ನವದೆಹಲಿ: ಅದಿರು ಗಣಿಗಳ ಸಮೀಕ್ಷೆ ಕಾರ್ಯವನ್ನು ರಾಜ್ಯ ಸರ್ಕಾರದ ಸಹಕಾರ ಪಡೆದು ತ್ವರಿತವಾಗಿ ಪೂರ್ಣಗೊಳಿಸುವಂತೆ ಗಣಿ ಸಚಿವಾಲಯವು `ಇಂಡಿಯನ್ ಬ್ಯುರೊ ಆಫ್ ಮೈನ್ಸ್~ (ಐಬಿಎಂ)ಗೆ ಸೂಚಿಸಿದೆ.
ಭಾರತೀಯ ಗಣಿ ಮಂಡಳಿಯ (ಐಬಿಎಂ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣಿ ಸಚಿವಾಲಯದ ಕಾರ್ಯದರ್ಶಿ ವಿಶ್ವಪತಿ ತ್ರಿವೇದಿ ಅವರು ಅದಿರು ಗಣಿ ಸಮೀಕ್ಷೆ ಕಾರ್ಯವನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. `ಗಣಿ ಕಂಪೆನಿಗಳು ತಮ್ಮ ಗುತ್ತಿಗೆ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿವೆಯೇ~ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ರಾಶಿ ಮತ್ತು ಅತಿಕ್ರಮಣ ಪ್ರದೇಶದ ಬಗ್ಗೆ ಪರಿಶೀಲಿಸಬೇಕೆಂದು ಐಬಿಎಂ ಅಧಿಕಾರಿಗಳಿಗೆ ಅವರು ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ, ಅದಿರು ಅಗತ್ಯ ಪೂರೈಸಲು ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಿಸಬೇಕೆಂದು ಉಕ್ಕು ಉದ್ಯಮಗಳು ಗಣಿ ಸಚಿವಾಲಯದ ಮೇಲೆ ಒತ್ತಡ ಹೇರುತ್ತಿವೆ. ಈಗ ಸರ್ಕಾರಿ ಸ್ವಾಮ್ಯದ `ಎನ್‌ಎಂಡಿಸಿ~ಗೆ ಅದಿರು ಹೊರತೆಗೆದು ಮಾರಾಟ ಮಾಡುವ ಹೊಣೆ ವಹಿಸಲಾಗಿದೆ.
`ಐಬಿಎಂ ಅನುಮೋದನೆ ನಂತರ ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭ ಸಾಧ್ಯ~ ಎಂದು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗಣಿ ಸಚಿವಾಲಯಕ್ಕೆ ಈಗಾಗಲೇ ಪತ್ರ ಬರೆದು ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್‌ನ ಏಪ್ರಿಲ್ 13ರ ನಿರ್ದೇಶನದನ್ವಯ ರಾಜ್ಯದ ಮೂರು ಜಿಲ್ಲೆಗಳ 50 ಹೆಕ್ಟೇರ್ ಮತ್ತು ಹೆಚ್ಚು ವಿಸ್ತೀರ್ಣದ ಗಣಿಗಳ ಪುನರುಜ್ಜೀವನ-ಪುನರ್ವಸತಿ ಯೋಜನೆಯನ್ನು ರಾಜ್ಯ ಸರ್ಕಾರ `ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ)~ ನೆರವಿನಿಂದ ಸಿದ್ಧಪಡಿಸುತ್ತಿದ್ದು, ಸಿಇಸಿ ಉಸ್ತುವಾರಿಯಲ್ಲಿ ಅನುಷ್ಠಾನಗೊಳಿಸಲಿದೆ.
ರಾಜ್ಯದಲ್ಲಿ ಮಂಜೂರಾಗಿರುವ ಬಹುತೇಕ ಗಣಿ ಗುತ್ತಿಗೆಗಳ ಅವಧಿ ಮುಗಿದಿದೆ. ಇಲ್ಲವೆ ಮುಗಿಯುವ ಹಂತದಲ್ಲಿವೆ. ಈ ಗಣಿ ಗುತ್ತಿಗೆಗಳ ಮುಂದಿನ ಯೋಜನೆಗೆ ಐಬಿಎಂ ಅನುಮೋದನೆ ನೀಡಿದ ಬಳಿಕ ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ದೊರೆಯಲಿದೆ ಎಂದು ಸಿಇಸಿ ಪತ್ರದಲ್ಲಿ ವಿವರಿಸಿದೆ. ರಾಜ್ಯದ ಗಣಿ ಗುತ್ತಿಗೆಗಳನ್ನು ಸಿಇಸಿ ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಿದೆ.
ಎ ಗುಂಪಿನ 45 ಗುತ್ತಿಗೆಗಳಲ್ಲಿ ಯಾವುದೇ ವಿಧದ ಅಕ್ರಮಗಳು ನಡೆದಿಲ್ಲ. ಬಿ ವರ್ಗದ 72 ಗುತ್ತಿಗೆಗಳಲ್ಲಿ ಅನುಮತಿ ಪ್ರದೇಶದ ಆಚೆಗೆ ಶೇ 10ರಷ್ಟು ಅತಿಕ್ರಮಣವಾಗಿದೆ. ಸಿ ವರ್ಗದ 49 ಗುತ್ತಿಗೆಗಳಲ್ಲಿ ಭಾರಿ ಅಕ್ರಮ ನಡೆದಿವೆ. ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗಿದೆ. ಐಬಿಎಂ, ಗಣಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಗಣಿ ಗುತ್ತಿಗೆದಾರರು, ದಾಸ್ತಾನುದಾರರು, ಹಾಗೂ ವ್ಯಾಪಾರಸ್ಥರ ನೋಂದಣಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.
ದೇಶದ ಒಟ್ಟು 5931 ಗುತ್ತಿಗೆಗಳ ಪೈಕಿ 4976 ಗುತ್ತಿಗೆಗಳ ನೋಂದಣಿಯನ್ನು ಐಬಿಎಂ ಪೂರ್ಣಗೊಳಿಸಿದೆ. ಮಿಕ್ಕ ಗುತ್ತಿಗೆಗಳ ನೋಂದಣಿ ಪ್ರಗತಿಯಲ್ಲಿದೆ. ಅದಿರು ಗುತ್ತಿಗೆ ನೋಂದಣಿಗೆ ಐಬಿಎಂ ಆದ್ಯತೆ ನೀಡಿದೆ. 432 ಗುತ್ತಿಗೆಗಳಲ್ಲಿ 415ಕ್ಕೆ ನೋಂದಣಿ ಸಂಖ್ಯೆ ನೀಡಲಾಗಿದೆ. ಅನಂತರದ ಆದ್ಯತೆ ಮ್ಯಾಂಗನೀಸ್ ಗಣಿಗಳಿಗೆ. ಒಟ್ಟು 175 ಗುತ್ತಿಗೆಗಳ ಪೈಕಿ 155 ನೋಂದಣಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.