ADVERTISEMENT

ಗ್ರಂಥಾಲಯ ಮೇಲ್ವಿಚಾರಕರಿಗೆ 7000 ರೂ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಭಾವನೆಯನ್ನು 7 ಸಾವಿರ ರೂಪಾಯಿಗೆ ಹೆಚ್ಚಿಸಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮತಿಸಿದ್ದಾರೆ. ಸಂಭಾವನೆಯನ್ನು ಈಗ ಪಡೆಯುತ್ತಿರುವ 2,500 ರೂಪಾಯಿಗಳಿಂದ 7ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ತಕ್ಷಣವೇ ಕಡತ ಮಂಡಿಸುವಂತೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ ಎಂದು ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಸಿ.ಕೃಷ್ಣಯ್ಯಗೌಡ ತಿಳಿಸಿದ್ದಾರೆ.

ಗ್ರಂಥಾಲಯ ಸಚಿವ ರೇವು ನಾಯ್ಕ ಬೆಳಮಗಿ, ಮೇಲ್ವಿಚಾರಕರ ಸಂಘದ ಗೌರವ ಅಧ್ಯಕ್ಷ ಆರಗ ಜ್ಞಾನೇಂದ್ರ ಹಾಗೂ ಸಂಘದ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅವರ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಆ ಸಭೆಯಲ್ಲಿ ಸಮಗ್ರ ಚರ್ಚೆ ನಡೆದು, ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಬೇಡಿಕೆ ಈಡೇರಿಸಲು ಸಮ್ಮತಿಸಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ಕನಿಷ್ಠ ಗೌರವ ಸಂಭಾವನೆ ಪಡೆಯುತ್ತಿರುವ ರಾಜ್ಯದ ಸುಮಾರು 5,765 ಮೇಲ್ವಿಚಾರಕರ ಬದುಕು, ಭವಿಷ್ಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಸಂಭಾವನೆ ಪರಿಷ್ಕರಿಸುವ ಭರವಸೆ ನೀಡಿದರು.  ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಹೋರಾಟ ನಡೆಸಿಕೊಂಡು ಬರಲಾಗಿತ್ತು. ಈಗ ನ್ಯಾಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.