ADVERTISEMENT

ಜ. 24ರಂದು ರಾಷ್ಟ್ರಪತಿ ಭವನಕ್ಕೆ ಬಿಜೆಪಿ ಪೆರೇಡ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ನವದೆಹಲಿ: ‘ರಾಜಭವನ ದುರುಪಯೋಗ’ ಮಾಡಿಕೊಳ್ಳುತ್ತಿರುವ ರಾಜ್ಯಪಾಲರನ್ನು ತುರ್ತಾಗಿ ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಲು ಈ ತಿಂಗಳ 24ರಂದು ಬಿಜೆಪಿ ಮುಖಂಡರು ಮತ್ತು ಸಂಸದರು ರಾಷ್ಟ್ರಪತಿ ಭವನದಲ್ಲಿ ಪೆರೇಡ್ ಮಾಡಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಹಂಸರಾಜ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಸಂಘರ್ಷ ತಾರಕಕ್ಕೇರುವ ಸೂಚನೆಗಳು ಕಾಣುತ್ತಿವೆ.

‘ಜಸ್ಟೀಸ್ ಲಾಯರ್ಸ್‌ ಫೋರಂ’ಗೆ ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ಕೊಡಬಹುದು ಎಂದು ಆತಂಕಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ವಿಶೇಷ ವಿಮಾನದಲ್ಲಿ ರಾಜಧಾನಿಗೆ ದೌಡಾಯಿಸಿ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಜತೆ ಸಮಾಲೋಚನೆ ನಡೆಸಿದರು.

ಜೇಟ್ಲಿ ಮನೆಯಲ್ಲಿ ಸಂಜೆ ಆರು ಗಂಟೆಗೆ ಆರಂಭವಾದ ಸಭೆ 7.30ರವರೆಗೂ ನಡೆಯಿತು. ಚರ್ಚೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಮತ್ತು ಹಿರಿಯ ಸಂಸದ ಡಿ.ಬಿ. ಚಂದ್ರೇಗೌಡ ಇದೇ 24ರಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಲು ಒತ್ತಾಯಿಸಿ ಪೆರೇಡ್ ನಡೆಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

‘ಪದೇ ಪದೇ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಪಾಲರ ವಿರುದ್ಧ ಯಾವ ಬತ್ತಳಿಕೆ ಪ್ರಯೋಗಿಸಬೇಕು. ಸದ್ಯ ಎದುರಾಗಿರುವ ಕಂಟಕದಿಂದ ಹೇಗೆ ಪಾರಾಗಬೇಕು’ ಎಂಬ ಬಗ್ಗೆ ಚರ್ಚಿಸಲು ಬುಧವಾರ ಬೆಂಗಳೂರಿನಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ.

‘ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ‘ಹಸಿರು ನಿಶಾನೆ’ ತೋರಿದರೆ ಏನು ಮಾಡಬೇಕು. ಕಾನೂನು ಸಮರ ಅನಿವಾರ್ಯವೇ ಎಂಬ ಬಗ್ಗೆ ಪಕ್ಷದ ಉಳಿದ ಮುಖಂಡರ ಜತೆ ಚಿಂತಿಸಿ ಅಂತಿಮ ತೀರ್ಮಾನಕ್ಕೆ  ಬರಲು ತೀರ್ಮಾನಿಸಲಾಯಿತು’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

‘ರಾಜ್ಯಪಾಲರು ಕೈಗೊಳ್ಳಬಹುದಾದ ತೀರ್ಮಾನದ ಸಾಧಕ- ಬಾಧಕಗಳ’ ಕುರಿತು ಜೇಟ್ಲಿಯವರು ಮುಖ್ಯಮಂತ್ರಿಗೆ ವಿವರಿಸಿದರು. ಚರ್ಚೆ ಸಮಯದಲ್ಲಿ ಸಚಿವರಾದ ವಿ. ಎಸ್. ಆಚಾರ್ಯ, ಸುರೇಶ್ ಕುಮಾರ್, ಬಸವರಾಜ್ ಬೊಮ್ಮಾಯಿ, ಅಶೋಕ, ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಇದ್ದರು.

‘ವಕೀಲರ ವೇದಿಕೆಗೆ ರಾಜ್ಯಪಾಲರು ಅನುಮತಿ ನೀಡಿದ ಪಕ್ಷದಲ್ಲಿ ನಿಮ್ಮ ಮುಂದಿನ ಹೆಜ್ಜೆ ಏನು?’ ಎಂಬ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಲು ನಿರಾಕರಿಸಿದರು. ಈ ಸಭೆಗೆ ಮೊದಲು ಮುಖ್ಯಮಂತ್ರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು. ಅಪ್ಪ- ಮಕ್ಕಳ ಆಟಕ್ಕೆ ತಕ್ಕ ಉತ್ತರ ನೀಡುವುದಾಗಿ ಗುಡುಗಿದರು.

‘ದೇವೇಗೌಡರು ಹಾಗೂ ಅವರ ಮಕ್ಕಳು ರಾಜಭವನದಲ್ಲಿ ಕುಳಿತು ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕುರಿತು ಅವರಿಗೆ ಆಸಕ್ತಿ ಇಲ್ಲ. ವಿಧಾನಮಂಡಲ ಅಧಿವೇಶನವನ್ನು ಹಾಳು ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೇಟ್ಲಿ ಭೇಟಿಗೆ ಮೊದಲು ಯಡಿಯೂರಪ್ಪ ಪಕ್ಷದ ಮುಖಂಡರಾದ ರವಿಶಂಕರ ಪ್ರಸಾದ್,  ಶಾನವಾಜ್ ಹುಸೇನ್ ಅವರ ಜತೆಗೂ ಮಾತುಕತೆ ನಡೆಸಿದರು. ಬಿಜೆಪಿ ಸರ್ಕಾರ ಅಭದ್ರಗೊಳಿಸುವ ಚಟುವಟಿಕೆಗಳನ್ನು ರಾಜ್ಯಪಾಲರು ನಿಲ್ಲಿಸದಿದ್ದರೆ ದೇಶದಾದ್ಯಂತ ಚಳವಳಿ ನಡೆಸುವುದಾಗಿ ರವಿಶಂಕರ್ ಎಚ್ಚರಿಕೆ ನೀಡಿದರು.

‘ಪ್ರಧಾನಿ ಮನಮೋಹನ್ ಸಿಂಗ್ ಅವರೇ ಭಾರದ್ವಾಜ್ ಅವರನ್ನು ಹದ್ದುಬಸ್ತಿನಲ್ಲಿಡಿ’ ಎಂದು ಒತ್ತಾಯಿಸಿದರು. ‘ಜೆಡಿಎಸ್ ಬೆಂಬಲದಿಂದ ಉತ್ತೇಜಿತಗೊಂಡಿರುವ ಕಾಂಗ್ರೆಸ್ಸು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದು ಆಗಬಾರದು. ರಾಜ್ಯಪಾಲ ಕಾಂಗ್ರೆಸ್ ನಿರ್ದೇಶಿತ ಕ್ಷಿಪಣಿ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರ ಪದೇ ಪದೇ ಕಾಂಗ್ರೇಸ್ಸೇತರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಈ ದಿಸೆಯಲ್ಲಿ ಎಲ್ಲ ಇತಿಮಿತಿ ಮೀರಿ ನಡೆದುಕೊಳ್ಳಲಾಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವ  ಕೃತ್ಯವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯಪಾಲರು ಬೆಳಿಗ್ಗೆ ಬೆಂಗಳೂರಿನಲ್ಲಿ ವಕೀಲರು ಸಲ್ಲಿಸಿರುವ ದೂರು ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ. ಅರುಣ್ ಜೇಟ್ಲಿ ಈಚೆಗೆ ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅನಂತರ ಸಂಘರ್ಷದ ಹಾದಿ ಬಿಟ್ಟು ಸುಮಧುರ ಬಾಂಧವ್ಯ ಹೊಂದುವಂತೆ ಮುಖ್ಯಮಂತ್ರಿಗೆ ಕಿವಿ ಮಾತು ಹೇಳಿದ್ದರು.

‘ಹೋಗು ಎಂದರೆ ಹೋಗುತ್ತೇನೆ’: ಬೆಂಗಳೂರು: ‘ಇಲ್ಲಿ ಇರುವ ತನಕ ನನ್ನ ಕರ್ತವ್ಯ ನಾನು ನಿರ್ವಹಿಸುತ್ತೇನೆ. ದೂರು ನೀಡುವ ಸ್ವಾತಂತ್ರ್ಯ ಅವರಿಗೆ (ಬಿಜೆಪಿಯವರಿಗೆ) ಇದೆ. ವಾಪಸ್ ಬನ್ನಿ ಎಂದರೆ ಹೋಗುತ್ತೇನೆ.’

ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಬಿಜೆಪಿಯ ನಾಯಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಮನವಿ ಸಲ್ಲಿಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಎಚ್.ಆರ್. ಭಾರದ್ವಾಜ್ ಅವರು ನೀಡಿದ ಖಡಕ್ ಪ್ರತಿಕ್ರಿಯೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.