ADVERTISEMENT

ಜಾತಿಗಳ ಮಧ್ಯೆ ಬೆಂಕಿ ಇಡುತ್ತಿರುವ ಸಿದ್ದರಾಮಯ್ಯ: ಆರ್‌.ಅಶೋಕ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಬಿಜೆಪಿ ಚುನಾವಣಾ ವಿಸ್ತಾರಕರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಮುರಳೀಧರ ರಾವ್ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸಮಾಲೋಚನೆ ನಡೆಸುತ್ತಿರುವುದು. ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಆರ್‌.ಅಶೋಕ್‌ ಇದ್ದರು.
ಬಿಜೆಪಿ ಚುನಾವಣಾ ವಿಸ್ತಾರಕರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸಮಾಲೋಚನೆ ನಡೆಸುತ್ತಿರುವುದು. ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಆರ್‌.ಅಶೋಕ್‌ ಇದ್ದರು.   

ಬೆಂಗಳೂರು: ‘ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್‌.ಅಶೋಕ್‌ ಆರೋಪಿಸಿದರು.

‘ವೀರಶೈವ– ಲಿಂಗಾಯತ ಮತ್ತು ಇತರ ಜಾತಿಗಳ ಮಧ್ಯೆ ಕಲಹ ಹುಟ್ಟುಹಾಕಿ, ಅವರಿಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ’ ಎಂದು ಅವರು  ಭಾನುವಾರ ಬಿಜೆಪಿ ವಿಸ್ತಾರಕರ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೂರಿದರು.

‘ಪಕ್ಷದ ಅಧ್ಯಕ್ಷ ಅಮಿತ್‌ ಷಾ ಬಂದು ಹೋದ ಮೇಲೆ ಕಾಂಗ್ರೆಸ್‌ ನಾಯಕರ ನಿದ್ದೆಯೇ ಹಾರಿ ಹೋಗಿದೆ. ಒಂದು ಸಮುದಾಯಕ್ಕೆ ಸೀಮಿತವಾಗಿ ‘ಶಾದಿ ಭಾಗ್ಯ’, ಕೆಲವೇ ಸಮುದಾಯಗಳ ಮಕ್ಕಳಿಗೆ ‘ಪ್ರವಾಸ ಭಾಗ್ಯ’ವನ್ನು ಕರುಣಿಸಿ, ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅವರು ಸಿದ್ದರಾಮಣ್ಣ ಅಲ್ಲ, ಬೆಂಕಿ ರಾಮಣ್ಣ.  ಪೆಟ್ರೋಲ್‌ ಮತ್ತು ಬೆಂಕಿ ಪೊಟ್ಟಣ ಕೈಯಲ್ಲಿ ಹಿಡಿದುಕೊಂಡೇ ಓಡಾಡುತ್ತಿರುತ್ತಾರೆ’ ಎಂದು ಅಶೋಕ್‌ ಹರಿಹಾಯ್ದರು.

ADVERTISEMENT

‘ಚುನಾವಣೆಗೆ ಮೊದಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಗದ್ದಲ ನಡೆಯುತ್ತಿದೆ. ಮುಂದೆ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಭಯದಿಂದಲೇ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದರು.

ಹಿಂದೂ ವಿರೋಧಿ ಸರ್ಕಾರ:

‘ಹಿಂದೂಗಳ ಪರವಾಗಿ ಮಾತನಾಡುವವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸುತ್ತಿದೆ. ಇದಕ್ಕೆ ಹಿಂದೂ ಜಾಗರಣ ವೇದಿಕೆಯ ಜಗದೀಶ್‌ ಕಾರಂತರ ಬಂಧನವೇ ನಿದರ್ಶನ. ಹಿಂದೂಗಳನ್ನು ಗುರಿ ಮಾಡಿ ದ್ವೇಷ ಸಾಧಿಸುವುದನ್ನು ಮುಂದುವರಿಸಿದರೆ, ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.