ADVERTISEMENT

ತೊಡೆ ತಟ್ಟಿದ್ದ ದಾಯಾದಿ ಗುಂಪು ತಣ್ಣಗೆ

ಎನ್.ಉದಯಕುಮಾರ್
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಸುವರ್ಣ ವಿಧಾನಸೌಧ (ಬೆಳಗಾವಿ): ಬಿಜೆಪಿ ಮತ್ತು ಅದರಿಂದ ಸಿಡಿದ ನಾಯಕರು ಸಾರಥ್ಯ ವಹಿಸಿರುವ ಕೆಜೆಪಿಯ ಕಲಹ ಕ್ಲೈಮ್ಯಾಕ್ಸ್ ತಲುಪಬಹುದು ಎಂಬ ನಿರೀಕ್ಷೆ  ಹುಸಿಯಾಗಿದೆ. ತೊಡೆ ತಟ್ಟಿದ್ದ ಈ `ದಾಯಾದಿ ಗುಂಪು'ಗಳು ತಣ್ಣಗಾಗಿವೆ. ಎರಡೂ ಬಣಗಳು ಕಾದು ನೋಡುವ ತಂತ್ರಕ್ಕೆ ಶರಣಾಗಿವೆ.

ಹಾವೇರಿಯಲ್ಲಿ ಭಾನುವಾರ ಜರುಗಿದ ಕರ್ನಾಟಕ ಜನತಾ ಪಕ್ಷದ ಸಮಾವೇಶದ ವೇದಿಕೆಯಲ್ಲಿ ಬಿಜೆಪಿಯ 14 ಮಂದಿ ವಿಧಾನಸಭಾ ಸದಸ್ಯರು ಕಾಣಿಸಿಕೊಂಡಿದ್ದರು. ಇದರಿಂದ ಆಡಳಿತ ಪಕ್ಷ ಮುಜುಗರಕ್ಕೆ ಒಳಗಾಗಿತ್ತು. `ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಭಿನ್ನರನ್ನು ಬಾಣಲೆಗೆ ಹಾಕಿ ಹುರಿಯುತ್ತೇವೆ' ಎಂದು ಡಿ.ವಿ.ಸದಾನಂದಗೌಡ ಅಬ್ಬರಿಸಿದ್ದರು. ಶಾಸಕರು ಸಾಮೂಹಿಕ ರಾಜೀನಾಮೆಯ ಬೆದರಿಕೆ ಒಡ್ಡಿದ್ದರು. 

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಆಗಿರುವ ಈ ಬೆಳವಣಿಗೆ ಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ಅಷ್ಟೂ ಮಂದಿ ಶಾಸಕರು ರಾಜೀನಾಮೆ ನೀಡಿದರೆ ಬಹುಮತ ಕಳೆದುಕೊಳ್ಳುವ ಅಪಾಯವಿತ್ತು. ಈ ಕಾರಣಕ್ಕೇ ಕೋರ್ ಕಮಿಟಿ ಸಭೆಗೆ ಹೆಚ್ಚಿನ ಮಹತ್ವ ಬಂದಿತ್ತು. ಬೆಳಗಾವಿಯಲ್ಲಿ ಬುಧವಾರ ಸಮಿತಿಯ ಸಭೆ ಜರುಗಿತು. ಆದರೆ, ಶಿಸ್ತು ಕ್ರಮದ ನಿಟ್ಟಿನಲ್ಲಿ ಯಾವುದೇ ಮಹತ್ವದ ನಿರ್ಣಯ ಹೊರಬಿದ್ದಿಲ್ಲ.

ಶಾಸಕರಿಗೆ ಷೋಕಾಸ್ ನೋಟಿಸ್ ನೀಡಿ, ಅವರಿಂದ ಉತ್ತರ ಬಂದ ಬಳಿಕ ಸದಸ್ಯತ್ವ ಅನೂರ್ಜಿತಗೊಳಿಸುವಂತೆ ಸ್ಪೀಕರ್‌ಗೆ ಪತ್ರ ಬರೆಯುವ ಚಿಂತನೆ ನಡೆದಿದೆ ಎಂದು ಬಿಜೆಪಿ ಮುಖಂಡರು ವಿಧಾನಸೌಧ ಮೊಗಸಾಲೆಯಲ್ಲಿ ಹೇಳಿಕೊಂಡು ಅಡ್ಡಾಡಿದ್ದರು. ಕನಿಷ್ಠ ಕ್ರಮವಾದ ನೋಟಿಸ್ ನೀಡುವ ನಿರ್ಧಾರವನ್ನೂ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ, ಕಾಲ ದೂಡುವ ತಂತ್ರದ  ಮೊರೆ ಹೋಗಿದೆ.

ಸರ್ಕಾರ ಉಳಿಯಬೇಕಾದರೆ ತಮ್ಮ ಬೆಂಬಲ ಅಗತ್ಯ. ಚುನಾವಣೆ ಹೊಸಿಲಲ್ಲಿ ನಿಂತಿರುವಾಗ ಶಿಸ್ತು ಕ್ರಮ ಜರುಗಿಸುವ ಸಾಹಸಕ್ಕೆ ಪಕ್ಷ ಹೋಗುವುದಿಲ್ಲ ಎಂಬ ಧೈರ್ಯದಲ್ಲೇ ಶಾಸಕರು ಕೆಜೆಪಿಯ ವೇದಿಕೆ ಹತ್ತಿದ್ದರು. ಅವರ ಲೆಕ್ಕಾಚಾರದಂತೆಯೇ ಈ ಕ್ಷಣಕ್ಕೆ ಎಲ್ಲವೂ ನಡೆಯುತ್ತಿದೆ  ಎಂದು ಸಚಿವರೊಬ್ಬರು ಬೇಸರದ ದನಿಯಲ್ಲಿ ಪ್ರತಿಕ್ರಿಯಿಸಿದರು.   ಸಮಾವೇಶ ಸೇರುವ ಮೊದಲು `ವೇದಿಕೆ ಹತ್ತಿಸಿ, ನೋಡೋಣ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಬಿ.ಎಸ್.ಯಡಿಯೂರಪ್ಪ ಬಿರುದ್ಧ ಗುಡುಗಿದ್ದರು. ಅವರ ಮಾತು ಧಿಕ್ಕರಿಸಿ ಶಾಸಕರು, ಸಮಾವೇಶದಲ್ಲಿ ಭಾಗವಹಿಸಿದ್ದರು. ಈಗ ಅವರ ಮಾತನ್ನು ಅವರೇ ನುಂಗಿಕೊಳ್ಳುವ ಸ್ಥಿತಿ ಎದುರಾಗಿದೆ.

ಸಡಿಲಾದ ಓಲೇಕಾರ್ ನಿಲುವು: ನೋಟಿಸ್ ನೀಡಲು ನಿರ್ಧರಿಸಿದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ. ಮತ್ತೂ ಮುಂದುವರಿದರೆ ರಾಜ್ಯಪಾಲರನ್ನು ಕಾಣುತ್ತೇವೆ ಎಂದು ಬೆದರಿಕೆ ಹಾಕಿದ್ದ, ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಹಾವೇರಿ ಶಾಸಕ ನೆಹರೂ ಓಲೇಕಾರ ಅವರೂ ಈಗ ರಾಗ ಬದಲಿಸಿದ್ದಾರೆ. `ರಾಜೀನಾಮೆ ನೀಡಲು ನಾನು ರೆಡಿ. ಆದರೆ, ಅದಕ್ಕೆ ನಮ್ಮ ನಾಯಕರ (ಬಿಎಸ್‌ವೈ) ಒಪ್ಪಿಗೆ ಬೇಕು.ಒಬ್ಬೊಬ್ಬರೇ ರಾಜೀನಾಮೆ ನೀಡಬೇಡಿ ಅಂತ ಅವರು ಹೇಳಿದ್ದಾರೆ' ಎಂದು ಮೊದಲಿನ ನಿಲುವು ಸಡಿಲಗೊಳಿಸಿದರು.

`ನಮ್ಮ ಉಸಾಬರಿಗೆ ಬಂದರೆ ನಾವು ಬಿಡುವುದಿಲ್ಲ. (ಬಿಜೆಪಿ) ಅವರ ನಿರ್ಧಾರದ ಮೇಲೆ ನಮ್ಮ ನಡೆ ನಿಂತಿದೆ. ಅದು ಸಾಮೂಹಿಕ ನಿರ್ಧಾರ ಆಗಿರುತ್ತದೆ. ಅಂತಿಮ ತೀರ್ಮಾನಕ್ಕೆ ಕಾಲ ಪಕ್ವವಾಗಲಿ...' ಎಂದು ಉಸುರಿದರು. ಇದಕ್ಕೆ ತದ್ವಿರುದ್ಧ ರೀತಿಯಲ್ಲಿ ಸಿ.ಸಿ.ಪಾಟೀಲ ಪ್ರತಿಕ್ರಿಯಿಸಿದರು. ಇವರೂ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದರು. `ರಾಜೀನಾಮೆ ನೀಡುವಂತಹ ಸ್ಥಿತಿ ಉದ್ಭವಿಸಿಲ್ಲ. ರಾಜೀನಾಮೆಯಿಂದ ಏನು ಪ್ರಯೋಜನ? ಬಿಜೆಪಿಯಿಂದ ಆರಿಸಿ ಬಂದಿದ್ದೇನೆ. ಅವಧಿ ಮುಗಿಯುವವರೆಗೂ ಅದೇ ಪಕ್ಷದಲ್ಲಿ ಇರುತ್ತೇನೆ. ಸರ್ಕಾರದ ವಿರುದ್ಧ ಮತ ಚಲಾಯಿಸುವುದಿಲ್ಲ. ಒಂದು ವೇಳೆ ನೋಟಿಸ್ ಬಂದರೆ ಎಲ್ಲರೂ ಒಂದೆಡೆ ಕುಳಿತು ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.