ADVERTISEMENT

ತಜ್ಞರ ಸಮಿತಿ ರಚನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 17:40 IST
Last Updated 2 ಫೆಬ್ರುವರಿ 2011, 17:40 IST

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಪೇಪರ್ ಮಿಲ್ಸ್ ಕಾರ್ಖಾನೆಯ ಉಪಯೋಗಕ್ಕೆ 90ರ ದಶಕದಲ್ಲಿ ಪಡೆದುಕೊಂಡಿರುವ ಸುಮಾರು 55 ಸಾವಿರ ಎಕರೆ ಅರಣ್ಯ ಜಮೀನನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಜ್ಞರ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬುಧವಾರ ಆದೇಶಿಸಿದೆ.

ಈ ಸಮಿತಿಯು ಕಾರ್ಖಾನೆಯ ಇಬ್ಬರು ತಜ್ಞರು, ಕೇಂದ್ರ,ರಾಜ್ಯ ಸರ್ಕಾರಗಳ ತಲಾ ಒಬ್ಬರು ತಜ್ಞರನ್ನು ಒಳಗೊಂಡಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ವ್ಯಾಪ್ತಿಗೆ ಒಳಪಡುವ ಸುಮಾರು 187.5ಲಕ್ಷ ಎಕರೆ ಅರಣ್ಯ ಭೂಮಿಯನ್ನು ಈ ಕಾರ್ಖಾನೆಗೆ ಸರ್ಕಾರ ನೀಡಿರುವುದನ್ನು ಪ್ರಶ್ನಿಸಿ ಕೆಲ ಸ್ಥಳೀಯರು 1998ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಈ ಜಮೀನಿನ ಪೈಕಿ ವನ್ಯಮೃಗಗಳ ತಾಣವಾಗಿದ್ದ ಸುಮಾರು 1,212 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ಸರ್ಕಾರ ನೀಡಿದೆ. ಅಂತೆಯೇ 6,098 ಎಕರೆ ಅರಣ್ಯೇತರ ಜಮೀನನ್ನು ಕಂತಿನ ಆಧಾರದ ಮೇಲೆ 2015 ಅಂತ್ಯದ ಒಳಗೆ ಒಪ್ಪಿಸುವಂತೆ ಅದು ಹೈಕೋರ್ಟ್‌ನಿಂದ ಕಳೆದ ವಿಚಾರಣೆ ವೇಳೆ ನಿರ್ದೇಶಿತಗೊಂಡಿದೆ.

ಆದರೆ ಈಗ ಇರುವ ವಿವಾದ 55 ಸಾವಿರ ಎಕರೆ ಅರಣ್ಯ ಜಮೀನಿನದ್ದು. ಈ ಜಮೀನನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸುವ ಬಗ್ಗೆ ಕೆಲವೊಂದು ಗೊಂದಲದ ಹಿನ್ನೆಲೆಯಲ್ಲಿ ಸಮಿತಿ ರಚಿಸುವಂತೆ ಪೀಠ ನಿರ್ದೇಶಿಸಿದೆ. ಸಮಿತಿಯ ನೇತೃತ್ವವನ್ನು ಪರಿಸರ ಮತ್ತು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಎನ್. ಯಲ್ಲಪ್ಪ ರೆಡ್ಡಿ ವಹಿಸಬೇಕು ಎಂದು ಪೀಠ ತಿಳಿಸಿದೆ.

‘ಅರಣ್ಯ ಭೂಮಿಯ ಬಳಕೆ ಕುರಿತಂತೆ ಯಾವುದೇ ರೀತಿಯ ಆದೇಶ ಹೊರಡಿಸಲು ನಾವು ತಜ್ಞರಲ್ಲ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ನೇಮಕ ಮಾಡಲಾಗುವುದು’ ಎಂದು ಪೀಠ ತಿಳಿಸಿತು. ಈ ಸಮಿತಿಯು ನಗರದಲ್ಲಿ ಇರುವ ಕಾರ್ಖಾನೆಯ ಕೇಂದ್ರ ಕಚೇರಿಯಲ್ಲಿ ಬರುವ ಮಾರ್ಚ್ 1ರಂದು ಪ್ರಥಮ ಸಭೆ ಸೇರಬೇಕು. ಕಾಲಕಾಲಕ್ಕೆ ಸಭೆ ಸೇರಿ ಮಾರ್ಚ್ 29ರ ಒಳಗೆ ವರದಿಯನ್ನು ಅಂತಿಮಗೊಳಿಸಬೇಕು ಮತ್ತು ಏ.1ಕ್ಕೆ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.