ADVERTISEMENT

ಗುಟ್ಕಾ, ಪಾನ್ ಮಸಾಲಾ ನಿಷೇಧ: 14ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:41 IST
Last Updated 11 ಜೂನ್ 2013, 19:41 IST

ಧಾರವಾಡ: ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಘೋಡಾವತ್ ಪಾನ್ ಮಸಾಲಾ ತಯಾರಿಕಾ ಕಂಪೆನಿ ಸೇರಿದಂತೆ ಮೂರು ಕಂಪೆನಿಗಳು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಶುಕ್ರವಾರಕ್ಕೆ ಮುಂದೂಡಿದೆ. 

ಮಂಗಳವಾರ ಅರ್ಜಿದಾರರ ಪರ ಸುಧೀರ್ಘ ವಾದ ಮಂಡಿಸಿದ ಹಿರಿಯ ವಕೀಲ ಎ.ಜಿ.ರಾಘವನ್, ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈ ಕುರಿತು ಆಹಾರ ಸುರಕ್ಷತಾ ಆಯುಕ್ತರು ಹೊರಡಿಸಿರುವ ಅಧಿಸೂಚನೆಗೆ ಯಾವುದೇ ಮಾನ್ಯತೆ ಇಲ್ಲ ಎಂದರು.

'ರಾಜ್ಯದಲ್ಲಿ ತಂಬಾಕು ಮತ್ತು ಸಿಗರೇಟ್ ನಿಷೇಧವಾಗಿಲ್ಲ. ಗುಟ್ಕಾ ಮತ್ತು ಪಾನ್ ಮಸಾಲಾ ವಸ್ತುಗಳನ್ನು ಮಾತ್ರ ನಿಷೇಧಿಸುವುದು ಸರಿಯಲ್ಲ. ಅಲ್ಲದೇ ಅಧಿಸೂಚನೆ ಹೊರಡಿಸುವಾಗ ಸಹಜ ನ್ಯಾಯ ಪ್ರಕ್ರಿಯೆಯನ್ನೂ ಅನುಸರಿಸದೇ ಏಕಾಏಕಿ ಮೇ 30 ರಂದು ಅಧಿಸೂಚನೆ ಹೊರಡಿಸಿ ನಿಷೇಧ ಹೇರಿದ್ದರಿಂದ ಕಂಪೆನಿಗಳು, ಅವುಗಳಲ್ಲಿ ಕೆಲಸ ಮಾಡುವ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಂಪೆನಿಗಳು ಕಾನೂನು ಪ್ರಕಾರ ವ್ಯವಹಾರ ನಡೆಸುತ್ತಿದ್ದು, ವರ್ಷಕ್ಕೆ ಸುಮಾರು 640 ಕೋಟಿ ರೂಪಾಯಿ ಅಬಕಾರಿ ಸುಂಕ ಪಾವತಿಸುತ್ತವೆ. ಘೋಡಾವತ್ ಕಂಪೆನಿಯೊಂದೇ 2002 ರಿಂದ 2010ರ ಅವಧಿಯಲ್ಲಿ ಸುಮಾರು 573 ಕೋಟಿ ರೂಪಾಯಿ ಅಬಕಾರಿ ಸುಂಕ ಪಾವತಿ ಮಾಡಿದೆ. ಸದ್ಯ ಕಂಪೆನಿಯ ಗೋದಾಮಿನಲ್ಲಿ ಸುಮಾರು ರೂ 19 ಕೋಟಿ ಮೌಲ್ಯದ ಕಚ್ಚಾ ಮಾಲಿದೆ. ಇಂಥ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡಿದೆ, ನಿಷೇಧ ಹೇರಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು' ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ನ್ಯಾಯಾಲಯಕ್ಕೆ ಕೆಲವು ದಾಖಲೆ ಗಳನ್ನು ಸಲ್ಲಿಸ ಬೇಕಾಗಿರುವುದರಿಂದ ಹಾಗೂ ಅಡ್ವೊಕೇಟ್ ಜನರಲ್ ಅವರು ಬಾರದ ಕಾರಣ ಶುಕ್ರವಾರ ಹೇಳಿಕೆ ನೀಡಲು ಅವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರಾದ ವಿದ್ಯಾವತಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.