ADVERTISEMENT

ಟಿಕೆಟ್‌ ನೀಡಿಕೆಗೆ ಗೆಲುವೇ ಮಾನದಂಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:51 IST
Last Updated 28 ಅಕ್ಟೋಬರ್ 2017, 19:51 IST
ಟಿಕೆಟ್‌ ನೀಡಿಕೆಗೆ ಗೆಲುವೇ ಮಾನದಂಡ
ಟಿಕೆಟ್‌ ನೀಡಿಕೆಗೆ ಗೆಲುವೇ ಮಾನದಂಡ   

ಬೆಂಗಳೂರು: ‘2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 113 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರವೇ ಟಿಕೆಟ್ ನೀಡಲಾಗುತ್ತದೆ’ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ.ಪರಮೇಶ್ವರ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಏಳು ವರ್ಷ ಪೂರೈಸಿದ ಕಾರಣಕ್ಕೆ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕರ ಮಕ್ಕಳು, ಕುಟುಂಬದ ಸದಸ್ಯರು ಯಾರೇ ಆಗಲಿ ಪಕ್ಷಕ್ಕಾಗಿ ದುಡಿದಿದ್ದರೆ ಅರ್ಜಿ ಸಲ್ಲಿಸಲಿ. ಗೆಲ್ಲುವ ಸಾಮರ್ಥ್ಯ ಪರಿಗಣಿಸಿ ಟಿಕೆಟ್ ನೀಡಲಾಗುವುದು. ಮಹಿಳೆಯರು ಎಷ್ಟು ಅರ್ಜಿಗಳನ್ನು ಸಲ್ಲಿಸುತ್ತಾರೆ ಎಂಬುದನ್ನು ನೋಡಿ ಆದ್ಯತೆ ನೀಡಲಾಗುವುದು. ಎಲ್ಲರಿಗೂ ಗೆಲುವೇ ಮಾನದಂಡ’ ಎಂದರು.

ಸಿಎಲ್‌ಪಿ ನಿರ್ಧಾರ: ‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರಲ್ಲಾ’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ ಪಕ್ಷದ ಪದ್ಧತಿ ಅನುಸಾರವೇ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಈ ಕುರಿತು ಅಂತಿಮ ತೀರ್ಮಾನ ಕೈಗೊಂಡು  ಹೈಕಮಾಂಡ್‌ಗೆ ಕಳುಹಿಸುತ್ತದೆ’ ಎಂದರು.

ADVERTISEMENT

ನನಗೆ ಗೊತ್ತಿಲ್ಲ!: ‘ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ 1 ಗಂಟೆ 45 ನಿಮಿಷಕ್ಕೂ ಹೆಚ್ಚು ಕಾಲ ಮಹತ್ವದ ಮಾತುಕತೆ ನಡೆಸಿರುವ ವಿಷಯ ನನಗೆ ಗೊತ್ತಿಲ್ಲ. ಶಿವಕುಮಾರ್ ಅವರನ್ನು ಈ ಕುರಿತು ವಿಚಾರಿಸುತ್ತೇನೆ’ ಎಂದು ತಿಳಿಸಿದರು.

‘ಕೈ’ ಕೊಟ್ಟ ವಿದ್ಯುತ್‌: ‘ನೀವು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ’ ಎಂಬ ಪ್ರಶ್ನೆಗೆ ‘ಜನ ತೀರ್ಮಾನ ಮಾಡಿದರೆ ಸ್ಪರ್ಧಿಸುತ್ತೇನೆ’ ಎಂದು ಪರಮೇಶ್ವರ ಹೇಳಿದರು. ಆದರೆ, ಈ ಮಾತು ಮುಗಿಸುವಷ್ಟರಲ್ಲಿಯೇ ವಿದ್ಯುತ್‌ ಕೈಕೊಟ್ಟಿತು!

ದುರುಪಯೋಗ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆದಾಯ ತೆರಿಗೆ (ಐ.ಟಿ), ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳವನ್ನು (ಸಿಬಿಐ) ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂಬ ಆರೋಪವನ್ನು  ಪುನರುಚ್ಚರಿಸಿದರು.

‘ಗಣಪತಿ ಆತ್ಮ‌ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಸಿಬಿಐ ದಾಖಲಿಸಿರುವ ದೂರು ರಾಜಕೀಯ ಪ್ರೇರಿತ. ಇದಕ್ಕಾಗಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಪಕ್ಷ ಮತ್ತು ಸರ್ಕಾರ ತೀರ್ಮಾನಿಸಿದೆ’ ಎಂದರು.

‘ಗಣಪತಿ ಪ್ರಕರಣಕ್ಕೂ ಜಾರ್ಜ್‌ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ. ಪ್ರಾಮಾಣಿಕ ತನಿಖಾಧಿಕಾರಿಗಳು ಬಿ ರಿಪೋರ್ಟ್‌ ನೀಡಿದ್ದಾರೆ. ಆದಾಗ್ಯೂ, ಕೇಸಿನ ಯೋಗ್ಯತೆ (ಮೆರಿಟ್‌) ಅನುಸಾರ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ. ಆಮೇಲೆ ಜಾರ್ಜ್‌ ರಾಜೀನಾಮೆ ಬಗ್ಗೆ ತೀರ್ಮಾನ ಮಾಡೋಣ’ ಎಂದರು.

ಬಿಜೆಪಿ ಸಂಸದರ ವಿರುದ್ಧ 111 ಕ್ರಿಮಿನಲ್ ಕೇಸುಗಳಿವೆ. ಬಿಜೆಪಿ ಇನ್ನೊಬ್ಬರಿಗೆ ಉಪದೇಶ ಮಾಡುವ ಮುನ್ನ ತನ್ನ ನೈತಿಕತೆಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.