ADVERTISEMENT

`ಗುಜ್ಜರ್' ಮದುವೆ: ಯುವತಿಯರ ಮಾರಾಟ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:41 IST
Last Updated 26 ಡಿಸೆಂಬರ್ 2012, 19:41 IST

ಹುಬ್ಬಳ್ಳಿ: `ನಸೀಬು ಛಲೋ ಇದ್ರ ಒಳ್ಳೇ ಮನೀಗೆ ಸೊಸೇರು ಆಗ್ತಾರ‌್ರಿ, ತಪ್ಪಿದ್ರ ಹಗಲು-ರಾತ್ರಿ ವ್ಯತ್ಯಾಸ ಇಲ್ದ ಮನಿಯೊಳಗ ದುಡೀಬೇಕು, ಒಬ್ಬ ಗಂಡನ್ನ ಮಾಡ್ಕೊಂಡು ಆತನ ಸಹೋದರರನ್ನೂ ಸಂಭಾಳಿಸಬೇಕು. ತಪ್ಪಿದರೆ ಮುಂಬೈ, ಪುಣೆ ಪಾಲಾಗ್ಬೇಕ್ರಿ'

ಮೂಲತಃ ಧಾರವಾಡದ ನಿವಾಸಿ ಸುಜಾತಾ (ಹೆಸರು ಬದಲಾಯಿಸಲಾಗಿದೆ)  ನಾಲ್ಕು ವರ್ಷದ ಹಿಂದೆ ಅಮ್ಮಿನಬಾವಿಯ ಮಧ್ಯವರ್ತಿಯೊಬ್ಬರ ಮೂಲಕ ರಾಜಸ್ತಾನದ ಉದಯಪುರ ಜಿಲ್ಲೆಯ ಕಟೀಶ್ವರದ ವ್ಯಕ್ತಿಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾರೆ. ಗುಜ್ಜರ್ ಮದುವೆ ನೆಪದಲ್ಲಿ ಉತ್ತರದ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡದ ಯುವತಿಯರ ಸ್ಥಿತಿಗತಿಯನ್ನು `ಪ್ರಜಾವಾಣಿ' ಜತೆ ಅವರು ಹಂಚಿಕೊಂಡಿದ್ದು ಹೀಗೆ.

`ರಾಜಸ್ತಾನದ ಗುಜ್ಜರ್ (ಗುರ್ಜರು) ಜನಾಂಗ ಸೇರಿದಂತೆ ಕೆಲವೊಂದು ಸಮುದಾಯಗಳಲ್ಲಿ ಗಂಡು-ಹೆಣ್ಣಿನ ನಡುವಿನ ಅನುಪಾತ ತೀವ್ರ ಕಡಿಮೆ ಇದೆ. ಮದುವೆಗೆ ಹೆಣ್ಣು ಸಿಗುವುದು ದುಸ್ತರ. ಇದರಿಂದ ಮದುವೆಗೆ ಹೆಣ್ಣು ಕೊಡಿಸುವಂತೆ ರಾಜ್ಯದ ಮಧ್ಯವರ್ತಿ ಜಾಲದ ಮೊರೆ ಹೋಗುತ್ತಾರೆ. ಉತ್ತರ ಕರ್ನಾಟಕ ಭಾಗದ  ಯುವತಿಯರಿಗೆ ಹೆಚ್ಚಾಗಿ ಬಲೆ ಬೀಸುವ ಮಧ್ಯವರ್ತಿಗಳು ಬಡತನ ಹಾಗೂ ಪೋಷಕರ ಅಜ್ಞಾನ ಬಂಡವಾಳವಾಗಿ ಇಟ್ಟುಕೊಂಡು ಪುಡಿಗಾಸು ಕೊಟ್ಟು ಅನಾಮಿಕರೊಂದಿಗೆ ಮದುವೆ ಮಾಡಿಸುತ್ತಾರೆ' (ಇದಕ್ಕೆ ಸ್ಥಳೀಯವಾಗಿ ಗುಜ್ಜರ್ ಮದುವೆ ಎನ್ನಲಾಗುತ್ತದೆ) ಎನ್ನುತ್ತಾರೆ.

`ಮದುವೆ ನಂತರ ಹುಡುಗ ನಿಮ್ಮ ಬಡತನ ನೀಗಿಸುತ್ತಾನೆ. ಮಗಳು ರಾಣಿಯಂತೆ ಬದುಕುತ್ತಾಳೆ ಎಂದೆಲ್ಲ ಮದುವೆಗೆ ಮುನ್ನ ಮಧ್ಯವರ್ತಿಗಳು ಯುವತಿಯರ ಪೋಷಕರಲ್ಲಿ ಕನಸುಗಳನ್ನು ಬಿತ್ತಿರುತ್ತಾರೆ. ವಾಸ್ತವವಾಗಿ ಹೀಗಿರುವುದಿಲ್ಲ' ಎಂದು ಸುಜಾತಾ ನೋವಿನಿಂದ ಹೇಳುತ್ತಾರೆ.

`ಮದುವೆ ಮಾಡಿದ ನಂತರ ಹುಟ್ಟಿದ ಊರು, ಪೋಷಕರ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ. ಮಧ್ಯವರ್ತಿಯೂ ಮರೆಯಾಗುತ್ತಾನೆ. ಜೊತೆಗೆ ಕರೆದೊಯ್ದವರು ಇಷ್ಟಪಟ್ಟಲ್ಲಿ ಮಾತ್ರ ಊರಿನ ಸಂಪರ್ಕ ಇಟ್ಟುಕೊಳ್ಳಬಹುದು. ಕದ್ದು ಮುಚ್ಚಿ ಮದುವೆ ಮಾಡುವುದರಿಂದ ಗಂಡನ ಊರಿಗೆ ತೆರಳಿದ ಮೇಲೆ ಹೆಂಡತಿಯಾಗಿ ಕಾನೂನಿನ ಹಕ್ಕುದಾರಿಕೆಯೂ ದೊರೆಯುವುದಿಲ್ಲ' ಎಂದು ಅಳಲು ತೋಡಿಕೊಳ್ಳುತ್ತಾರೆ.

`ಹೊರಗಿನವರು ಎಂಬ ಕಾರಣಕ್ಕೆ ಸ್ಥಳೀಯರು ನಮ್ಮನ್ನು ಹತ್ತಿರ ಸೇರಿಸುವುದಿಲ್ಲ. ಸ್ವತಂತ್ರ ನಿರ್ಧಾರ ಸಾಧ್ಯವಿಲ್ಲ. ಹೊಸ ಭಾಷೆ, ಸಂಸ್ಕೃತಿ, ಆಹಾರ ಕ್ರಮ, ರೀತಿ-ರಿವಾಜುಗಳಿಗೆ ಹೊಂದಿಕೊಳ್ಳಬೇಕು. ಮನೆ ಕೆಲಸ, ಜಮೀನುಗಳಲ್ಲಿ ದುಡಿಯುವುದು ಸಾಮಾನ್ಯ. ಕೆಲವೊಮ್ಮೆ ವೃಥಾ ಹಣ ಖರ್ಚು ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಗೆ ಮದುವೆ ಮಾಡಿಕೊಂಡ ಹುಡುಗಿಯನ್ನೇ ಆತನ ಸಹೋದರರೂ ಪತ್ನಿಯಾಗಿ ಬಳಕೆ ಮಾಡುತ್ತಾರೆ.

`ಅಲ್ಲಿನ ಸಂಪ್ರದಾಯಗಳಿಗೆ ಒಗ್ಗದ ಹುಡುಗಿಯರನ್ನು ಮತ್ತೆ ಮಧ್ಯವರ್ತಿಗಳಿಗೆ ಒಪ್ಪಿಸಲಾಗುತ್ತದೆ. ನಂತರ ಅವರನ್ನು ಬಲವಂತವಾಗಿ ಪುಣೆ ಅಥವಾ ಮುಂಬೈನ ಕೆಂಪುದೀಪ ಪ್ರದೇಶಕ್ಕೆ ಕರೆದೊಯ್ದು ಮಾರಾಟ ಮಾಡುತ್ತಾರೆ' ಎಂದು ಸುಜಾತಾ ಸಂಕಷ್ಟ ಬಿಚ್ಚಿಡುತ್ತಾರೆ.

ಕಟೀಶ್ವರ ಗ್ರಾಮದಲ್ಲಿಯೇ ಬೆಳಗಾವಿ ಜಿಲ್ಲೆಯ ಕಿತ್ತೂರು, ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಐವರು ಯುವತಿಯರು ಇದ್ದಾರೆ. ಉದಯಪುರ ಸುತ್ತಲಿನ ಡೋಂಗರಪುರ, ಆಗವಾಡ, ಆಕಪುರ ಗ್ರಾಮಗಳಲ್ಲಿ ಕರ್ನಾಟಕದ 30ಕ್ಕೂ ಹೆಚ್ಚು ಯುವತಿಯರು ಇದ್ದಾರೆ.

ಎಲ್ಲರೂ ಮಧ್ಯವರ್ತಿ ಜಾಲದಿಂದ ಸ್ವಂತ ಊರಿನ ಬೇರು ಕಡಿದುಕೊಂಡವರು ಎಂದು ಸುಜಾತಾ ಹೇಳುತ್ತಾರೆ.

ಮಗು ಅನಾಥಾಲಯ ಪಾಲು!: ಸುಜಾತಾ ಪೋಷಕರು ಎಂಟು ವರ್ಷಗಳ ಹಿಂದೆ ಸಂಬಂಧಿಕರ ಪೈಕಿ ಹುಡುಗನೊಟ್ಟಿಗೆ ಮಗಳ ಮದುವೆ ಮಾಡಿದ್ದರು. ದಂಪತಿಗೆ ಹೆಣ್ಣುಮಗು ಇದೆ. ಅದೊಂದು ದಿನ ಗಂಡನಾದವನು ಸುಜಾತಾಳನ್ನು ತ್ಯಜಿಸಿ ಮತ್ತೊಂದು ಮದುವೆಯಾಗಿದ್ದಾನೆ. ಅದೇ ವೇಳೆ ತಂದೆ-ತಾಯಿ ಸಾವಿಗೀಡಾದ ಕಾರಣ ದಿಕ್ಕು ಕಾಣದಾದ ಸುಜಾತಾಗೆ ಅಮ್ಮಿನಬಾವಿ ಮೂಲದ ದಂಪತಿ ನೆರವಿಗೆ ಬಂದಿದ್ದಾರೆ. ಸುಜಾತಾಳನ್ನು ರಾಜಸ್ತಾನದ ವ್ಯಕ್ತಿಗೆ ಮದುವೆ ಮಾಡಿಸಿ ಕಟೀಶ್ವರಕ್ಕೆ ಕಳುಹಿಸಿದ್ದಾರೆ. ಮೊದಲ ಮದುವೆ ವಿಚಾರ ಗೋಪ್ಯವಾಗಿಟ್ಟಿದ್ದ ಕಾರಣ ಸುಜಾತಾ ತನ್ನ ಆರು ವರ್ಷದ ಮಗಳನ್ನು ಹುಬ್ಬಳ್ಳಿಯ ಅನಾಥಾಲಯದಲ್ಲಿ ಬಿಟ್ಟು ರಾಜಸ್ತಾನಕ್ಕೆ ತೆರಳಿದ್ದಾರೆ. ಆಕೆ ಅಲ್ಲಿ ಸದ್ಯ ಗಂಡನ ಮೆಡಿಕಲ್ ಸ್ಟೋರ್‌ನಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT