ADVERTISEMENT

ಜುಲೈನಿಂದ ಕಾಯಂ ಪಡಿತರ ಕಾರ್ಡ್‌ಗೆ ಮಾತ್ರ ಆಹಾರಧಾನ್ಯ

ರಾಜೇಶ್ ರೈ ಚಟ್ಲ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆಜಿಯಂತೆ  ಗರಿಷ್ಠ 30 ಕೆಜಿ ಅಕ್ಕಿ ವಿತರಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಯ ಉಪ ನಿರ್ದೇಶಕರಿಗೆ ವಹಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತ ಹರ್ಷ ಗುಪ್ತ ಆದೇಶ ನೀಡಿದ್ದಾರೆ.

ಜುಲೈ ತಿಂಗಳಿನಿಂದ ಕಾಯಂ ಪಡಿತರ ಚೀಟಿಗಳಿಗೆ ಮಾತ್ರ ಆಹಾರಧಾನ್ಯ ವಿತರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಹೊಸ ಅರ್ಜಿಗಳಿಗೆ 30 ದಿನಗಳೊಳಗೆ ಪಡಿತರ ಚೀಟಿ ವಿತರಿಸಬೇಕು. ಈಗಾಗಲೇ ಮಂಗಳೂರು, ಉಡುಪಿ, ಬಾಗಲಕೋಟೆಯಲ್ಲಿ ಪ್ರಾಯೋಗಿಕವಾಗಿ ಪಡಿತರ ಚೀಟಿ ಅರ್ಜಿಗಳನ್ನು ಇತ್ಯರ್ಥಪಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ. 

2011ರ ನವೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಿ ವಿತರಿಸಲು ಸಿದ್ಧವಾಗಿ ಬಾಕಿ ಇರುವ ಪಡಿತರಚೀಟಿಗಳನ್ನು ಜುಲೈ ಅಂತ್ಯದೊಳಗೆ ವಿತರಿಸಬೇಕು. ನಂತರವೂ ವಿತರಣೆ ಆಗದೆ ಉಳಿದವುಗಳನ್ನು ರದ್ದುಪಡಿಸಬೇಕು.

ಕಾಯಂ ಆಗಿ ಪರಿವರ್ತನೆಯಾಗದ ತಾತ್ಕಾಲಿಕ ಪಡಿತರ ಚೀಟಿಗಳನ್ನೂ ಜುಲೈ ಅಂತ್ಯದೊಳಗೆ ರದ್ದುಪಡಿಸಬೇಕು. 2010ರ ಡಿಸೆಂಬರ್‌ಗಿಂತ ಹಿಂದಿನ ಕಾಯಂ ಪಡಿತರ ಚೀಟಿಗಳನ್ನು ನವೀಕರಿಸಲು ಜೂನ್ ಅಂತ್ಯದೊಳಗೆ ಎಸ್‌ಎಂಎಸ್ ಕಳುಹಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದೂ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಇಲಾಖೆಯ ಚಟುವಟಿಕೆಯ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಎಲ್ಲ ಉಪನಿರ್ದೇಶಕರು ದೂರವಾಣಿ ಕರೆಗೆ ಲಭ್ಯರಿರಬೇಕು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವಂತಿಲ್ಲ. ಯಾರೂ ರಜೆಯಲ್ಲಿ ಹೋಗುವಂತಿಲ್ಲ.

ಆಯುಕ್ತರ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ಉಪನಿರ್ದೇಶಕರು ಸ್ಥಳ ಪರಿಶೀಲನೆ ಮಾಡಿರುವ ಬಗ್ಗೆ ಮೊಬೈಲ್ ಆಧಾರಿತ ದತ್ತಾಂಶದಲ್ಲಿ ವರದಿ ಸಲ್ಲಿಸುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಈ ಉದ್ದೇಶಕ್ಕಾಗಿ ಉಪ ನಿರ್ದೇಶಕರಿಗೆ ಸ್ಮಾರ್ಟ್ ಫೋನ್ ಒದಗಿಸಿ, ಕೆಲವು ನಿರ್ದಿಷ್ಟ ಮಾಹಿತಿಗಳನ್ನು ಪಡೆಯಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಪಡಿತರ ಯಂತ್ರಗಳನ್ನು ಸ್ಥಾಪಿಸುವ ಮತ್ತು ತಿಂಗಳ ಪಡಿತರ ಹಂಚಿಕೆ ಅದರಲ್ಲಿ ದಾಖಲಾಗಿರುವ ಪ್ರಮಾಣಕ್ಕಿಂತ ಜಾಸ್ತಿಯಾಗದಂತೆ ಉಪ ನಿರ್ದೇಶಕರು ಉಸ್ತುವಾರಿ ವಹಿಸಬೇಕು. ಪಡಿತರ ಯಂತ್ರ ಉಪಯೋಗಿಸುವ ಮೊದಲು ಮತ್ತು ನಂತರ ಎಷ್ಟು ಪಡಿತರ ಹಂಚಿಕೆ ಆಗುತ್ತಿತ್ತು ಎಂಬ ಬಗ್ಗೆ ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಉಪನಿರ್ದೇಶಕರು ತಕ್ಷಣ ವರದಿ ಸಲ್ಲಿಸಬೇಕು ಸೂಚನೆ ನೀಡಲಾಗಿದೆ.

ಒಂದೇ ಆರ್‌ಆರ್ ಸಂಖ್ಯೆ ಹೊಂದಿರುವ ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರು, ಮೊದಲು ಗಣಕಯಂತ್ರದ ಹಂತದಲ್ಲೇ ನ್ಯಾಯಬೆಲೆ ಅಂಗಡಿವಾರು ರದ್ದುಪಡಿಸಿ ಪ್ರತಿವಾರದ ಅಂತ್ಯದಲ್ಲಿ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಆಹಾರ ನಿರೀಕ್ಷಕರು ಪರಿಶೀಲಿಸಿದ ನ್ಯಾಯಬೆಲೆ ಅಂಗಡಿಗಳನ್ನು ಉಪನಿರ್ದೇಶಕರು ರ‌್ಯಾಂಡಮ್ ಆಗಿ ಪರಿಶೀಲಿಸುವಂತೆ ತಿಳಿಸಲಾಗಿದೆ.

ಅರ್ಜಿಗಳ ಮಹಾಪೂರ: ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಂದಿನಿಂದ (ಮಾ. 8) ಮಂಗಳವಾರ (ಜೂ 25) ಬೆಳಗ್ಗಿನವರೆಗೆ 15,35,708 ಮಂದಿ ಎಸ್‌ಎಂಎಸ್ ಕಳುಹಿಸಿದ್ದಾರೆ. ಈ ಪೈಕಿ 7,58,009 ಮಂದಿ ಬಿಪಿಎಲ್ ಹಾಗೂ 1,11,222 ಮಂದಿ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಆಹಾರ ನಿರೀಕ್ಷಕರಿಂದ ಅಪಸ್ವರ!
ಹೊಸ ಪಡಿತರ ಚೀಟಿ ವಿತರಣೆ ಮತ್ತು ನವೀಕರಣದ ಹೊಣೆ ವಹಿಸಿರುವುದಕ್ಕೆ ಆಹಾರ ನಿರೀಕ್ಷಕರಿಂದ ಅಪಸ್ವರ ಕೇಳಿಬಂದಿದೆ.

`ಪ್ರತಿಯೊಬ್ಬ ಆಹಾರ ನಿರೀಕ್ಷಕರು ಸುಮಾರು 2,000ದಿಂದ 11,000 ಸಾವಿರ ಹೊಸ ಅರ್ಜಿಗಳನ್ನು ಪರಿಶೀಲಿಸಬೇಕು. ಬೆಳಿಗ್ಗೆ 10ರಿಂದ 1.30ರ ವರೆಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ 1.30ರಿಂದ 5.30ರ ವರೆಗೆ ಸ್ಥಳ ತನಿಖೆಗೆ ಹೋಗಬೇಕು.

ಹೀಗಾಗಿ ದಿನಕ್ಕೆ 20 ಅರ್ಜಿಗಳನ್ನು ಮಾತ್ರ ವಿಚಾರಣೆ ಮಾಡಲು ಸಾಧ್ಯ. ಕಂಪ್ಯೂಟರ್ ಮೂಲಕ ಎಸ್‌ಎಂಎಸ್ ಕಳುಹಿಸಿ ಅರ್ಜಿಗಳನ್ನು ಪರಿಶೀಲಿಸಲು ಒಂದು ತಿಂಗಳು ಸಾಲದು. ದಿನಕ್ಕೆ 20 ಅರ್ಜಿಯಂತೆ ಲೆಕ್ಕಹಾಕಿ ಅವಧಿ ನಿಗದಿಪಡಿಸಬೇಕು' ಎಂದು ಆಹಾರ ನಿರೀಕ್ಷಕರು ಹುಬ್ಬಳ್ಳಿಯಲ್ಲಿ ಇಲಾಖೆಯ ಸಹಾಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.