ಬೆಂಗಳೂರು: ವರ್ಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ವಿಫಲರಾಗುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಆಯಾ ವಾರ್ಡ್ ಸದಸ್ಯರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆಗೆ ಪ್ರತಿಪಕ್ಷಗಳ ವಿರೋಧದ ನಡುವೆಯೂ ಬುಧವಾರ ವಿಧಾನಸಭೆ ಒಪ್ಪಿಗೆ ನೀಡಿತು.
ಅಧ್ಯಕ್ಷರು, ಸದಸ್ಯರನ್ನು ಅನರ್ಹಗೊಳಿಸುವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಇದರ ನಡುವೆಯೇ ಸದನವು ಮಸೂದೆಗೆ ಒಪ್ಪಿಗೆ ಸೂಚಿಸಿತು. ಇದಾದ ನಂತರ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಇದಕ್ಕೂ ಮೊದಲೇ ಸಭಾತ್ಯಾಗ ಮಾಡಿದ್ದರು.
ಪಂಚಾಯತ್‌ರಾಜ್ ಕಾಯ್ದೆ ತ್ದ್ದಿದುಪಡಿಯ ಪ್ರಕಾರ, ಸತತವಾಗಿ ಎರಡು ಬಾರಿ ವಾರ್ಡ್ ಸಭೆಗಳನ್ನು ನಡೆಸದೆ ಇದ್ದರೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನರ್ಹಗೊಳಿಸಲಾಗುತ್ತದೆ. ಅಲ್ಲದೆ ವಾರ್ಡ್ ಸಭೆ ಕರೆಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೆರವು ನೀಡಬೇಕು. ಈ ವಿಷಯದಲ್ಲಿ ಸಹಕರಿಸದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ಅದೇ ರೀತಿ ಸತತ ಎರಡು ಬಾರಿ ಗ್ರಾಮ ಸಭೆಗಳನ್ನು ನಡೆಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿಫಲರಾದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ. ಸಭೆ ಕರೆಯುವ ವಿಷಯದಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಣ್ಣ ತಿದ್ದುಪಡಿ: ಕನಿಷ್ಠ ಆರು ತಿಂಗಳಿಗೊಮ್ಮೆ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ನಡೆಸದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಮಂಗಳವಾರ ಮಂಡಿಸಿದ ಕಾಯ್ದೆಯಲ್ಲಿ ಅವಕಾಶ ಇತ್ತು. ಪ್ರತಿಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಸಭಾಧ್ಯಕ್ಷರ ಕೊಠಡಿಯಲ್ಲಿ ನಡೆದ ಸಂಧಾನ ಸಭೆಯ ನಂತರ ಸಣ್ಣ ತಿದ್ದುಪಡಿಗಳನ್ನು ಮಾಡಲಾಯಿತು.
ಶಿಸ್ತುಕ್ರಮದ ವ್ಯಾಪಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸೇರ್ಪಡೆ ಮಾಡಿರುವುದರ ಜೊತೆಗೆ, `ಕನಿಷ್ಠ ಆರು ತಿಂಗಳಿಗೊಮ್ಮೆ ಸಭೆ ನಡೆಸದಿದ್ದರೆ' ಎಂಬ ಬದಲಿಗೆ, `ಸತತ ಎರಡು ಸಭೆಗಳನ್ನು ನಡೆಸದಿದ್ದರೆ' ಎಂದು ತಿದ್ದುಪಡಿ ಮಾಡಲಾಯಿತು. ಇಷ್ಟಾದರೂ ಪ್ರತಿಪಕ್ಷಗಳ ಸದಸ್ಯರು ಈ ಮಸೂದೆಯನ್ನು ಒಪ್ಪಲಿಲ್ಲ. ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಸಮರ್ಥನೆ: ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಮಹತ್ವ ಇರಬೇಕು. ಅವುಗಳು ಶಾಸನಾತ್ಮಕವಾದ ಕರ್ತವ್ಯಗಳನ್ನು ನಿಭಾಯಿಸಬೇಕು. ಆ ಕಾರ್ಯವನ್ನು ಮಾಡದೆ ಇದ್ದಾಗ ಕ್ರಮತೆಗೆದುಕೊಳ್ಳಲು ಅವಕಾಶ ಇರಬೇಕು ಎಂಬ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ ಎಂದು ಮಸೂದೆ ಮಂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ಸಮರ್ಥಿಸಿಕೊಂಡರು.
ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲೇ ಆಯ್ಕೆ ಮಾಡಬೇಕು. ಆದರೆ, ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ವಾರ್ಡ್ ಸಭೆಗಳು, ಗ್ರಾಮಸಭೆಗಳು ನಡೆಯುತ್ತಿಲ್ಲ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಬೇಕು ಎಂಬ ಸದುದ್ದೇಶದಿಂದ ತಿದ್ದುಪಡಿ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನು ಅನರ್ಹಗೊಳಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಜಗದೀಶ ಶೆಟ್ಟರ್, `ಅಧ್ಯಕ್ಷರು, ಸದಸ್ಯರ ಹಕ್ಕು ಮೊಟಕುಗೊಳಿಸುವುದು ಸರಿಯಲ್ಲ. ಗ್ರಾಮೀಣ ಭಾಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿವೆ. ಅವರ ತಾಳಕ್ಕೆ ತಕ್ಕಂತೆ ಚುನಾಯಿತ ಪ್ರತಿನಿಧಿಗಳು ವರ್ತಿಸಬೇಕಾಗುತ್ತದೆ. ಅನರ್ಹಗೊಳಿಸುತ್ತೇವೆ ಎಂದು ಹೆದರಿಸಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಾರೆ' ಎಂದು ಆತಂಕ ವ್ಯಕ್ತಪಡಿಸಿದರು.
`ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂದು ಕಾಯ್ದೆ ಇದೆ. ಆ ಪ್ರಕಾರ ಅಧಿವೇಶನ ನಡೆಯುತ್ತಿಲ್ಲ. ನಮಗೆ ಇಲ್ಲದ ಶಿಕ್ಷೆ ಅವರಿಗೆ (ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು) ಏಕೆ? ತರಾತುರಿಯಲ್ಲಿ ಈ ಮಸೂದೆ ತರುವುದರ ಉದ್ದೇಶ ಏನು? ಇದೊಂದು ಕರಾಳ ಶಾಸನ. ಕೂಡಲೇ ವಾಪಸ್ ಪಡೆಯಿರಿ' ಎಂದು ಆಗ್ರಹಿಸಿದರು.
`ಇದೊಂದು ಕಠೋರ ಶಾಸನ. ಸಭೆ ಕರೆಯಲಿಲ್ಲ ಎಂಬ ಕಾರಣಕ್ಕಾಗಿ ಅನರ್ಹಗೊಳಿಸುವುದು ಸರಿಯಲ್ಲ. ಬಜೆಟ್ ಅಧಿವೇಶನ ಸಂದರ್ಭದಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ. ಸಭೆ ಕರೆಯುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ. ಹೆಚ್ಚಿನ ಚರ್ಚೆಯ ಅಗತ್ಯ ಇರುವುದರಿಂದ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಿ' ಎಂದು ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಸರಿಯಲ್ಲ. ಸಭೆ ಕರೆಯದೆ ಇದ್ದರೆ ಅಮಾಯಕರನ್ನು ಅನರ್ಹಗೊಳಿಸುವುದು ಸರಿಯಲ್ಲ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡೋಣ. ಮುಂದಕ್ಕೆ ಹಾಕಿ' ಎಂದು ಮನವಿ ಮಾಡಿದರು. ಜೆಡಿಎಸ್‌ನ ಎನ್.ಚೆಲುರಾಯಸ್ವಾಮಿ, ಚಿಕ್ಕಮಾದು, ಕೆಜೆಪಿಯ ಬಿ.ಆರ್.ಪಾಟೀಲ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು.
`ವಾರ್ಡ್ ಸದಸ್ಯರೇ ಸಭೆ ಕರೆಯಬೇಕು ಎಂದು ತಿದ್ದುಪಡಿ ಮಾಡಿದರೆ ಅಪಾಯ ಇದೆ' ಎಂದು ಸರ್ಕಾರವನ್ನು ಎಚ್ಚರಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, `ನನ್ನ ಪ್ರಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆ ಕರೆಯಬೇಕು' ಎಂದರು. ಇಷ್ಟಾದರೂ ಸಚಿವ ಪಾಟೀಲ ಅವರು ಮಸೂದೆ ಅಂಗೀಕಾರಕ್ಕೆ ಮನವಿ ಮಾಡಿದಾಗ ಆಕ್ರೋಶಗೊಂಡು ಬಿಜೆಪಿ, ಕೆಜೆಪಿ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಿದರು.
ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ಮನಗಂಡ ಸ್ಪೀಕರ್ ತಿಮ್ಮಪ್ಪ ಅವರು ಸ್ವಲ್ಪ ಹೊತ್ತು ಸದನವನ್ನು ಮುಂದೂಡಿ, ತಮ್ಮ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದರು. ಮತ್ತೆ ಸದನ ಸೇರಿದಾಗಲೂ ಬಿಜೆಪಿ, ಕೆಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಮತ್ತೊಮ್ಮೆ ಮಸೂದೆ ಮಂಡಿಸುವುದಾಗಿ ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸ್ಪೀಕರ್, ಧರಣಿ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸದಸ್ಯರು ತಮ್ಮ ಸ್ಥಾನಗಳಿಗೆ ಹಿಂತಿರುಗಿದರು.
ಸಾಯಂಕಾಲ ತಿದ್ದುಪಡಿಯೊಂದಿಗೆ ಮತ್ತೆ ಮಸೂದೆ ಮಂಡಿಸಿದಾಗಲೂ ಪ್ರತಿಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಿಜೆಪಿ, ಜೆಡಿಎಸ್ ಸದಸ್ಯರು `ತಿದ್ದುಪಡಿ ಮಸೂದೆಗೂ ನಮ್ಮ ಸಮ್ಮತಿ ಇಲ್ಲ' ಎಂದು ಸಭಾತ್ಯಾಗ ಮಾಡಿದರು.
ಪ್ರಾದೇಶಿಕ ಆಯುಕ್ತರಿಗೆ ಅಧಿಕಾರ
ವಾರ್ಡ್ ಸಭೆ, ಗ್ರಾಮ ಸಭೆ ನಡೆಸಲು ವಿಫಲರಾಗುವ ಅಧ್ಯಕ್ಷರು, ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಸಭೆ ನಡೆಸಲು ವಿಫಲರಾಗಿರುವ ಬಗ್ಗೆ ಆಯುಕ್ತರು ಸ್ವಯಂ ಪ್ರೇರಣೆಯಿಂದ ಅಥವಾ ಗ್ರಾಮ ಪಂಚಾಯಿತಿ ಶಿಫಾರಸು, ಇಲ್ಲವೇ ಸದಸ್ಯ ನೀಡಿದ ದೂರು ಆಧರಿಸಿ 45 ದಿನಗಳ ಒಳಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಣ್ಣ ಬೆಂಬಲ, ತಮ್ಮ ವಿರೋಧ!
ಕರ್ನಾಟಕ ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆಗೆ ಅಣ್ಣ ಬೆಂಬಲ ವ್ಯಕ್ತ ಪಡಿಸಿದರೆ ತಮ್ಮ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.
ಮಸೂದೆಯನ್ನು ಸಣ್ಣ ತಿದ್ದುಪಡಿಯೊಂದಿಗೆ ಮಂಡಿಸಿದಾಗ ಜೆಡಿಎಸ್‌ನ ಎಚ್.ಡಿ.ರೇವಣ್ಣ ಬೆಂಬಲಿಸಿದರು.
`ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಸರಿಪಡಿಸಲು ಎಲ್ಲರೂ ಮುಂದಾಗಬೇಕು. ಸಹಕಾರ ಸಂಸ್ಥೆಗಳಲ್ಲಿಯೂ ಸದಸ್ಯರನ್ನು ಅನರ್ಹಗೊಳಿಸುವ ಕಾನೂನು ಇದೆ. ಇಲ್ಲಿ ಯಾಕೆ ವಿರೋಧ ವ್ಯಕ್ತಪಡಿಸಬೇಕು' ಎಂದು ಪ್ರಶ್ನಿಸಿದರು.
ಆದರೆ ವಿರೋಧ ಪಕ್ಷದ ನಾಯಕರೂ ಆಗಿರುವ ತಮ್ಮ ಎಚ್.ಡಿ.ಕುಮಾರಸ್ವಾಮಿ ಮಾತ್ರ `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಲ್ಲ' ಎಂದು ಇತರ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.