ADVERTISEMENT

ಡಾ.ಕೆ.ಕೆಂಪೇಗೌಡರಿಗೆ ಹಾಮಾನಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 19:59 IST
Last Updated 5 ಫೆಬ್ರುವರಿ 2013, 19:59 IST
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮಂಡ್ಯದ ಕರ್ನಾಟಕ ಸಂಘ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಡಾ.ಕೆ.ಕೆಂಪೇಗೌಡ ಅವರಿಗೆ ಸಂಸ್ಕೃತ ವಿ.ವಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರು `ಹಾಮಾನಾ ಪ್ರಶಸ್ತಿ' ಪ್ರದಾನ ಮಾಡಿದರು. ಡಾ.ಪದ್ಮಾ ಶೇಖರ, ಸಚಿವ ಡಿ.ಎನ್.ಜೀವರಾಜ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಹರಿಶಂಕರ್, ಕುಲಪತಿಗಳಾದ ಡಾ.ಎಚ್.ಬಿ.ವಾಲಿಕಾರ, ಎಂ.ಜಿ.ಕೃಷ್ಣನ್, ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಇದ್ದಾರೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮಂಡ್ಯದ ಕರ್ನಾಟಕ ಸಂಘ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಡಾ.ಕೆ.ಕೆಂಪೇಗೌಡ ಅವರಿಗೆ ಸಂಸ್ಕೃತ ವಿ.ವಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರು `ಹಾಮಾನಾ ಪ್ರಶಸ್ತಿ' ಪ್ರದಾನ ಮಾಡಿದರು. ಡಾ.ಪದ್ಮಾ ಶೇಖರ, ಸಚಿವ ಡಿ.ಎನ್.ಜೀವರಾಜ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಹರಿಶಂಕರ್, ಕುಲಪತಿಗಳಾದ ಡಾ.ಎಚ್.ಬಿ.ವಾಲಿಕಾರ, ಎಂ.ಜಿ.ಕೃಷ್ಣನ್, ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಇದ್ದಾರೆ.   

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮಂಡ್ಯದ ಕರ್ನಾಟಕ ಸಂಘ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಡಾ.ಕೆ.ಕೆಂಪೇಗೌಡ ಅವರಿಗೆ `ಹಾಮಾನಾ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಡಾ.ಹಾಮಾನಾ ಅವರ ನೆನಪನ್ನು ಚಿರಂತನವಾಗಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಭಾಷಾ ವಿಜ್ಞಾನ ಹಾಗೂ ಕನ್ನಡ ಕಟ್ಟುವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಾಗೂ ಭಾಷಾ ವಿಜ್ಞಾನದಲ್ಲಿ ಮೊದಲ ಪಿ.ಎಚ್‌ಡಿ, ಡಿ.ಲಿಟ್ ಪದವಿ ಪಡೆದಿರುವ ಕೆಂಪೇಗೌಡರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ್ಙ 25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಕಂಚಿನ ವಿಗ್ರಹ ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆಂಪೇಗೌಡ, `ಹಾಮಾನಾ ಹಾಗೂ ನಾನು 25 ವರ್ಷಗಳ ಒಡನಾಟ ಹೊಂದಿದ್ದೆವು. ಅವರು ನನ್ನ ಗುರುಗಳೂ ಹೌದು. ಭಾಷಾ ವಿಜ್ಞಾನದ ಅಧ್ಯಾಪಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಹಾಮಾನಾ ಸದಾ ಸ್ಮರಣೀಯರು. ಡಾ.ದೇ.ಜವರೇಗೌಡ ಮತ್ತು ಹಾಮಾನಾ ಅವರು ಮೂರು ತಿಂಗಳು ಕಾಲ ನನ್ನನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸುತ್ತಿಸಿ, ಭಾಷೆಯ ಸೊಗಡು ಪರಿಚಯಿಸಿದರು. ಇಲ್ಲವಾದಲ್ಲಿ ನಾನು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ' ಎಂದು ನೆನಪಿಸಿಕೊಂಡರು.

ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, `ಹಾಮಾನಾ ಕನ್ನಡದ ಕಟ್ಟಾಳು, ಕನ್ನಡದ ರಾಯಭಾರಿ. ಕನ್ನಡಕ್ಕೆ ಮೊದಲ ಬಾರಿಗೆ ವಿಶ್ವಮಾನ್ಯತೆ ತಂದುಕೊಟ್ಟ ಕೀರ್ತಿ ಬಿ.ಎಂ.ಶ್ರೀಕಂಠಯ್ಯ ಅವರಿಗೆ ಸಲ್ಲುತ್ತದೆ. ಆ ಬಳಿಕ ಆ ಸಂಪ್ರದಾಯವನ್ನು ಹಾಮಾನಾ ಮುಂದುವರಿಸಿಕೊಂಡು ಬಂದರು. ಕೇಂದ್ರದ ಆದೇಶಗಳು ಕನ್ನಡದಲ್ಲಿ ಪ್ರಕಟವಾಗಬೇಕು, ಭಾಷಾ ಮಾಧ್ಯಮ ಕನ್ನಡವೇ ಆಗಿರಬೇಕು ಎಂದು ಹಾಮಾನಾ ಸದಾ ಕನವರಿಸುತ್ತಿದ್ದರು' ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.  ಎನ್. ಜೀವರಾಜ ಮಾತನಾಡಿ, `ಭಾಷಾ ವಿಜ್ಞಾನ ಮತ್ತು ಕನ್ನಡಕ್ಕೆ ಹಾಮಾನಾ ಕೊಡುಗೆ ಅಪಾರ. ಅದೊಂದು ಬಾರಿ ಅವರನ್ನು ಗುಲ್ಬರ್ಗ ವಿ.ವಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿನ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅವರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ನಮ್ಮ ರಾಜಕಾರಣಿಗಳ ಹಾಗೆ ವಾಪಸು ಪಡೆಯಲಿಲ್ಲ. ರಾಜೀನಾಮೆ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುವಂತೆ ಮಾಡಲಿಲ್ಲ. ಇದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.