ADVERTISEMENT

ಗಣೇಶ್ವರನಿಂದ ಚೌಳಿ ಮಠದವರೆಗೂ...

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ಬೀದರ್ ತಾಲ್ಲೂಕು ಚೌಳಿ ಗ್ರಾಮದ ಗಣೇಶ್ವರ ಅವಧೂತರ ಮಠದಲ್ಲಿ ಸಹಸ್ರಲಿಂಗ ಪ್ರತಿಷ್ಠಾಪಿಸಲಾಗಿದೆ
ಬೀದರ್ ತಾಲ್ಲೂಕು ಚೌಳಿ ಗ್ರಾಮದ ಗಣೇಶ್ವರ ಅವಧೂತರ ಮಠದಲ್ಲಿ ಸಹಸ್ರಲಿಂಗ ಪ್ರತಿಷ್ಠಾಪಿಸಲಾಗಿದೆ   

ಬೀದರ್: ಗಣೇಶ್ವರ ಅವಧೂತರ ಮಠ ಎಂಬ ಹೆಸರಿದ್ದರೂ ಅದು ಗಡಿ ಜಿಲ್ಲೆ ಬೀದರ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ `ಚೌಳಿ ಮಠ' ಎಂದೇ ಜನಪ್ರಿಯ. ಮಠದ ರೂವಾರಿ ಗಣೇಶ್ವರ ಅವಧೂತರನ್ನು `ಚೌಳಿ ಮುತ್ಯಾ' ಎಂದೇ ಗುರುತಿಸಲಾಗುತ್ತಿತ್ತು. ಇವರ ಪ್ರಭಾವಕ್ಕೆ ಒಳಗಾಗಿ ಅವರ ಸೇವೆಗೆ ಮಠ ಸೇರಿಕೊಂಡವರೇ ಸಾಧಕರು.

ಈಗ ಆತ್ಮಹತ್ಯೆ ಮಾಡಿಕೊಂಡ ಮೂವರು, ನಾಪತ್ತೆ ಆಗಿರುವ ಒಬ್ಬರು ಸೇರಿ ಏಳೆಂಟು ಮಂದಿ ಸಾಧಕರು ಅಲ್ಲಿ ಇದ್ದರು. ಗಣೇಶ್ವರ ಅವಧೂತರು ಮೃತಪಟ್ಟು ಇಂದಿಗೆ 41 ದಿನ ಕಳೆದಿದ್ದರೂ, ಸಾಧಕರು `ಅಪ್ಪಾವ್ರ ಶ್ರೀಶೈಲದಲ್ಲಿ ಇದ್ದಾರೆ, ನಮ್ಮ ಜೊತೆ ಇಂದಿಗೂ ಮಾತನಾಡುತ್ತಾರೆ' ಎಂದು ನಂಬಿ ಆಪ್ತರಲ್ಲಿ ಹೇಳುವಷ್ಟು ಇವರ ಪ್ರಭಾವವಿತ್ತು.

ಸಾಧಕರ ಮೇಲಷ್ಟೇ ಅಲ್ಲ, ಭಕ್ತರ ಸಮೂಹದ ಮೇಲೂ ತಮ್ಮದೇ ಆದ ಪ್ರಭಾವವನ್ನು ಹಿರಿಯ ಸ್ವಾಮೀಜಿ ಹೊಂದಿದ್ದರು. ಭಕ್ತ ವರ್ಗ ಜಿಲ್ಲೆ, ನೆರೆಯ ಜಿಲ್ಲೆಗಳೇ ಅಲ್ಲದೇ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಇದೆ. ಸ್ವಾಮಿಗಳ ಜಿಲ್ಲೆ ಪ್ರವೇಶದ ನೆನಪಿಗೆ ಪ್ರತಿ ವರ್ಷ ನಡೆಯುವ ಆಗಮನೋತ್ಸವ, ಜಾತ್ರೆ, ಭಕ್ತರ ಮುಖಾಮುಖಿಗೆ ವೇದಿಕೆಯಾಗುತ್ತಿತ್ತು.

ಗಣೇಶ್ವರ ಅವಧೂತರ ಮೂಲ ಹೆಸರು ಗಣೇಶ್ವರ. ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗುಗುವಾಡ ಗ್ರಾಮದವರು. ಸನ್ಯಾಸಾಶ್ರಮಕ್ಕೆ ಪ್ರವೇಶಿಸುವ ಮುನ್ನ ಮದುವೆಯಾಗಿದ್ದರು. ಪತ್ನಿ, ಮಗ, ತಾಯಿ ಈಗಲೂ ಗುಗುವಾಡದಲ್ಲಿ ಇದ್ದಾರೆ.

1989ರಲ್ಲಿ ಬೀದರ್ ಜಿಲ್ಲೆಗೆ ಅವರ ಪ್ರವೇಶವಾಯಿತು. ಆಗ, ಸ್ವಾಮೀಜಿಯವರದು ಎಂದು ಹಿಡಿಯಷ್ಟೂ ಭೂಮಿ ಇರಲಿಲ್ಲ. ಇಷ್ಟು ವರ್ಷಗಳ ಬಳಿಕ ಬೀದರ್ ನಗರ ಕೇಂದ್ರದಿಂದ ಎಂಟು ಕಿ.ಮೀ. ದೂರದ ಚೌಳಿ ಮಠದ ಬಳಿ ಸುಮಾರು 8 ಎಕರೆ ಭೂಮಿಯಲ್ಲಿ ಗಣೇಶ್ವರ ಅವಧೂತರ ಮಠ ವ್ಯಾಪಿಸಿದೆ. ಭಕ್ತರೂ ಇದ್ದಾರೆ.

ಮಠದ ಭಕ್ತರು, ಸಾಧಕರ ಮಾತುಗಳನ್ನು ಆಧರಿಸುವುದಾದರೆ ಸ್ವಾಮೀಜಿಯವರ ಗಡಿ ಪ್ರವೇಶ ಆದುದು ಹೀಗೆ. ಬಹುಶಃ 1989ರ ದಶಕದ ದ್ವಿತೀಯಾರ್ಧದಲ್ಲಿ ಸನ್ಯಾಸಾಶ್ರಮ ಪ್ರವೇಶಿಸುವ ಗುರಿಯಿಂದ ಗೃಹಸ್ಥಾಶ್ರಮ ತೊರೆದು ಶ್ರೀಶೈಲಕ್ಕೆ ತೆರಳಿದ್ದರು. ಅಲ್ಲಿ  ತಪಸ್ಸು ಮಾಡಿ, ಜನಸೇವೆಯ ಸಂಕಲ್ಪದಲ್ಲಿ ನೆಲೆಸಿದ್ದರು.

ಅದೇ ವೇಳೆಗೆ ಮೂಲತಃ ಚೌಳಿ ಗ್ರಾಮದವರಾದ ನಿವೃತ್ತ ಪೊಲೀಸ್ ಅಧಿಕಾರಿ ದಿವಂಗತ ಸಂಗಯ್ಯ ಸ್ವಾಮಿ ಶ್ರೀಶೈಲಕ್ಕೆ ತೆರಳಿದ್ದರು. ಅವರಿಗೆ ಸ್ವಾಮೀಜಿ ಮುಖಾಮುಖಿ ಆಗಿತ್ತು.  ಪರಿಚಯದ ಬಳಿಕ `ನೀವು ನಮ್ಮೂರಿಗೆ ಬನ್ನಿ. ಸ್ಥಳ ಒದಗಿಸುತ್ತೇವೆ. ಜನಸೇವೆ ಮಾಡಿಕೊಂಡು ಇರಿ' ಎಂದು ಕರೆತಂದರು.

ಹಾಗೆ ಬಂದವರು ಚೌಳಿ ಗ್ರಾಮದಲ್ಲಿ ಸಂಗಯ್ಯ ಸ್ವಾಮಿ ಅವರಿಗೆ ಸೇರಿದ ಭೂಮಿಯಲ್ಲಿ ವಾಸ್ತವ್ಯ ಹೂಡಿದರು. ದಿನ ಕಳೆದಂತೆ, ಸ್ವಾಮೀಜಿ ಜನ ಸಮೂಹದಲ್ಲಿ ಪರಿಚಿತರಾಗುತ್ತಾ ಹೋದರು. ಇತ್ತ, ಅವರ ಆವಾಸ ಸ್ಥಾನವು ವಿಸ್ತಾರ ಆಗುತ್ತಾ ಹೋಯಿತು. ಸ್ವಾಮೀಜಿ ಸೇವೆಗೆ ಸಾಧಕರು ಸೇರಿಕೊಂಡರು. ಗಣೇಶ್ವರರು ಸನ್ಯಾಸಾಶ್ರಮ ಪ್ರವೇಶಿಸಿ ಗಣೇಶ್ವರ ಅವಧೂತರಾಗಿ ಬದಲಾಗಿದ್ದರೂ, ಮಠ ಮಾತ್ರ ಊರಿನ ಹೆಸರನ್ನೇ ಥಳಕು ಹಾಕಿಕೊಂಡು `ಚೌಳಿ ಮಠ' ಎಂದೇ ಹೆಸರು ಪಡೆಯಿತು.

ಮಠದ ಆವರಣ ತುಂಬಾ ಪ್ರತಿಮೆಗಳೇ: ಸ್ವಾಮೀಜಿಯವರೇ ಸ್ವತಃ ಭಗವಂತ, ಅವರ ಅವತಾರ ಎಂಬ ನಂಬಿಕೆ ಸಾಧಕರಲ್ಲಿ, ಕೆಲ ಭಕ್ತರಲ್ಲಿ ಬೇರೂರಿತ್ತು. ಪರಿಣಾಮ, ಮಠದ ಆವರಣದಲ್ಲಿ ಸ್ವಾಮೀಜಿಯ ಮೂರ್ತಿಗಳೇ ಕಾಣಿಸುತ್ತವೆ.

ಮಠದ ಆವರಣದಲ್ಲಿ ಸುಮಾರು 40 ಅಡಿ ಎತ್ತರದ, ಸ್ವಾಮೀಜಿ ನಿಂತು ಆಶೀರ್ವಾದ ಮಾಡುತ್ತಿರುವ ಭಂಗಿಯ ಪ್ರತಿಮೆ ಇದೆ. ಮಠದ ಪ್ರವೇಶ ದ್ವಾರದ ಗೋಪುರದಲ್ಲೇ ಸ್ವಾಮೀಜಿ ಅವರ 35 ಕಿರು ಪ್ರತಿಮೆಗಳಿವೆ. ಮಠದ ಆವರಣದಲ್ಲಿ ಸಹಸ್ರ ಲಿಂಗ ಪ್ರತಿಷ್ಠಾಪಿಸಲಾಗಿದೆ. ನೃತ್ಯದ ಭಂಗಿಯ ಅರ್ಧನಾರೀಶ್ವರನ ಪ್ರತಿಮೆ ಇದೆ. ಸ್ವಾಮೀಜಿ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಉಪನ್ಯಾಸ ನೀಡಿದ, ಭಕ್ತರ ಜೊತೆಗೆ ಮುಖಾಮುಖಿ ಆಗಿದ್ದರು. ಮಠದಲ್ಲಿಯೂ ಗರ್ಭಗುಡಿಯಿಂದ ಈಚೆಗೆ ಬಂದಾಗ ಭಕ್ತರಿಗೆ ದರ್ಶನ ಮಾಡುತ್ತಿದ್ದರು, ಮಾತನಾಡುತ್ತಿದ್ದರು. ಇಲ್ಲವಾದರೆ, ಕಬ್ಬಿಣದ ಸರಳುಗಳ ಜಾಲರಿಯ ಆಚೆಗೆ ನಿಂತು ಒಳಗೆ ಪ್ರತಿಷ್ಠಾಪಿಸಲಾಗಿದ್ದ ಸ್ವಾಮೀಜಿ ಬೃಹತ್ ಭಾವಚಿತ್ರಕ್ಕೆ ನಮಿಸಿ ಧನ್ಯತೆ ಪಡೆಯುತ್ತಿದ್ದರು.
ಭಕ್ತರೊಂದಿಗೆ ಮಾತನಾಡುವಾಗಲೂ `ಬದುಕು ಶಾಶ್ವತ ಅಲ್ಲ, ಭಗವಂತನ ಸೇವೆ ಮಾಡಿ. ಸತ್ಯ ಹೇಳಲು ಹೆದರಬೇಡಿ. ಭಗವಂತನಿಗೆ ಹತ್ತಿರವಾಗಿ' ಎಂದು ಉಪದೇಶ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT