ಬೆಂಗಳೂರು: ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಪರ್ಸನಲ್ ಕಂಪ್ಯೂಟರ್, ಇಲೆಕ್ಟ್ರಾನಿಕ್ ರೀಡರ್‌ಗಳಂತಹ ಮಾಹಿತಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ಸಾಧನಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳನ್ನು ಕಡ್ಡಾಯವಾಗಿ ಅಳವಡಿಸಲು ‘ಚೇಂಜ್ ಡಾಟ್ ಓಆರ್‌ಜಿ’ ಮೂಲಕ ಅಭಿಯಾನ ಆರಂಭಿಸಲಾಗಿದೆ.
ಡಿಜಿಟಲ್ ಉಪಕರಣಗಳನ್ನು ತಯಾರಿಸುವಂತಹ ಕಂಪೆನಿಗಳು ಕೂಡಲೇ ಭಾರತೀಯ ಭಾಷೆಗಳನ್ನು ಅಳವಡಿಸಲು ಕಟ್ಟುನಿಟ್ಟಾದ ಆದೇಶ ನೀಡುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಆನ್‌ಲೈನ್ ಮೂಲಕ ಮನವಿ ಪತ್ರ ಬರೆಯಲಾಗಿದ್ದು, ದೇಶ– ವಿದೇಶಗಳಲ್ಲಿರುವ ಮುನ್ನೂರಕ್ಕೂ ಹೆಚ್ಚು ಜನ ಇದಕ್ಕೆ ಸಹಿ ಮಾಡುವ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಹೋರಾಟದ ಈ ಕಿಡಿ ಹೊತ್ತಿಕೊಳ್ಳಲು ಮುಖ್ಯ ಕಾರಣ, ಕನ್ನಡದ ಪ್ರಖ್ಯಾತ ಕತೆಗಾರ ವಸುಧೇಂದ್ರ ಪ್ರಕಟಿಸಿದ ‘ಐದು ಪೈಸೆ ವರದಕ್ಷಿಣೆ’ ಎಲೆಕ್ಟ್ರಾನಿಕ್ ಪುಸ್ತಕ. ಇದನ್ನು (ಇ–ಬುಕ್) ಕಿಂಡಲ್ (ಅಮೆಜಾನ್‌ನ ವಾಚನ ಸಾಧನ) ಮೂಲಕ ಮಾರಾಟಕ್ಕೆ ಮುಂದಾದರು. ಆದರೆ, ಕಿಂಡಲ್ ಸಾಧನ ಕನ್ನಡ ಪುಸ್ತಕದ ವಾಚನದ ಅಳವಡಿಕೆಗೆ ಪೂರಕವಾಗಿರಲಿಲ್ಲ.
ಭಾರತೀಯ ಭಾಷೆಗಳ ನಿರ್ಲಕ್ಷ್ಯ: ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ಸಾಧನಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಆದರೆ, ಇವು ಭಾರತೀಯ ಭಾಷೆಗಳಿಗೆ ಪೂರಕವಾಗಿಲ್ಲ. ಸ್ಮಾರ್ಟ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ– ಬುಕ್ ರೀಡರ್ ಮತ್ತು ಇತರ ಸಾಧನಗಳು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳ ಮಾರಾಟದಿಂದ ಡಿಜಿಟಲ್ ಉಪಕರಣಗಳ ತಯಾರಿಕಾ ಕಂಪನಿಗಳು ಸಾವಿರಾರು ಕೋಟಿ ಆದಾಯ ಗಳಿಸುತ್ತಿವೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಆನ್‌ಲೈನ್ ಅಭಿಯಾನಕ್ಕೆ ಮುನ್ನಡಿ ಹಾಡಿದವರು ಪತ್ರಕರ್ತ ಹಾಗೂ ಲೇಖಕ ಬೇಳೂರು ಸುದರ್ಶನ. ಈ ಪ್ರಯತ್ನಕ್ಕೆ ಸಾಹಿತಿಗಳಾದ ವಿವೇಕ್ ಶ್ಯಾನ್‌ಭಾಗ್, ವಸುಧೇಂದ್ರ, ಓ.ಎಲ್.ನಾಗಭೂಷಣ, ಎಂ.ಎಸ್. ಶ್ರೀರಾಮ್, ಎಚ್.ಎಸ್. ರಾಘವೇಂದ್ರ, ಗ್ಲೋಬಲ್ ಎಡ್ಜ್ ಸಾಫ್ಟ್‌ನ ಸ್ಥಾಪಕ ಎಂ.ಪಿ. ಕುಮಾರ್ ಸಹಿ ಮಾಡಿ ಸಹಮತ ಸೂಚಿಸಿದ್ದಾರೆ. ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಇತರ ಭಾಷಿಕರು ಈ ಯತ್ನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿರುವ ಎಲ್ಲ ಭಾಷೆಗಳೂ ಮಾಹಿತಿ ತಂತ್ರಜ್ಞಾನ ಸಾಧನಗಳಲ್ಲಿ ಅಂತರ್‌ನಿರ್ಮಿತವಾಗಿರಬೇಕು. ಇವು ಯುನಿಕೋಡ್ ಬಳಸಲು ಸಹಾಯಕವಾಗುವಂತಿರಬೇಕು. ಭಾರತೀಯ ಭಾಷೆಯನ್ನು ಟೈಪ್ ಮಾಡುವಾಗ ಸಮಸ್ಯೆ ಆಗದಂತೆ ಸುಲಭವಾಗಿರಬೇಕು.
ಭಾರತದ ಎಲ್ಲ ಅಧಿಸೂಚಿತ ಮತ್ತು ಅಧಿಸೂಚಿತವಲ್ಲದ ಭಾಷೆಗಳಿಗೂ ಇದು ಅನ್ವಯವಾಗಬೇಕು ಎಂಬ ನಿರ್ದೇಶನವನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನು ಕಾರ್ಯಗತಗೊಳಿಸಲು ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಿ, ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಎಲ್ಲ ಸಂಶೋಧನೆಗಳ ಉಸ್ತುವಾರಿ ನೋಡಿಕೊಳ್ಳಬೇಕು. ಇದನ್ನು ಸರ್ಕಾರದ ವತಿಯಿಂದಲಾದರೂ ಸ್ಥಾಪಿಸಬಹುದು, ಇಲ್ಲವೇ, ಖಾಸಗಿ– ಸಾರ್ವಜನಿಕ ಸಹಭಾಗಿತ್ವದಲ್ಲಿಯಾದರೂ ಸ್ಥಾಪಿಸಬಹುದು ಎಂದು ಮನವಿಯಲ್ಲಿ ಸಲಹೆ ನೀಡಲಾಗಿದೆ.
ಐಟಿ ಸಾಧನಗಳಲ್ಲಿ ಪ್ರಮಾಣಿತ, ಏಕರೂಪದ ಫಾಂಟ್‌ಗಳಿರಬೇಕು. ಇವು ಎಲ್ಲ ಭಾರತೀಯ ಭಾಷೆಗಳಿಗೂ ಅನ್ವಯವಾಗುವಂತಿರಬೇಕು. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾಡಲು ಅನುಕೂಲಕರವಾಗಿಯೂ ಇರಬೇಕು ಎಂದಿದ್ದಾರೆ.
ಜನ ಸಾಮಾನ್ಯರ ಸಂವಹನಕ್ಕೆ ಪೂರಕ: ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ಲೋಬಲ್ ಎಡ್ಜ್ ಸಾಫ್ಟ್‌ನ ಸ್ಥಾಪಕ ಎಂ.ಪಿ. ಕುಮಾರ್, ‘ಮಾಹಿತಿ ತಂತ್ರಜ್ಞಾನದ ಡಿಜಿಟಲ್ ಉಪಕರಣಗಳಲ್ಲಿ ಎಲ್ಲ ಭಾರತೀಯ ಭಾಷೆಗಳನ್ನು ಅಳವಡಿಸಬೇಕು. ಇದರಿಂದ ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸಂವಹನ ನಡೆಸಲು ಸಾಧ್ಯ’ ಎಂದರು.
ಚಿಲಿ, ಹಿಬ್ರೊ, ಫಿನಿಷ್‌ನಂತಹ ಅತಿ ಕಡಿಮೆ ಸಂಖ್ಯೆಯ ಜನ ಮಾತನಾಡುವ ಭಾಷೆಗಳನ್ನೂ ಐಟಿ ಉಪಕರಣಗಳಲ್ಲಿ ಅಳವಡಿಸಲಾಗಿದೆ. ಹೀಗಿದ್ದ ಮೇಲೆ ಭಾರತೀಯ ಭಾಷೆಗಳಲ್ಲಿ ಏಕೆ ಅಳವಡಿಸಬಾರದು. ಚೀನಾ ಬಿಟ್ಟರೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟವಾಗುವ ದೇಶವೆಂದರೆ ಭಾರತ ಎಂದು ಹೇಳಿದರು.
‘ಈ ಅಹವಾಲು ಮತ್ತು ಬೇಡಿಕೆ ಆಧುನಿಕ ತಂತ್ರಜ್ಞಾನ ಹೊತ್ತ ಯಂತ್ರಗಳಲ್ಲಿ ಅಳವಡಿಸುವ ತಂತ್ರಾಂಶ ಕನ್ನಡ ಮತ್ತು ಭಾರತೀಯ ಭಾಷಾಪರವಾಗಿ ಕೂಡಾ ಇರಬೇಕು ಎನ್ನುವುದೇ ಆಗಿದೆ. ಅಮೆಜಾನ್ ಆಗಲೀ, ಕಿಂಡಲ್ ಆಗಲೀ ವ್ಯಾಪಾರೀ ಸಂಸ್ಥೆಗಳು. ಅವುಗಳ ಜೊತೆಗೆ ವ್ಯಾಪಾರೀ ರೀತಿಯಿಂದಲೇ ನಡೆದುಕೊಳ್ಳಬೇಕು.
ಇದಕ್ಕೂ ಕನ್ನಡ ಪ್ರೀತಿಗೂ ತಾಳೆಹಾಕುವುದು ಸರಿಯಾದ ಮಾರ್ಗವಲ್ಲ. ನಾವು ಪ್ರಶ್ನಿಸಿಕೊಳ್ಳಬೇಕಾದ್ದು ಈ ಗಣಕ ತಂತ್ರದ ಲೋಕದಲ್ಲಿ ಕನ್ನಡಕ್ಕೆ ಸ್ಥಾನ ಬೇಕೇ ಎನ್ನುವುದನ್ನಷ್ಟೇ’ ಎಂದಿದ್ದಾರೆ ಕತೆಗಾರ ಹಾಗೂ ಐಐಎಂ ಸಂದರ್ಶಕ ಪ್ರಾಧ್ಯಾಪಕ ಎಂ.ಎಸ್.ಶ್ರೀರಾಮ್.
ಕನ್ನಡದ ನಿರ್ಲಕ್ಷ್ಯ: ‘ಎಲ್ಲ ಡಿಜಿಟಲ್ ಸಾಧನಗಳಲ್ಲಿ ಕನ್ನಡ ಬೇಕೇ ಬೇಕು. ನಮ್ಮ ಅಕ್ಕ, ತಂಗಿ, ಹಳ್ಳಿ ಜನರಿಗೆ ಅರ್ಥವಾಗುವ ಮತ್ತು ನಿತ್ಯವೂ ಬಳಸುವ ಭಾಷೆ ಅವುಗಳಲ್ಲಿ ಇರಬೇಕು. ಇದಕ್ಕಾಗಿ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುವ ಕೆಲಸ ಮಾಡೋಣ ಎಂದು ಖ್ಯಾತ ಕತೆಗಾರ ವಸುಧೇಂದ್ರ ಹೇಳಿದ್ದಾರೆ.
‘ಅಮೆಜಾನ್ ಐದು ಭಾರತೀಯ ಭಾಷೆಗಳಲ್ಲಿ ಕಿಂಡಲ್ ಬಿಡುಗಡೆ ಮಾಡುತ್ತಿದೆ. ಆದರೆ, ಅದರಲ್ಲಿ ಕನ್ನಡ ಇಲ್ಲದಿರುವುದು ದುರಾದೃಷ್ಟ. ಇಡೀ ದೇಶದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಉಚ್ಛ್ರಾಯದಲ್ಲಿದೆ. ವರ್ಷಕ್ಕೆ 10 ಸಾವಿರ ಕನ್ನಡ ಪುಸ್ತಕಗಳು ಪ್ರಕಟವಾಗುತ್ತವೆ. ಕನ್ನಡದ ಜಲ, ನೆಲ ಭಾಷೆ ಬಳಸಿಕೊಂಡಿರುವ ಅಮೆಜಾನ್ ಕನ್ನಡಕ್ಕೆ ಮನ್ನಣೆ ನೀಡಿಲ್ಲ’ ಎಂದು ವಿಷಾದಿಸಿದರು.
*
ಗ್ರಾಹಕರು ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಖರೀದಿ ಮಾಡಿದಾಗ ಅದರಲ್ಲಿ ಅವರ ಭಾಷೆಯನ್ನೇ ಬಳಸುವಂತಾದರೆ ಮಾತ್ರ ಭಾಷೆ ಬೆಳೆಯುತ್ತದೆ ಮತ್ತು ಉಳಿಯುತ್ತದೆ
-ಬೇಳೂರು ಸುದರ್ಶನ, ಲೇಖಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.