಷಿ, ಕೆಲವೊಂದು ಸಾರಿ ಊರಿನಲ್ಲಿ ಮೆರವಣಿಗೆ, ಮದುವೆ ಮುಂತಾದ ಕಾರ್ಯಗಳಿಗೆ ಬರುತ್ತಿದ್ದ ಭಜಂತ್ರಿ ಮೇಳದ ಜೊತೆ ಊರಿನ ಬೀದಿಯನ್ನು ಸುತ್ತುತ್ತಿದ್ದರು.

ಬಾಗಕೋಟೆಯಿಂದ ಗದುಗಿನ ಶಾಲೆಗೆ ವರ್ಗವಾಗಿ ಬಂದ ನಂತರ ಅವರಿಗೆ ಹುಚ್ಚು ಹನುಮಂತರಾಯ ಎಂಬುವರು ಸಂಗೀತದ ಸರಿಗಮಪ ಹೇಳಿಕೊಟ್ಟರು. ಪಂಡಿತ ಪಂಚಾಕ್ಷರ ಗವಾಯಿಗಳ ಸಾನ್ನಿಧ್ಯದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜೋಷಿ ಹಾಡನ್ನು ಪ್ರಸ್ತುತ ಪಡಿಸಿದಾಗ ಸಂತಸಗೊಂಡ ಗವಾಯಿಗಳು ಚನ್ನಪ್ಪನನ್ನು ಕರೆದು “ಇವನನ್ನು ಬೇರೆ ಗುರುಗಳ ಹತ್ತಿರಕ್ಕೆ ಕಳುಹಿಸು. ಏಕೆಂದರೆ ಆತನಿಗೆ ಕಲಿಸುವ ಆಳ ನಿನ್ನಲಿಲ್ಲ’ ಎಂದರಂತೆ.

-ಹೀಗೆ ಬಾಲ್ಯದಲ್ಲಿ ಸಂಗೀತದ ಬೇರನ್ನು ಬಿಟ್ಟ ಗದುಗಿಗೆ ಯಾವುದಾದರು ಕಾರ್ಯಕ್ರಮವಿದ್ದರೆ ಮಾತ್ರ ಬರುತ್ತಿದ್ದರು. ಮನೆಯಲ್ಲಿ ಶುಭಕಾರ್ಯಗಳು ನಡೆದಾಗ ಬಂದು ಇದ್ದು ಹೋಗುತ್ತಿದ್ದರು. ಗದುಗಿಗೆ ಬಂದರಂತೂ ಖಡಕ್‌ರೊಟ್ಟಿ, ಚಟ್ನಿ, ಬೆಣ್ಣೆ, ಪುಂಡಿಪಲ್ಯ, ಮಜ್ಜಿಗೆ ಇರಲೇ ಬೇಕು. ಊರಿಗೆ ಬಾರದೆ ಇದ್ದರೂ ರೊಟ್ಟಿ ಜ್ಞಾಪಕಕ್ಕೆ ಬಂದರೆ ಸಾಕು ತರಿಸಿಕೊಂಡು ಬಿಡುತ್ತಿದ್ದರು ಎಂದು ಸುಶಿಲೇಂದ್ರ ಸ್ವಲ್ಪ ಹೊತ್ತು ಮಾತು ನಿಲ್ಲಿಸಿದರು. ‘ನಂಬಿದೆ ನಿನ್ನ ನಾದ ದೇವತೆಯೇ’ ಹಾಡು ದೂರದಿಂದ ಮೇಲುಧ್ವನಿಯಲ್ಲಿ  ಹರಿದುಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.