ADVERTISEMENT

‘ಗಾಂಧಿ, ಜಿನ್ನಾ ಪ್ರಧಾನಿಯಾಗಬೇಕಿತ್ತು’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
‘ಗಾಂಧಿ, ಜಿನ್ನಾ ಪ್ರಧಾನಿಯಾಗಬೇಕಿತ್ತು’
‘ಗಾಂಧಿ, ಜಿನ್ನಾ ಪ್ರಧಾನಿಯಾಗಬೇಕಿತ್ತು’   

ಮೈಸೂರು: ಸ್ವಾತಂತ್ರ್ಯ ಬಂದ ನಂತರ ಮಹಾತ್ಮ ಗಾಂಧಿ ಪ್ರಧಾನಿ ಆಗಬೇಕಿತ್ತು. ಇಲ್ಲವೆ ಗಾಂಧಿ ತತ್ವ ಅರಗಿಸಿಕೊಂಡಿದ್ದ ಮೊಹಮ್ಮದಾಲಿ ಜಿನ್ನಾ ಪ್ರಧಾನಿ ಆಗಬೇಕಿತ್ತು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಇಲ್ಲಿ ಶನಿವಾರ ಅಭಿಪ್ರಾಯಪಟ್ಟರು.

ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

1975ರಲ್ಲಿ ಇಂದಿರಾ ಗಾಂಧಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಮೆರೆದರು. ಪ್ರಜಾಸತ್ತೆಯ ಹೆಸರಿನಲ್ಲಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಕಾಣುತ್ತಿದ್ದೇವೆ. ಸದ್ಯ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕುವೆಂಪು ಅವರ ನಾಡಗೀತೆ ‘ಭಾರತ ಜನನಿಯ ತನುಜಾತೆ’ ಹಾಗೂ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಸಾಲುಗಳನ್ನು ಹಾಡುವಾಗ ನಾಲಿಗೆ ತಡವರಿಸುತ್ತಿದೆ. ಏಕೆಂದರೆ, ಬಲಾಢ್ಯ ಮಕ್ಕಳನ್ನು ಪುಸಲಾಯಿಸುವ, ಬಲಾಢ್ಯವಲ್ಲದ ಮಕ್ಕಳನ್ನು ತುಳಿಯುವುದು ನಡೆಯುತ್ತಿದೆ. ಇದಕ್ಕೆ ಮಹದಾಯಿ ಯೋಜನೆ ಉತ್ತಮ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ವಿವಾದವನ್ನು ಒಂದೇ ದಿನದಲ್ಲಿ ಬಗೆಹರಿಸಬಹುದು. ಆದರೆ ಆ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಈಗ ರಕ್ತ ಕಾಣುತ್ತಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯಾಯಿತು. ಈಚೆಗೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಯಿತು. ಶಾಂತಿಯ ತೋಟ ಎಲ್ಲಿದೆ ಎಂದು ಪ್ರಶ್ನಿಸಿದರು.

ಕುವೆಂಪು ಮಾನವತಾವಾದಿಯಾಗಿ ಬೆಳೆದರು. ಆದರೆ, ಬೇಂದ್ರೆ ಅವರು ಜಾತಿ ಹಿಡಿದುಕೊಂಡು ಸಣ್ಣವರಾದರು. ಹೀಗಾಗಿ, ಬೇಂದ್ರೆ ದೊಡ್ಡ ಕವಿಯಾದರೂ ಸಣ್ಣ ಮನುಷ್ಯ ಎಂದು ಟೀಕಿಸಿದರು.

ಸಮ್ಮೇಳನಗಳು ಆಗಬೇಕು: ಸಾಹಿತಿ ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎನ್ನುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು. ನಾಡು–ನುಡಿ ಸಮಸ್ಯೆ  ಚರ್ಚಿಸಲು ಸಮ್ಮೇಳನಗಳು ನಿರಂತರವಾಗಿ ಆಗಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

***

ಉಡುಪಿಯ ಪೇಜಾವರ ಸ್ವಾಮೀಜಿ ವಿಕ್ಷಿಪ್ತ, ವಿಚಿತ್ರ ಎಂದು ಚಂಪಾ ಹೇಳಿದರು.

ಪೇಜಾವರ ಸ್ವಾಮೀಜಿ ಪ್ರತಿ ವರ್ಷ ಪತ್ರ ಬರೆಯುತ್ತಾರೆ, ಫೋನ್‌ ಮಾಡುತ್ತಾರೆ. ಆತ್ಮೀಯ ಚಂಪಾ, ನಾರಾಯಣ ಸ್ಮರಣೆ ಎಂದು ಪತ್ರ ಬರೆಯುತ್ತಾರೆ. ಅವರಿಗೆ ನಾನು ಪತ್ರ ಬರೆಯುವಾಗ ಶಂಭೂಕ ಸ್ಮರಣೆಗಳು ಎಂದು ಉಲ್ಲೇಖಿಸುವೆ ಎಂದರು.

ಮಠಗಳಿಂದ ದೂರ ಇರುವ ನಾನು, ನಾಡಿನ ಮೂರು ಮಠಗಳಿಗೆ ಮಾತ್ರ ಹೋಗುತ್ತೇನೆ. ಗದುಗಿನ ತೋಂಟದಾರ್ಯ ಮಠ, ಸುತ್ತೂರು ಮಠ ಹಾಗೂ ಉಡುಪಿಯ ಪೇಜಾವರ ಮಠದೊಂದಿಗೆ ನಂಟಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.