ADVERTISEMENT

ಖಾಸಗಿ ಶಾಲೆಗಳು ಮಾಹಿತಿ ನಿರಾಕರಿಸಿದರೆ ದಂಡ

ಸುಚೇತನಾ ನಾಯ್ಕ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಬೆಂಗಳೂರು: ಸರ್ಕಾರದಿಂದ ಅನುದಾನ ಪಡೆಯುತ್ತಿದ್ದರೂ `ನಾವು ಖಾಸಗಿ ಕಾಲೇಜುಗಳು, ನಮ್ಮ ಕಾಲೇಜಿನ ಮಾಹಿತಿ ಜನರಿಗೆ ಏಕೆ ನೀಡಬೇಕು?~ ಎಂದು ಇನ್ನು ಮುಂದೆ ಖಾಸಗಿ ಕಾಲೇಜುಗಳು ಪ್ರಶ್ನಿಸುವುದು ಸುಲಭವಲ್ಲ. ಈ ರೀತಿಯ ಪ್ರಶ್ನೆಗೆ ಭಾರಿ ಪ್ರಮಾಣದ ದಂಡ ತೆರಬೇಕಾದೀತು!

-ಇದು ಮಾಹಿತಿ ಆಯೋಗದ ಆದೇಶ ನೀಡಿರುವ ಎಚ್ಚರಿಕೆ. ಇಂತಹ ಕಾಲೇಜುಗಳು ಕೂಡ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ, ಮಾಹಿತಿ ಬಯಸುವ ಜನರಿಗೆ ಅದನ್ನು ನಿಗದಿತ ಅವಧಿಯಲ್ಲಿಯೇ ನೀಡುವುದು ಕಡ್ಡಾಯ ಎಂದು ಮಹತ್ವದ ಆದೇಶವೊಂದು ಆಯೋಗದಿಂದ ಹೊರಟಿದೆ.

ಎಚ್.ಸಿ. ಹಾದಿಮನಿ ಎನ್ನುವವರು ಕೇಳಿರುವ ಮಾಹಿತಿಯನ್ನು ನೀಡಲು ನಿರಾಕರಿಸಿ, ನಂತರ ಷೋಕಾಸ್ ನೋಟಿಸ್ ನೀಡಿದ ನಂತರ ಅದನ್ನು ನೀಡಿದ ಕಾರಣಕ್ಕೆ ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ ಎಸ್.ಶೆಟ್ಟರ್ ಅವರಿಗೆ 30 ಸಾವಿರ ರೂಪಾಯಿ ದಂಡ ವಿಧಿಸಿ ಆಯೋಗದ ಆಯುಕ್ತ ಡಿ.ತಂಗರಾಜು ಅವರು ಆದೇಶಿಸಿದ್ದಾರೆ. ಈ ಹಣವನ್ನು ಅವರು ಅವರ ಜೇಬಿನಿಂದ ನೀಡುವಂತೆ ಆದೇಶಿಸಲಾಗಿದೆ. ಇದರ ಜೊತೆಗೆ, ಮಾಹಿತಿ ನೀಡದೆ ಅರ್ಜಿದಾರರಿಗೆ ಸತಾಯಿಸಿದ ಕಾರಣ, ಅವರಿಗೆ 18 ಸಾವಿರ ರೂಪಾಯಿ ದಂಡ ನೀಡುವಂತೆ ಕಾಲೇಜಿಗೆ ನಿರ್ದೇಶಿಸಲಾಗಿದೆ. ಇಷ್ಟೊಂದು ಪ್ರಮಾಣದ ದಂಡ ಹಾಗೂ ಪರಿಹಾರ ವಿಧಿಸಿರುವ ಪ್ರಥಮ ಪ್ರಕರಣ ಇದಾಗಿದೆ.

ಪ್ರಕರಣದ ವಿವರ: ಈ ಕಾಲೇಜಿನಿಂದ ಹಾದಿಮನಿ ಅವರು ವಿವಿಧ ಆರು ಮಾಹಿತಿ ಕೇಳಿ ಆರು ಪ್ರತ್ಯೇಕ ಅರ್ಜಿಗಳನ್ನು 2010ರ ಏಪ್ರಿಲ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದರು. ಈ ಕಾಲೇಜಿನಲ್ಲಿ ಪರೀಕ್ಷಾ ಮೇಲ್ವಿಚಾರಕರ ಹುದ್ದೆಗೆ ಇರುವ ಅರ್ಹತೆಗಳು ಏನು, 2009ರಲ್ಲಿ ನಡೆದಿರುವ 4ನೇ ಸೆಮಿಸ್ಟರ್ ಪರೀಕ್ಷೆಗೆ ಸಂಬಂಧಿಸಿದಂತೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಎಷ್ಟು, ಉಪನ್ಯಾಸಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಎಷ್ಟು ಎಂಬ ಮಾಹಿತಿ ಸೇರಿದಂತೆ ಒಟ್ಟು ಆರು ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ, ಈ ಎಲ್ಲ ಮಾಹಿತಿಗಳನ್ನು ಕಾಲೇಜು 30 ದಿನಗಳ ಒಳಗೆ ಪೂರೈಸಬೇಕಿತ್ತು. ಆದರೆ ಕಾಲೇಜಿನಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಈ ಕುರಿತು ಆಯೋಗದಲ್ಲಿ ಹಾದಿಮನಿ ದೂರು ದಾಖಲು ಮಾಡಿದರು.

ಈ ಹಿನ್ನೆಲೆಯಲ್ಲಿ ಆಯೋಗದಿಂದ ಕಾಲೇಜು ಹಾಗೂ ಪ್ರಾಂಶುಪಾಲರಿಗೆ ಷೋಕಾಸ್ ನೋಟಿಸ್ ಜಾರಿಗೆ ಆದೇಶಿಸಲಾಗಿತು. ಈ ನೋಟಿಸ್ ಕೈಸೇರುತ್ತಲೇ, ಅರ್ಜಿದಾರರು ನೀಡಿರುವ ಮಾಹಿತಿಯನ್ನು ಕಾಲೇಜು ನೀಡಿತು. ಕಾಲೇಜಿನ ಕಟ್ಟಡ ರಿಪೇರಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ಕೇಳಿರುವ ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂಬ ಸಮಜಾಯಿಷಿ ಪ್ರಾಂಶುಪಾಲರಿಂದ ಬಂತು.

ಆದರೆ ಅರ್ಜಿದಾರರು ಆರು ಬಾರಿ ಕಾಲೇಜಿಗೆ ಭೇಟಿ ನೀಡಿರುವುದು, ನೋಟಿಸ್ ನೀಡಲು ವಕೀಲರಿಗೆ ಶುಲ್ಕ ನೀಡಿದ್ದು ಇತ್ಯಾದಿಯನ್ನು ಆಯುಕ್ತರು ಪರಿಗಣಿಸಿದರು. ಕಾಲೇಜಿನಿಂದ ಕರ್ತವ್ಯಲೋಪ ಆಗಿದೆ ಎಂದು ಅಭಿಪ್ರಾಯಪಟ್ಟ ಅವರು ಈ ಆದೇಶ ಹೊರಡಿಸಿದ್ದಾರೆ.

 ಪ್ರತಿಯೊಂದು ಅರ್ಜಿಗೆ 5 ಸಾವಿರ ರೂಪಾಯಿ ಪರಿಹಾರದಂತೆ 30 ಸಾವಿರ ಹಾಗೂ ಮೂರು ಸಾವಿರ ರೂಪಾಯಿ ದಂಡದಂತೆ ರೂ 18 ಸಾವಿರ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.