ADVERTISEMENT

ಚೌತಿ ನಂತರ ಜೆಡಿಎಸ್‌ಗೆ ಹೊಸ ಅಧ್ಯಕ್ಷರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಗೌರಿ - ಗಣೇಶ ಹಬ್ಬದ ನಂತರವೇ ಜೆಡಿಎಸ್ ರಾಜ್ಯ ಘಟಕದ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.ಕೋರ್ ಕಮಿಟಿ (ಪ್ರಮುಖರ ಸಮಿತಿ) ರಚನೆಯಾದ ನಂತರ ಅಧ್ಯಕ್ಷರ ನೇಮಕಕ್ಕೆ ಚಾಲನೆ ದೊರೆಯಲಿದೆ. ಆದರೆ, ಇನ್ನೂ ಕೋರ್ ಕಮಿಟಿಯೇ ರಚನೆಯಾಗಿಲ್ಲ. ಹೀಗಾಗಿ ಹಬ್ಬಕ್ಕೂ ಮುನ್ನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇಲ್ಲ ಎಂದು ಗೊತ್ತಾಗಿದೆ.

ನೂತನ ಅಧ್ಯಕ್ಷರು ಯಾರಾಗಬೇಕು ಎಂಬುದು ಕೋರ್ ಕಮಿಟಿಯಲ್ಲೇ ನಿರ್ಧಾರ ಆಗಬೇಕು ಎಂದು ಕಳೆದ ವಾರ ನಡೆದ ಮುಖಂಡರ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸೆ.3ರ ಒಳಗೆ ಅಧ್ಯಕ್ಷರ ನೇಮಕವಾಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದರು.

ಬಸನಗೌಡ ಪಾಟೀಲ ಯತ್ನಾಳ್, ಬಂಡೆಪ್ಪ ಕಾಶೆಂಪುರ, ಪಿ.ಜಿ.ಆರ್.ಸಿಂಧ್ಯ, ಎ.ಕೃಷ್ಣಪ್ಪ ಅವರು ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ವೈ.ಎಸ್.ವಿ.ದತ್ತ, ಮಲ್ಲಿಕಾರ್ಜುನ ಖೂಬಾ, ಮಧು ಬಂಗಾರಪ್ಪ, ಎಚ್.ಎಸ್.ಶಿವಶಂಕರ್, ಜಮೀರ್ ಅಹ್ಮದ್, ಎಚ್.ಕೆ.ಕುಮಾರಸ್ವಾಮಿ ಅವರು ಮುಖ್ಯಸಚೇತಕ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯೆ ದತ್ತ ಹೆಸರು ಅಧ್ಯಕ್ಷ ಸ್ಥಾನಕ್ಕೂ ಪ್ರಸ್ತಾಪವಾಗಿದೆ ಎನ್ನಲಾಗಿದೆ.

`41 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ರಾಜ್ಯದ ಎಲ್ಲ ಜಿಲ್ಲೆಗಳ ಕಾರ್ಯಕರ್ತರು, ಮುಖಂಡರ ಸಂಪರ್ಕ ಇದೆ. ನನಗೆ ಮುಖ್ಯಸಚೇತಕ ಸ್ಥಾನ ನೀಡಿದರೆ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ' ಎಂಬ ಭಾವನೆಯನ್ನು ದತ್ತ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಜಾತಿಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸದೆ ಇದ್ದರೆ, ದತ್ತ ಅವರಿಗೆ ಅಧ್ಯಕ್ಷ ಇಲ್ಲವೇ ಮುಖ್ಯಸಚೇತಕ ಸ್ಥಾನ ದೊರೆಯುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜಾತಿ ಲೆಕ್ಕಾಚಾರದಲ್ಲಿ ತೊಡಗಿದರೆ ಹಿಂದುಳಿದ ಅಥವಾ ಲಿಂಗಾಯತ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.