ಬೆಂಗಳೂರು: ‘ಜೆಡಿಎಸ್‌ನವರು ಆಯೋಜಿಸುವ ಸಮಾವೇಶಗಳಿಗೆ ಜನ ಸೇರುವುದಿಲ್ಲ ಎಂಬ ಕಾರಣಕ್ಕೆ ಎಚ್.ಡಿ. ದೇವೇಗೌಡ ಅವರು ಪಕ್ಷಾತೀತ ಸಮಾವೇಶ ಮಾಡುವ ಮಾತುಗಳನ್ನಾಡಿದ್ದಾರೆ. ಇವರು ಹೋರಾಟ ಮಾಡಿದಷ್ಟೂ ಬಿಜೆಪಿ ಹೆಚ್ಚು ಕ್ರಿಯಾಶೀಲವಾಗುತ್ತದೆ.’
‘ರಾಜ್ಯದಲ್ಲಿ ಹದಗೆಟ್ಟಿರುವ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಜನಾಂದೋಲನ’ ಆರಂಭಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಭಾನುವಾರ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿರುಗೇಟು ನೀಡಿದ ರೀತಿ ಇದು.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ ತಕ್ಷಣ ದೇವೇಗೌಡರು ಮೇ 6ರಿಂದ ಜನಾಂದೋಲನ ನಡೆಸುವ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು’ ಎಂದರು.
ಇವೆರಡೂ ಪಕ್ಷಗಳು ಸರ್ಕಾರದ ವಿರುದ್ಧ ಹೋರಾಟ ನಡೆಸಿ ಸುಸ್ತಾಗಿವೆ, ಇವರ ನಿಜ ಬಣ್ಣ ಜನರಿಗೆ ಗೊತ್ತಿದೆ. ಹೋರಾಟಗಳಿಂದ ಅವರಿಗೆ ಯಾವುದೇ ಲಾಭ ಆಗಿಲ್ಲ. ಅವರಿಗೆ ರಾಜ್ಯದಲ್ಲಿ ವಿಳಾಸವೇ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲೇ ಅನುಮತಿ ನೀಡಲಾಗಿತ್ತು. ಬಿಜೆಪಿ ಆಡಳಿತ ಆರಂಭವಾದ ಮೇಲೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದವರೇ ಅಕ್ರಮ ಗಣಿಗಳ ವಾರಸುದಾರರು ಎಂದು ದೂರಿದರು.
‘ಗಣಿಗಾರಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಡೆಸಿರುವ ಅವ್ಯವಹಾರದ ಬಗ್ಗೆ ಸದ್ಯದಲ್ಲಿಯೇ ನವದೆಹಲಿಗೆ ತೆರಳಿ ಆರೋಪ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.
‘ಕಡತಗಳೇ ನಾಪತ್ತೆ’: ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿವೆ. ಅವೆಲ್ಲವೂ ಈಗ ದೇವೇಗೌಡರ ಮನೆಯಲ್ಲಿವೆ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
‘ದೇವೇಗೌಡರನ್ನು ಬೆಂಬಲಿಸುವ ಕೆಲವು ಅಧಿಕಾರಿಗಳು ಈ ಕಡತಗಳನ್ನು ಅವರ ಮನೆಗೆ ತಲುಪಿಸಿದ್ದಾರೆ. ಇಂಥಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಕಡತಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ನನ್ನ ಕುಟುಂಬದವರ ವಿರುದ್ಧ ಭೂ ಹಗರಣಗಳ ಆರೋಪ ಕೇಳಿಬಂದಾಗ ನಿವೇಶನಗಳನ್ನು ಹಿಂದಿರುಗಿಸಲಾಯಿತು. ಆದರೆ ಇದೇ ಮಾದರಿಯನ್ನು ದೇವೇಗೌಡರು ಮತ್ತು ಅವರ ಕುಟುಂಬದವರು ಅನುಸರಿಸಲು ಸಿದ್ಧರಿದ್ದಾರಾ’ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: ‘ಜೆಡಿಎಸ್‌ನವರು ಆಯೋಜಿಸುವ ಸಮಾವೇಶಗಳಿಗೆ ಜನ ಸೇರುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ‘ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸುವ ಜನರಿಗಿಂತ ನೂರು ಪಟ್ಟ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಸಾಮರ್ಥ್ಯ ನನಗಿದೆ’ ಎಂದು ಹೇಳಿದರು.
ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅರಮನೆ ಮೈದಾನದಲ್ಲಿ ಹಿಂದೊಮ್ಮೆ ಸಮಾವೇಶ ನಡೆಸಿ ನಮ್ಮ ಬಲ ಪ್ರದರ್ಶಿಸಿದ್ದೆವು’ ಎಂದು ನೆನಪಿಸಿದರು.‘ದೇವೇಗೌಡರ ಕುಟುಂಬಕ್ಕೆ ಯಾವ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ?’ ಎಂದು ಪ್ರಶ್ನಿಸಿದ ಅವರು, ರಾಜ್ಯ ಗುಪ್ತದಳ ಮುಖ್ಯಮಂತ್ರಿಗಳ ಕೈಯಲ್ಲೇ ಇದೆ. ಗುಪ್ತದಳದಿಂದ ಅಧಿಕಾರಿಗಳ ಬಗ್ಗೆ ಮಾಹಿತಿ ತರಿಸಿ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.
‘ಅರ್ಥವೇ ತಿಳಿದಿಲ್ಲ’: ‘ಅಕ್ರಮ ಗಣಿಗಾರಿಕೆ ಸಂಬಂಧ ಜೆಡಿಎಸ್ ಮೇಲೂ ಆರೋಪ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿರುವುದು ಅವರ ಅಜ್ಞಾನದ ಪರಮಾವಧಿಯನ್ನು ತೋರಿಸುತ್ತದೆ. ಅವರಿಗೆ (ಯಡಿಯೂರಪ್ಪ) ಆರೋಪ ಪಟ್ಟಿಯ ಅರ್ಥವೇ ತಿಳಿದಿಲ್ಲ’ ಎಂದು ಟೀಕಿಸಿದರು.
ಆರೋಪ ಪಟ್ಟಿ ಸಲ್ಲಿಸುತ್ತೇನೆ ಎನ್ನುವ ಉಡಾಫೆಯ ಮಾತನ್ನು ಅವರು ನಿಲ್ಲಿಸಲಿ. ಸಾಧ್ಯವಾದರೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲೆಸೆದರು. ‘ಅಪ್ಪ-ಮಕ್ಕಳ ಅವ್ಯವಹಾರವನ್ನು ಬಯಲಿಗೆಳೆಯುತ್ತೇನೆ’ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಹಿಂದೆ ಹೇಳಿದ್ದು ಇನ್ನೂ ಕಡತದಲ್ಲಿದೆ ಎಂದರು.
‘ನಮಗೂ ಪಾಠವಿದೆ’: ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಹತ್ಯೆ ಮಾಡಿದ ಪ್ರಕರಣದಲ್ಲಿ ನಮ್ಮ ದೇಶಕ್ಕೂ ಪಾಠವಿದೆ. ತನ್ನ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಬೆನ್ನತ್ತಿ ಹೋಗಿ ಕೊಂದಿರುವುದು ನಮ್ಮ ದೇಶಕ್ಕೂ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.