ಕೋಲಾರ: ಜಿಲ್ಲೆಯಲ್ಲಿ ಜುಲೈ- ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ್ದ ರಾಗಿ ಈಗ ತೆನೆಗಟ್ಟುತ್ತಿದ್ದರೂ ಅದಕ್ಕೆ ಬೇಕಾದ ಮಳೆ ಮಾತ್ರ ಕಾಣದಾಗಿದೆ. ತೆನೆಗಟ್ಟುತ್ತಿರುವ ರಾಗಿ ಕಣ್ಣಮುಂದೆಯೇ ಒಣಗುತ್ತಿದೆ. ಮಳೆ ಇಲ್ಲವೆಂದು ಹಾಗೇ ಒಣಗಲು ಬಿಟ್ಟರೆ ರಾಗಿಯೂ ಸಿಗುವುದಿಲ್ಲ, ರಾಸುಗಳಿಗೆ ಮೇವೂ ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ತಾಲ್ಲೂಕಿನ ಕಾಮಧೇನುಹಳ್ಳಿಯ ರೈತ ಜಿ.ಪ್ರಕಾಶ್ ಅವರೂ ಈ ಸ್ಥಿತಿಗೆ ಹೊರತಾಗೇನೂ ಇಲ್ಲ. ತಮ್ಮ ಒಂದು ಎಕರೆ ಭೂಮಿಯಲ್ಲಿ ಆಗಸ್ಟ್‌ನಲ್ಲಿ `ಇಂಡಾಫ್- 5~ ತಳಿ ರಾಗಿ ಬಿತ್ತನೆ ಮಾಡಿದ್ದರು. ಈಗ ಅವರ ಜಮೀನಿನಲ್ಲಿ ಅರಳಿ ನಿಂತಿರುವ ರಾಗಿ ತೆನೆಗಳಲ್ಲಿ ಹಾಲು ಇಳಿಯುವ ಕಾಲ.
ನೆಲದ ಮಣ್ಣಿನ ತೇವ ಆರಿ ಹತ್ತಾರು ದಿನಗಳಾಗಿವೆ. ಕಾದು ಕುಳಿತು ಸಾಕಾದ ಅವರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರ ಜಮೀನಿಗೆ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದಾಗ ಅವರು 6ನೇ ಟ್ಯಾಂಕರ್ ನೀರನ್ನು ಹರಿಸುತ್ತಿದ್ದರು. ಸಂಜೆ ಹೊತ್ತಿಗೆ ಇನ್ನೂ ಮೂರು ಟ್ಯಾಂಕರ್ ನೀರು ಹರಿಸುವ ಯೋಜನೆಯೂ ಅವರಲ್ಲಿತ್ತು.
ನೀರು ಹರಿಸುತ್ತಲೇ ಅವರು ತಮ್ಮ ಸಂಕಟ ತೋಡಿಕೊಂಡರು. `ನೀಲಂ ಚಂಡಮಾರುತದಿಂದ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವವಿತ್ತು. ತೇವ ಹೆಚ್ಚು ದಿನ ಇರಲಿಲ್ಲ. ತೇವವಾರಿದರೆ ತೆನೆಗಟ್ಟುತ್ತಿರುವ ರಾಗಿ ಒಣಗುತ್ತದೆ. ಆ ಮೇಲೆ ಕೈಗೆ ಏನೂ ಸಿಗುವುದಿಲ್ಲ. 15 ದಿನ ಕಾದರೂ ಮಳೆ ಬರಲಿಲ್ಲ. ಆದಕ್ಕೇ ಟ್ಯಾಂಕರ್ ನೀರನ್ನು ಹರಿಸಲು ನಿರ್ಧರಿಸಿದೆ~ ಎಂದರು.
ಒಂದು ಟ್ಯಾಂಕರ್ ನೀರಿಗೆ ರೂ 350 ಕೊಡುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಟ್ಯಾಂಕರ್ ನೀರು ಪಡೆದರೆ ಮೂರುವರೆ ಸಾವಿರ ರೂಪಾಯಿ ಕೊಡಲೇಬೇಕು. ಮುಂದಿನ ವಾರದ ಹೊತ್ತಿಗೆ ಮಳೆ ಬಾರದಿದ್ದರೆ ಮತ್ತೆ ಅಷ್ಟೇ ಹಣವನ್ನು ಕೊಟ್ಟು ನೀರು ಹರಿಸಲೂ ಅವರು ನಿರ್ಧರಿಸಿದ್ದಾರೆ.
`ದೀಪಾವಳಿವರೆಗೂ ಮಳೆಯ ಬಗ್ಗೆ ಆಸೆ ಇಟ್ಟುಕೊಂಡಿದ್ದೆ. ಅಲ್ಲಿಯವರೆಗೂ ಅಷ್ಟೋ ಇಷ್ಟೋ ತೇವವಿತ್ತು. ಆ ಮೇಲೆ ಅದೂ ಆರಿತು. ಹಾಲು ಇಳಿಯುವ ತೆನೆಗೆ ನೀರು ಕೊಡದಿದ್ದರೆ ನಷ್ಟ ಖಚಿತ. ಇತರೆ ರೈತರೂ ನೀರು ಹರಿಸದಿದ್ದರೆ ರಾಗಿ ಬೆಳೆ ದಕ್ಕುವುದಿಲ್ಲ~ ಎಂದು ಅವರು ನಿರಾಶೆಯ ನಿಟ್ಟುಸಿರು ಬಿಟ್ಟರು.
ಕಾಮಧೇನುಹಳ್ಳಿಯ ಅವರ ಜಮೀನಿಗೆ ನೀರು ಹರಿಸಲು ಸುತ್ತಮುತ್ತ ಯಾವುದೇ ಖಾಸಗಿ ಕೊಳವೆಬಾವಿಗಳೂ ಇಲ್ಲದಿರುವುದರಿಂದ ಅವರು ಕೋಲಾರದಿಂದ ನೀರನ್ನು ತರಿಸುತ್ತಿದ್ದಾರೆ.
`ಹಳ್ಳಿಯಲ್ಲಿ ಬೆಳೆಯುತ್ತಿರುವ ರಾಗಿಗೆ ನಗರದಿಂದ ಟ್ಯಾಂಕರ್ ನೀರು ಪೂರೈಸುತ್ತಿರುವದು, ಅನಿಶ್ಚಿತ ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರು ಬಸವಳಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ~ ಎಂದು ಕೃಷಿ ತಜ್ಞ ನೀಲಕಂಠೇಗೌಡ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.