ADVERTISEMENT

ಗಿನ್ನಿಸ್ ದಾಖಲೆ ಗುರಿ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಹುಬ್ಬಳ್ಳಿ: ಕಲಿತದ್ದು ಹೋಮಿಯೋಪಥಿ ವೈದ್ಯಕೀಯ; ಟೈರ್ ರಿಟ್ರೇಡಿಂಗ್ ವೃತ್ತಿ. ಚುನಾವಣೆ ಬಂದಾಗಲೆಲ್ಲಾ ಗಣ್ಯಾತೀಗಣ್ಯರ ವಿರುದ್ಧ ನಾಮಪತ್ರ ಸಲ್ಲಿಸುವುದು ಪ್ರವೃತ್ತಿ. ಈವರೆಗೆ ಬರೋಬ್ಬರಿ 146 ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೇನೆ ಎನ್ನುವ ಈ ವೈದ್ಯ, ಸಿ.ಎಂ ಜಗದೀಶ ಶೆಟ್ಟರ್ ಅಖಾಡಕ್ಕಿಳಿಯಲಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ!

ಹೆಸರು ಡಾ. ಕೆ. ಪದ್ಮರಾಜನ್, ತಮಿಳುನಾಡು ಜಿಲ್ಲೆ ಸೇಲಂ ಜಿಲ್ಲೆಯ ಅತ್ತೂರ ನಿವಾಸಿ. 1988ರಿಂದ ಸ್ಥಳೀಯ ಸಂಸ್ಥೆ, ಲೋಕಸಭೆ, ವಿಧಾನಸಭೆ, ವಿಧಾನಪರಿಷತ್ತು, ರಾಷ್ಟ್ರಪತಿ, ಉಪ ರಾಷ್ಟ್ರಪತಿ... ಹೀಗೆ ವಿವಿಧ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುತ್ತಲೇ ಬಂದಿರುವ ಅವರು, ಯಾವುದೇ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಂಡ ನಿದರ್ಶನ ಇಲ್ಲ. ಅಷ್ಟೇ ಅಲ್ಲ, ಈ ಕಾರಣಕ್ಕೆ ಸುಮಾರು ್ಙ12 ಲಕ್ಷ  ಕಳೆದುಕೊಂಡಿದ್ದಾರಂತೆ.

ನಾಮಪತ್ರ ಸಲ್ಲಿಸಿ ಮಾತನಾಡಿದ ಪದ್ಮರಾಜನ್, `25 ವರ್ಷಗಳಿಂದ ಗಣ್ಯರು ಸ್ಪರ್ಧಿಸುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತಲೇ ಬಂದಿದ್ದೇನೆ. ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ, ಅಬ್ದುಲ್ ಕಲಾಂ, ಪ್ರಧಾನಿ ಮನಮೋಹನ ಸಿಂಗ್, ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಸಿ.ಎಂ.ಗಳಾದ ಕರುಣಾನಿಧಿ, ಯಡಿಯೂರಪ್ಪ, ಸದಾನಂದ ಗೌಡ ಇತರರ ವಿರುದ್ಧ ನಾಮಪತ್ರ ಸಲ್ಲಿಸುತ್ತಲೇ ಬಂದಿದ್ದೇನೆ. ಈ ನಿಟ್ಟಿನಲ್ಲಿ ಗಿನ್ನಿಸ್ ದಾಖಲೆಯಲ್ಲಿ ಸೇರಬೇಕು ಎನ್ನುವುದು ಗುರಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.