ADVERTISEMENT

ಖಾಸಗಿ ವಿವಿ ಮಸೂದೆಗೆ ತೀವ್ರ ಆಕ್ಷೇಪ

ನೂರಾರು ಕೋಟಿ ರೂಪಾಯಿ ಅವ್ಯವಹಾರ; ಲಾಬಿ-ಆರೋಪ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಸುವರ್ಣ ವಿಧಾನಸೌಧ(ಬೆಳಗಾವಿ): ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅವಕಾಶ ಕಲ್ಪಿಸುವ ಮಸೂದೆಗಳನ್ನು ಚರ್ಚೆಗೆ ಅವಕಾಶವಿಲ್ಲದೇ ಅಂಗೀಕರಿಸಿದ ಸರ್ಕಾರದ ಕ್ರಮವನ್ನು ಖಂಡಿಸಿದ ವಿರೋಧ ಪಕ್ಷಗಳ ಮುಖಂಡರು, ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗಳಿಗೆ ಅಂಕಿತ ಹಾಕದಂತೆ ಒತ್ತಾಯಿಸುವುದಾಗಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳನ್ನು  ಮಂಡಿಸಲು ಮುಂದಾದಾಗ ಅದನ್ನು ಆಕ್ಷೇಪಿಸಿ ಸಭೆಯನ್ನು ಬಹಿಷ್ಕರಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡು ದಿನಗಳಲ್ಲಿ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಮೇಲ್ಮನೆಯ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, `ಶಾಸನ ರೂಪಿಸುವಾಗ ಪ್ರತಿಯೊಂದು ಅಂಶದ ಬಗ್ಗೆಯೂ ಸಮಗ್ರವಾಗಿ  ಚರ್ಚಿಸಬೇಕು. ಎರಡು ದಿನ ಮುಂಚಿತವಾಗಿಯೇ ಮಸೂದೆಗಳ ಪ್ರತಿ ನೀಡಬೇಕು. ಆದರೆ ಹಾಗೆ ಮಾಡದೇ ಅಧಿವೇಶನ ಕೊನೆಯ ದಿನ ತರಾತುರಿಯಲ್ಲಿ ಅವುಗಳನ್ನು ಅಂಗೀಕರಿಸಿರುವುದರ ಹಿಂದಿನ ಉದ್ದೇಶವೇನು?' ಎಂದು ಪ್ರಶ್ನಿಸಿದರು.

ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳನ್ನು ಅವಸರದಲ್ಲಿ ಅಂಗೀಕರಿಸುತ್ತಿರುವುದರ ಹಿಂದೆ ಬಹು ದೊಡ್ಡ ಲಾಬಿ ನಡೆದಿದೆ. ಈಗಾಗಲೇ ಕೇಂದ್ರ ಸರ್ಕಾರ ಆರು ವಿ.ವಿಗಳ ಗುಣಮಟ್ಟ ಸರಿಯಿಲ್ಲ ಎಂದು ಹೇಳಿದೆ. ಅಂತಹ ನಾಲ್ಕು ವಿ.ವಿಗಳು ರಾಜ್ಯ ಸರ್ಕಾರ ಅನುಮತಿ ನೀಡಲಿರುವ ಹೊಸ ವಿ.ವಿಗಳ ಪಟ್ಟಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಸರ್ಕಾರ ಅಸ್ಥಿರತೆಯಲ್ಲಿದೆ. ಸದನದಲ್ಲಿ ಈ ಮಸೂದೆ ಈಗಲೇ ಅಂಗೀಕಾರಗೊಂಡರೆ `ವ್ಯವಹಾರ' ನಡೆಸಿದ್ದು ಕೂಡ ಸಾರ್ಥಕವಾಗುತ್ತದೆ. ಇದರಲ್ಲಿ ಸುಮಾರು 100 ಕೋಟಿ ರೂಪಾಯಿಗಳ ಲಾಬಿ ನಡೆದಿದೆ, ಸರ್ಕಾರ  ಈ ಲಾಬಿಯಲ್ಲಿ ಶಾಮೀಲಾಗಿದೆ' ಎಂದು ಆರೋಪಿಸಿದರು.

`ಸದನದಲ್ಲಿ ನಮ್ಮ ಅನುಪಸ್ಥಿತಿಯಲ್ಲಿ ಸಂಖ್ಯಾಬಲದ ಮೇಲೆ ಸರ್ಕಾರ ಈ ಮಸೂದೆಗೆ ಒಂದು ವೇಳೆ ಅಂಗೀಕಾರ ಪಡೆದರೂ ಮುಂದಿನ ಚುನಾವಣೆ ಬಳಿಕ ಬರುವ ಬಿಜೆಪಿಯೇತರ  ಸರ್ಕಾರಕ್ಕೆ ನಾವು ಬೆಂಬಲ ನೀಡಿ ಈ ಮಸೂದೆಗಳನ್ನು ರದ್ದು ಪಡಿಸಲು ಮುಂದಾಗುತ್ತೇವೆ. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಮಾಡಿಕೊಳ್ಳುತ್ತೇವೆ' ಎಂದರು.

ಬಸವರಾಜ ಹೊರಟ್ಟಿ ಮಾತನಾಡಿ, ಬಿಜೆಪಿಯವರು ತಮ್ಮ ವ್ಯವಹಾರ ಮುಂದುವರಿಸಿಕೊಂಡು ಹೋಗುವುದಕ್ಕೋಸ್ಕರವೇ ಹೊಸ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಲು ಮುಂದಾಗಿದೆ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.