ಹುಬ್ಬಳ್ಳಿ: `ಬಹುಕೋಟಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರ ಹೆಸರೂ ಕೇಳಿ ಬಂದಿರುವುದರಿಂದ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು~ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಅನಂತಕುಮಾರ್ ಆಗ್ರಹಿಸಿದರು.
ಕೊಪ್ಪಳ ಉಪ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಶುಕ್ರವಾರ ವಿಶೇಷ ವಿಮಾನದಲ್ಲಿ ನಗರಕ್ಕೆ ಬಂದಿಳಿದ ಅವರು ವರದಿಗಾರರ ಜೊತೆ ಮಾತನಾಡಿದರು. `ಚಿದಂಬರಂ ತಮ್ಮ ಹುದ್ದೆಯಲ್ಲಿ ಮುಂದುವರಿದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ರಾಜೀನಾಮೆ ನೀಡದೆ ಅವರ ಮುಂದೆ ಬೇರೆ ಮಾರ್ಗವೇ ಇಲ್ಲ~ ಎಂದು ಹೇಳಿದರು.
`ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರ ಹೋರಾಟ ದಮನ ಮಾಡಲು ಚಿದಂಬರಂ ಹಾಗೂ ಕಪಿಲ್ ಸಿಬಲ್ ಮುಂದಾಗಿದ್ದು ಏಕೆ ಎಂಬುದು ಈಗ ಅರ್ಥವಾಗುತ್ತಿದೆ~ ಎಂದು ಅವರು ಲೇವಡಿ ಮಾಡಿದರು.
`ಉತ್ತರ ಭಾರತದಲ್ಲಿ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ನಾನು ರಾಜ್ಯ ಘಟಕದ ಅಧ್ಯಕ್ಷರ ಸೂಚನೆ ಮೇರೆಗೆ ಇವತ್ತು ಪ್ರಚಾರಕ್ಕೆ ಬಂದಿದ್ದೇನೆ.
ಈ ವಿಷಯವಾಗಿ ಯಾವುದೇ ಗೊಂದಲ ಅನಗತ್ಯ~ ಎಂದ ಅವರು, `ಕೊಪ್ಪಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.