ADVERTISEMENT

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಮಳೆ ಚುರುಕು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 20:08 IST
Last Updated 5 ಆಗಸ್ಟ್ 2013, 20:08 IST

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸೋಮವಾರ ಮತ್ತೆ ಅಬ್ಬರಿಸತೊಡಗಿದೆ. ಗಾಳಿ- ಮಳೆಯಿಂದಾಗಿ ನೇತ್ರಾವತಿ ನದಿ ಸಮುದ್ರ ಸೇರುವ ಅಳಿವೆಬಾಗಿಲಿನಲ್ಲಿ ಮೀನುಗಾರಿಕೆ ದೊಣಿಯೊಂದು ಮಗುಚಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಸೋಮವಾರ ಕೃಷ್ಣಾ ಮತ್ತು ಉಪನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.

ಮಂಗಳೂರು ವರದಿ: ಎಂಟು ಮಂದಿ ಮೀನುಗಾರರಿದ್ದ `ನಿಮ್ಮಿ ಕಲ್ಯಾಣಿ' ಹೆಸರಿನ ಟ್ರಾಲರ್ ದೋಣಿ ಮೀನುಗಾರಿಕೆಗೆಂದು ತೆರಳುತ್ತಿದ್ದಾಗ ಭಾರಿ ಗಾಳಿ, ಬೃಹತ್ ಅಲೆಯ ಅಬ್ಬರಕ್ಕೆ ಸಿಲುಕಿ ಮುಗುಚಿಬಿತ್ತು. ಸಮೀಪದಲ್ಲೇ ಇದ್ದ 'ಸಾಗರ ಕುಸುಮ' ಎಂಬ ಇನ್ನೊಂದು ದೋಣಿಯ ಸಿಬ್ಬಂದಿ ಅಪಾಯದಲ್ಲಿ ಸಿಲುಕಿದ್ದವರನ್ನು ಪಾರು ಮಾಡಿದರು.

ಈ ದೋಣಿ ಮುಗುಚಿದ್ದರಿಂದ ದೋಣಿ ಮಾಲೀಕರಾದ ಮಂಗಳೂರಿನ ಜಯಶ್ರೀ ಮೋಹನ್ ಮೆಂಡನ್ ಅವರಿಗೆ ಸುಮಾರು 50 ಲಕ್ಷ   ಹಾನಿಯ ಅಂದಾಜು ಮಾಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸುರೇಶ್ ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಒಟ್ಟು ಮೂರು ದೋಣಿಗಳು ವಾಪಸಾಗುವುದಕ್ಕೆ ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ಅವಕಾಶ ಕಲ್ಪಿಸಲಾಗಿದೆ, ಅಗತ್ಯ ಬಿದ್ದಾಗ ಇನ್ನಷ್ಟು ದೋಣಿಗಳಿಗೆ ಆಶ್ರಯ ನೀಡಲು ಎನ್‌ಎಂಪಿಟಿ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.

ಮೀನುಗಾರಿಕೆಗೆ ವಿಧಿಸಿದ್ದ ನಿಷೇಧ ಅವಧಿ ಕೊನೆಗೊಳ್ಳಲು ಇನ್ನು 5 ದಿನವಷ್ಟೇ ಬಾಕಿ ಇದ್ದು, ಭಾನುವಾರ ಬೆಳಿಗ್ಗೆಯಿಂದ ಸುಮಾರು 120ರಷ್ಟು ದೋಣಿಗಳು ಮೀನುಗಾರಿಕೆಗೆ ಕಡಲಿಗೆ ತೆರಳಿವೆ. ಭಾರಿ ಗಾಳಿ, ಮಳೆಗೆ ಈ ದೋಣಿಗಳು ಕಡಲಲ್ಲೇ ಮೀನುಗಾರಿಕೆ ನಡೆಸುತ್ತ ಆಗಸ್ಟ್ 10ರಂದಷ್ಟೇ ದಡಕ್ಕೆ ಬರಬಹುದಾಗಿದೆ.

ಈ ಬಾರಿ ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದರೂ, ಮೀನುಗಾರರು ಜೀವದ ಹಂಗು ತೊರೆದು ಈ ಋತುವಿನಲ್ಲಿ ಸಿಗಬಹುದಾದ ಭಾರಿ ಮೀನಿನ ಬೇಟೆಗೆ ಇಳಿದಿದ್ದಾರೆ.

ಉಡುಪಿ ವರದಿ: ಉಡುಪಿ ನಗರದಲ್ಲಿ ಸೋಮವಾರ ಸತತವಾಗಿ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ನಸುಕಿನ ಐದು ಗಂಟೆ ಸುಮಾರಿಗೆ ಬಿರುಸಿನಿಂದ ಆರಂಭವಾದ ಮಳೆ ಸಂಜೆವರೆಗೂ ಎಡೆಬಿಡದೆ ಸುರಿಯಿತು. ಬೆಳಿಗ್ಗೆ ಶಾಲಾ- ಕಾಲೇಜುಗಳಿಗೆ ಹೊರಟ್ಟಿದ್ದ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೊರಟ್ಟಿದ್ದ ಸಿಬ್ಬಂದಿ ಮಳೆಯಿಂದಾಗಿ ತೊಂದರೆ ಅನುಭವಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ ಸಹ ಮಳೆ ಬಿರುಸಿನಿಂದ ಸುರಿಯುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಬಿರುಸು ತಗ್ಗಿದೆ.

ಶಿವಮೊಗ್ಗ ವರದಿ:  ಜಿಲ್ಲೆಯಲ್ಲಿ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಸೋಮವಾರ ಮಧ್ಯಾಹ್ನದಿಂದ ಮತ್ತೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ನದಿಗಳ ಪ್ರವಾಹ ತಗ್ಗಿದೆಯಾದರೂ ಈಗ ಮತ್ತೆ ಮಳೆಯಾಗುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ.

ಬೆಳಗಾವಿ ವರದಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಸೋಮವಾರ ಒಳಹರಿವು 1.86 ಲಕ್ಷ ಕ್ಯೂಸೆಕ್ ಇತ್ತು.
ಆದರೂ ಹಿಪ್ಪರಗಿ ಜಲಾಶಯದಿಂದ 2,22,900 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ನದಿಯ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಯಕ್ಸಂಬಾ-ದಾನವಾಡ, ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಜುಲೈ 13 ರಿಂದ ಜಲಾವೃತವಾಗಿಯೇ ಇದ್ದು, ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ.

ವಿಜಾಪುರ ವರದಿ:  ನಗರದಲ್ಲಿ ಸೋಮವಾರ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಜಿಲ್ಲೆಯ ಇತರೆಡೆಯೂ ಸಾಧಾರಣ ಮಳೆಯಾಗಿದೆ.

ಕಾರವಾರ ವರದಿ:  ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಮಳೆ ಕಡಿಮೆಯಾಗಿದ್ದು, ಭಟ್ಕಳದಲ್ಲಿ ಮಾತ್ರ ಮಧ್ಯಾಹ್ನದಿಂದ ಮಳೆ ಬಿರುಸುಗೊಂಡಿದೆ. ಶರಾವತಿ ಹಾಗೂ ಅಘನಾಶಿನಿ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ.

ಬಾಗಲಕೋಟೆ ವರದಿ: ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಮೀಪದ ಅಸ್ಕಿ ಗ್ರಾಮದಿಂದ ಅಥಣಿ ತಾಲ್ಲೂಕಿನ ಹತ್ತಾರು ಗ್ರಾಮಗಳಿಗೆ ಮತ್ತೆ ಶನಿವಾರದಿಂದ ದೋಣಿ ಸಂಚಾರ ಆರಂಭವಾಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ಅನುಕೂಲವಾಗಿದೆ.

ಆಲಮಟ್ಟಿಗೆ ಇಂದು ಮುಖ್ಯಮಂತ್ರಿ ಬಾಗಿನ
ವಿಜಾಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಆ. 6) ಮಧ್ಯಾಹ್ನ 12ಕ್ಕೆ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

`ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಭೇಟಿ ನೀಡುವ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗುವುದು. ಬಸವ ನಾಡಿನ ಪ್ರೀತಿಯ ಸಂಕೇತವಾಗಿ ಬಸವಣ್ಣನವರ ಬೆಳ್ಳಿಯ ವಿಗ್ರಹ ನೀಡಿ ಸನ್ಮಾನಿಸಲಾಗುವುದು' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಹಾವೇರಿ: ಜನಜೀವನ ಸಹಜಸ್ಥಿತಿಯತ್ತ
ಹಾವೇರಿ:
ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಸೋಮವಾರ ಕಡಿಮೆಯಾಗಿದೆ. ನದಿಗಳಲ್ಲಿ ಪ್ರವಾಹ ಇಳಿಮುಖವಾಗಿ ನದಿ ತೀರದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ರಾಣೆಬೆನ್ನೂರ ತಾಲ್ಲೂಕಿನ ಮುಷ್ಟೂರು, ಹಾವೇರಿ ತಾಲ್ಲೂಕಿನ ಕಂಚಾರಗಟ್ಟಿ, ಗುಯಲಗುಂದಿ, ಹಿರೇಕೆರೂರ ತಾಲ್ಲೂಕಿನ ಮಾಸೂರು ಹಾಗೂ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳಲ್ಲಿದ್ದ ಜನರು ವಾಪಸ್ಸು ಊರಿಗೆ ತೆರಳಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT