ADVERTISEMENT

ಗಡಿಯಲ್ಲಿ ಸುಜ್ಜಿಲು ಅವ್ಯಾಹತ ಲೂಟಿ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST
ಗಡಿಯಲ್ಲಿ ಸುಜ್ಜಿಲು ಅವ್ಯಾಹತ ಲೂಟಿ!
ಗಡಿಯಲ್ಲಿ ಸುಜ್ಜಿಲು ಅವ್ಯಾಹತ ಲೂಟಿ!   

ಮೈಸೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ಅಭಯಾರಣ್ಯದಿಂದ ಸುಜ್ಜಿಲು ಮರಗಳನ್ನು ತಮಿಳುನಾಡಿನ ಮಂದಿ ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯುತ್ತಿದ್ದರೂ ರಾಜ್ಯ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ.

  ಈ ಕೃತ್ಯದಿಂದಾಗಿ ಕಾವೇರಿ ಅಭಯಾರಣ್ಯದ ಗೋಪಿನಾಥಂ ವಲಯದ ಪಾಲಾರ್ ಬೀಟ್ ಅಡಿಪಾಲಾರ್ ಬೆಟ್ಟದಲ್ಲಿ ಸುಮಾರು 400ಕ್ಕೂ ಹೆಚ್ಚು ಸುಜ್ಜಿಲು ಮರಗಳು ಕೊಂಬೆಗಳಿಲ್ಲದೆ ಬೋಳು ಬೋಳಾಗಿ ಕಾಣುತ್ತಿವೆ. 

ಇನ್ನು ಕೆಲವು ಮರಗಳ ಕಾಂಡಗಳು ಮಾತ್ರ ಉಳಿದಿವೆ. ಸುಜ್ಜಿಲು ಮರದ ಎಲೆ, ಅಂಟು ಮತ್ತು ಕೊಂಬೆಗಳನ್ನು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ತಮಿಳುನಾಡಿನವರು ರಾಜ್ಯದ ಅರಣ್ಯಕ್ಕೆ ಸೇರಿದ ಸುಜ್ಜಿಲು ಮರಗಳಿಗೆ ಲಗ್ಗೆ ಇಟ್ಟಿದ್ದಾರೆ. ಈ ಕುರಿತು ಕಾವೇರಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಗ್ ಅವರನ್ನು ವಿಚಾರಿಸಿದರೆ `ಆ ಬಗ್ಗೆ ನನಗೇನೂ ಮಾಹಿತಿ ಇಲ್ಲ~ ಎನ್ನುತ್ತಾರೆ.

 ಸುಜ್ಜಿಲು ಮರದ ವೈಜ್ಞಾನಿಕ ಹೆಸರು `ಅಲ್ಬಿಝಿಯ ಅಮರ~ (ಅ್ಝಚಿಜ್ಢಿಜಿ ಞಚ್ಟ). ಇದು ಬಹುಉಪಯೋಗಿ ಮರ.ಈ ಮರದ ಎಲೆಯ ಪುಡಿಯನ್ನು ಸೀಗೆಪುಡಿಯಂತೆ ಸ್ನಾನಕ್ಕೆ ಬಳಸಲಾಗುತ್ತದೆ. ಮರದ ಎಲೆಯಲ್ಲಿ ಇರುವ `ಸಪೊನಿನ್~(ಖಟ್ಞಜ್ಞಿ) ಎಂಬ ರಾಸಾಯನಿಕಕ್ಕೆ ಜಿಡ್ಡು ಹಾಗೂ ಕೊಳೆಯನ್ನು ಸ್ವಚ್ಛಗೊಳಿಸುವ ಗುಣ ಇದೆ. ಜವಳಿ ಉದ್ಯಮದಲ್ಲಿ ನೈಸರ್ಗಿಕ ಬಣ್ಣಕ್ಕೂ ಈ ಮರದ ಉತ್ಪನ್ನವನ್ನು ಬಳಸಲಾಗುತ್ತಿದೆ.ಮರದಿಂದ ಒಸರುವ ಅಂಟಿಗೆ ಸಿಹಿ ಸೇರಿಸಿ ಕೆಲವು ಆಹಾರ ಪದಾರ್ಥಗಳಲ್ಲೂ ಬಳಸಲಾಗುತ್ತದೆ. ಮರದ ಕೊಂಬೆಯನ್ನು ಇಟ್ಟಿಗೆ ಸುಡಲು ಸಹ ಬಳಸಲಾಗುತ್ತದೆ.

  ರಾಜ್ಯದ ಅಡಿಪಾಲಾರ್ ಬೆಟ್ಟ ಮತ್ತು ತಮಿಳುನಾಡಿನ ಕಾರಕಾಡು ಹಾಗೂ ಗೋವಿಂದಪಾಡಿ ನಡುವೆ ಕಾವೇರಿ ನದಿ ಹರಿಯುತ್ತಿದೆ. ಕಾರಕಾಡು ಹಾಗೂ ಗೋವಿಂದಪಾಡಿಯಲ್ಲಿ ಸುಜ್ಜಿಲು ಪುಡಿ, ಆ ಮರದ ಅಂಟು ಬಳಕೆಗೆ ಸಂಬಂಧಿಸಿದ ಹಲವು ಗುಡಿ ಕೈಗಾರಿಕೆಗಳಿವೆ. ಅಲ್ಲದೇ ಇಟ್ಟಿಗೆ ತಯಾರಿಸುವ ತಾಣಗಳು ಹೆಚ್ಚಾಗಿವೆ. ಅಲ್ಲಿನ ಬೇಡಿಕೆಗಳನ್ನು ಪೂರೈಸಲು ರಾಜ್ಯದ ಅರಣ್ಯ ಸಂಪತ್ತನ್ನು ತಮಿಳುನಾಡಿನ ಜನರು ಲೂಟಿ ಮಾಡುತ್ತಿದ್ದಾರೆ.

 ಒಂದು ಬಾರಿಗೆ 15ರಿಂದ 20 ಮಂದಿ ಕಾವೇರಿ ನದಿ ದಾಟಿ ಬಂದು ಅಡಿಪಾಲಾರ್ ಬೆಟ್ಟ ಹತ್ತುತ್ತಾರೆ. ಬೆಟ್ಟದಿಂದ ಮರದ ಎಲೆ ಹಾಗೂ ಕೊಂಬೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಿ ಕಾವೇರಿ ನದಿ ದಡದಿಂದ ತೆಪ್ಪದಲ್ಲಿ ತಮಿಳುನಾಡು ಗಡಿಗೆ ದಾಟಿಸುತ್ತಿದ್ದಾರೆ.

`ಅಡಿಪಾಲಾರ್ ಬೆಟ್ಟದಲ್ಲಿ ಕಾಡಾನೆಗಳಿಗೆ ಉತ್ತಮ ಆಹಾರ ಹಾಗೂ ನೀರು ಲಭ್ಯವಿದೆ. ಇದು ಆನೆಗಳ ಅತ್ಯುತ್ತಮ ಆವಾಸ ಸ್ಥಾನವೂ ಹೌದು. ಲೂಟಿಗಾರರ ಹಾವಳಿಯಿಂದ ಬೆಟ್ಟದಲ್ಲಿ ಆನೆಗಳಿಗೂ ಕಿರಿಕಿರಿ ತಪ್ಪಿದ್ದಲ್ಲ~ ಎನ್ನುತ್ತಾರೆ ಸ್ಥಳೀಯ ರಾಮಪುರ ಗ್ರಾಮ ಪಂಚಾಯಿತಿ ಸದಸ್ಯೆ ಮುತ್ತುರಾಜಮ್ಮ.

ತಮಿಳರ ಈ ಚಟುವಟಿಕೆ ನಡೆಯುವುದು ಮುಂಗಾರು ಅವಧಿಯಲ್ಲೇ ಹೆಚ್ಚು. ಏಕೆಂದರೆ ಮಳೆಯ ಕಾರಣ ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದ ಕಡೆಗೆ ಅಷ್ಟಾಗಿ ಸುಳಿಯುವುದಿಲ್ಲ. ಹಾಗಾಗಿ ತಮಿಳುನಾಡಿನ ಉದ್ಯಮಕ್ಕೆ ರಾಜ್ಯದ ಸಂಪನ್ಮೂಲ ಬಳಕೆಯಾಗುತ್ತಿದೆ. ಈ ಮೂಲಕ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಉತ್ಪನ್ನಗಳನ್ನು ಬಳಸುವವರು ಅವರೇ. ಲಾಭ ಪಡೆಯುವವರು ಅವರೇ. ರಾಜ್ಯಕ್ಕೆ ಉಳಿದಿರುವುದು ಸಂಪನ್ಮೂಲ ನಷ್ಟ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.