ADVERTISEMENT

ಖಾಸಗಿ ರೆಸಾರ್ಟ್ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ಬಾಗಲಕೋಟೆ: ಕಾಂಗ್ರೆಸ್‌ ಮುಖಂಡ, ಬಳ್ಳಾರಿ ಜಿಲ್ಲೆ ವಿಜಯನಗರ (ಹೊಸಪೇಟೆ) ಕ್ಷೇತ್ರದ ಮಾಜಿ ಶಾಸಕ ಆನಂದ ಸಿಂಗ್ ಒಡೆತನದ, ಬಾದಾಮಿಯಲ್ಲಿನ ಕೃಷ್ಣಾ ಹೆರಿಟೇಜ್ ರೆಸಾರ್ಟ್‌ ಮೇಲೆ ಸೋಮವಾರ ತಡರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಹುಬ್ಬಳ್ಳಿಯಿಂದ ಎರಡು ವಾಹನಗಳಲ್ಲಿ ಬಂದಿದ್ದ 10 ಮಂದಿ ಅಧಿಕಾರಿಗಳು ಮಂಗಳವಾರ ಬೆಳಗಿನವರೆಗೂ ತಪಾಸಣೆ ನಡೆಸಿದ್ದಾರೆ. ಈ ವೇಳೆ ₹ 11 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಅದನ್ನು ಅಧಿಕಾರಿಗಳು ದೃಢಪಡಿಸಿಲ್ಲ.

ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕಾರಣ, ಕಳೆದ 20 ದಿನಗಳಿಂದ ಈ ರೆಸಾರ್ಟ್‌ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬರುವ ನಾಯಕರು ಹಾಗೂ ಮುಖಂಡರ ಕಾರ್ಯಕ್ಷೇತ್ರವಾಗಿದೆ. ಮೂರು ದಿನಗಳ ಹಿಂದೆ ಬಾದಾಮಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಇಲ್ಲಿಯೇ ವಾಸ್ತವ್ಯ ಹೂಡಿದ್ದರು.

ADVERTISEMENT

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ವೇಳೆ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪಾರಸ್‌ಮಲ್ ಜೈನ್ ರೆಸಾರ್ಟ್‌ನಲ್ಲಿಯೇ ಇದ್ದರು.

ದಾಳಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾರಸ್‌ಮಲ್‌ ಜೈನ್, ‘ನನ್ನ ಬಳಿ ಖರ್ಚಿಗೆ ಇಟ್ಟುಕೊಂಡಿದ್ದ  ₹ 5 ಲಕ್ಷ ನಗದನ್ನೂ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಅದಕ್ಕೆ ಲೆಕ್ಕ ಇದೆ ಎಂದರೂ ಕೇಳಲಿಲ್ಲ. ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಾಕ ಬಂದೀರಿ ಅಂತ ಐಟಿಯವ್ರು ಕೇಳಿದ್ರು. ನಾನು, ಊಟಕ್ಕ ಬಂದೇನಿ ಅಂದೆ. ಎಲ್ಲಾ ರೂಮ್ ಸರ್ಚ್ ಮಾಡಿ ರಾತ್ರಿ 2 ಗಂಟೆವರೆಗೂ ಕೂರಿಸಿಕೊಂಡ್ರು. ಆಮೇಲೆ ನೀವು ಹೋಗಬಹುದು ಅಂದ್ರು. ಏನೋ ಐತಿ ಅಂತ ಬಂದ್ರು; ನಾವೆಲ್ಲಾ ದಾಸೋಹಕ್ಕ ಇರೋ ಮಂದಿ. ನಮ್ಮದು ಖಾಲಿ ಕಂಪನಿ ಅಂತಾ ಗೊತ್ತಾಗಿ ಅವರು... (ಅಧಿಕಾರಿಗಳು) ಪಶ್ಚಾತ್ತಾಪಪಟ್ರು ’ ಎಂದು ಸಿ.ಎಂ.ಇಬ್ರಾಹಿಂ ಚಟಾಕಿ ಹಾರಿಸಿದರು.

ಪಾರಸ್‌ಮಲ್ ಜೈನ್ ಅವರ ಹುಬ್ಬಳ್ಳಿ ನಿಆವಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.