ADVERTISEMENT

ಗೋಹತ್ಯೆ ನಿಷೇಧ ಮಸೂದೆ: ರಾಜ್ಯಪಾಲರೇ ಒತ್ತಡ ತರಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಶಿವಮೊಗ್ಗ: ಗೋಹತ್ಯೆ ನಿಷೇಧ ಕುರಿತು ಕರ್ನಾಟಕದ ವಿಧಾನಮಂಡಲ ಅಂಗೀಕರಿಸಿರುವ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ನೀಡುವಂತೆ ರಾಜ್ಯಪಾಲರೇ ಒತ್ತಡ ತರಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರವಿರುವ 7 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ತರಲು ಮುಂದಾಗಿದ್ದು, ಇದರಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕದ ರಾಜ್ಯಪಾಲರು ಮಾತ್ರ ಅಂಗೀಕಾರಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಿದ್ದಾರೆ ಉಳಿದ ಕಡೆಗಳಲ್ಲಿ ರಾಜ್ಯಪಾಲರೇ ಅಂಕಿತ ಹಾಕಿದ್ದಾರೆ ಎಂದರು.

ಮಧ್ಯಪ್ರದೇಶ ಸರ್ಕಾರ ವಿಧಾನ ಮಂಡಲದಲ್ಲಿ ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಿ ಕಳುಹಿಸಿದೆ. ಅದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಆದರೆ, ಕರ್ನಾಟಕದ್ದನ್ನು  ಮಾತ್ರ ಹಾಗೇ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರೇ ಸ್ವತಃ ರಾಷ್ಟ್ರಪತಿ ಅವರ ಮೇಲೆ ಒತ್ತಡ ತಂದು ರಾಜ್ಯದ ಮಸೂದೆಗೆ ಅಂಕಿತ ಪಡೆಯಬೇಕು ಎಂದು ಹೇಳಿದರು.

ಒಳ ಮೀಸಲಾತಿ ತಾರತಮ್ಯ: ಹಿಂದುಳಿದ ವರ್ಗಕ್ಕಾಗಿ ನಿಗದಿಪಡಿಸಿರುವ ಶೇ. 27ರಷ್ಟು ಮೀಸಲಾತಿಯಲ್ಲಿ, ಕೇಂದ್ರ ಸರ್ಕಾರ ಶೇ. 4.5ರಷ್ಟು ಮುಸ್ಲಿಮರಿಗೆ ಒಳಮೀಸಲಾತಿ ನೀಡಿರುವುದು ಖಂಡನೀಯ. ಈ ತಾರತಮ್ಯ ನೀತಿಯನ್ನು ಈ ಕೂಡಲೇ ಕೈಬಿಡದಿದ್ದರೆ  ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಹಿಂದುಳಿದವರ ಮೀಸಲಾತಿ ಕಡಿತ ಸಂವಿಧಾನಬಾಹಿರ ಕ್ರಮವಾಗಿದೆ. ಇದನ್ನು ಕೈಬಿಡುವಂತೆ ಒತ್ತಾಯಿಸಲು ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದ ಮುಖಂಡರ ನಿಯೋಗ ದೆಹಲಿಗೆ ತೆರಳಲಿದೆ. ಈ ಕುರಿತು ಹಿಂದುಳಿದ ವರ್ಗಗಳ ನಾಯಕರ ಸಮ್ಮೇಳನಕ್ಕೆ ವೇದಿಕೆ ರಚಿಸಲಾಗಿದೆ  ಎಂದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.