ADVERTISEMENT

ದಸರಾ ಗೋಲ್ಡ್‌ಕಾರ್ಡ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಮೈಸೂರು:  ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಗುರುವಾರ ರೈಲು ನಿಲ್ದಾಣದಲ್ಲಿ ಗೋಲ್ಡ್‌ಕಾರ್ಡ್‌ಗಳ ಮಾರಾಟ ಹಾಗೂ `ಫೋಕಸ್ ಆನ್ ವೀಲ್ಹ್~ಗೆ ಚಾಲನೆ ನೀಡಿದರು.

ಈ ಬಾರಿ 6 ಸಾವಿರ ರೂಪಾಯಿ ಮುಖಬೆಲೆಯ 500 ಗೋಲ್ಡ್    ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಒಂದು ಗೋಲ್ಡ್ ಕಾರ್ಡ್‌ಗೆ ಇಬ್ಬರಿಗೆ ಪ್ರವೇಶ ಇರುತ್ತದೆ. ಈ ಕಾರ್ಡ್ ಹೊಂದಿರುವವರು 9 ದಿನಗಳು ದಸರಾದ ಎಲ್ಲ ಕಾರ್ಯಕ್ರಮಗಳನ್ನು  ವೀಕ್ಷಿಸಬಹುದಾಗಿದೆ. ದೇಶ-ವಿದೇಶಿ ಪ್ರವಾಸಿಗರು ಗೋಲ್ಡ್ ಕಾರ್ಡ್‌ಗಳನ್ನು ಆಲ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಪ್ರವಾಸಿಗರ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ಹೋಟೆಲ್‌ಗಳ ದರ ಪಟ್ಟಿಯನ್ನು ಹಾಕಲಾಗಿದ್ದು, ಕೊಠಡಿಗಳನ್ನು ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗುವುದು~ ಎಂದು ಸಚಿವ ಎಸ್.ಎ.ರಾಮದಾಸ್ ಪತ್ರಕರ್ತರಿಗೆ ತಿಳಿಸಿದರು.

ಫೋಕಸ್ ಆನ್ ವೀಲ್ಹ್: `ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಪ್ರಚಾರವನ್ನು ರೈಲುಗಳಲ್ಲಿಯೂ ಮಾಡಲಾಗುತ್ತಿದೆ. ಆದ್ದರಿಂದ ಇಂದಿನಿಂದ ಫೋಕಸ್ ಆನ್ ವೀಲ್ಹ್ ಕಾರ್ಯಕ್ರಮದಲ್ಲಿ ದಸರಾ ವಿಡಿಯೊ ಚಿತ್ರಣವನ್ನು ಚಾಮುಂಡಿ ಎಕ್ಸ್‌ಪ್ರೆಸ್, ಟಿಪ್ಪು ಎಕ್ಸ್‌ಪ್ರೆಸ್, ಶಿವಮೊಗ್ಗ ಇಂಟರ್ ಸಿಟಿ ಹಾಗೂ ಹುಬ್ಬಳ್ಳಿ-ಧಾರವಾಡ ರೈಲುಗಳಲ್ಲಿ ನಿರಂತರವಾಗಿ ಪ್ರದರ್ಶಿಸಲಾಗುವುದು. ಈಗ ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಫೋಕಸ್ ಆನ್ ವೀಲ್ಹ್‌ಗೆ ಚಾಲನೆ ನೀಡಲಾಗಿದೆ~ ಎಂದು ಹೇಳಿದರು.

ವಿಶೇಷ ರೈಲುಗಳು
ದಸರಾ ಮಹೋತ್ಸವವನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸೌಲಭ್ಯಕ್ಕಾಗಿ ಬೆಂಗಳೂರು- ಮೈಸೂರು-ಬೆಂಗಳೂರು ಮಾರ್ಗದಲ್ಲಿ ಐದು ಹೆಚ್ಚುವರಿ `ದಸರಾ ವಿಶೇಷ~ ರೈಲುಗಳ ಸಂಚಾರ ಆರಂಭವಾಗಲಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ಎಸ್. ದಯಾನಂದ್, `ನೈಋತ್ಯ ರೈಲ್ವೆಯ ಮುಖ್ಯ ಕಚೇರಿಗೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ.
 

ಮೈಸೂರು ರೈಲು ನಿಲ್ದಾಣದಲ್ಲಿ ದಸರಾ ಗೋಲ್ಡ್‌ಕಾರ್ಡ್ ಮಾರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ.ರಾಮದಾಸ್ ಗುರುವಾರ  ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಉಪಾಧ್ಯಕ್ಷ ಡಾ.ಶಿವರಾಮು, ಮೇಯರ್ ಪುಷ್ಪಲತಾ ಚಿಕ್ಕಣ್ಣ, ಉಪ ಮೇಯರ್ ಎಂ.ಜೆ.ರವಿಕುಮಾರ್, ಮುಡಾ ಆಯುಕ್ತ ಸಿ.ಜೆ.ಬೆಟ್‌ಸೂರ್‌ಮಠ್, ಪೊಲೀಸ್ ಆಯುಕ್ತ ಸುನಿಲ್ ಅಗರ್‌ವಾಲ್, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಇದ್ದಾರೆ


ಅಕ್ಟೋಬರ್ 5 ರಿಂದ 9ರವರೆಗೆ ಮೈಸೂರು-ಬೆಂಗಳೂರು-ಮೈಸೂರು ರೈಲು ಬೆಳಿಗ್ಗೆ 9ಕ್ಕೆ  ಮೈಸೂರಿನಿಂದ ಹೊರಟು 11.30ಕ್ಕೆ ಬೆಂಗಳೂರು ತಲುಪುವುದು. ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 2.55ಕ್ಕೆ ಮೈಸೂರಿಗೆ ತಲುಪುತ್ತದೆ. ಮಂಡ್ಯ ಮತ್ತು ಕೆಂಗೇರಿಯಲ್ಲಿ ನಿಲುಗಡೆ ಇದೆ. ವಿಜಯದಶಮಿಯ ದಿನವಾದ ಅಕ್ಟೋಬರ್ 6ರಂದು ತಡರಾತ್ರಿ 11.45ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರಿಗೆ 7ರಂದು ಬೆಳಗಿನ ಜಾವ 2 ಗಂಟೆಗೆ ತಲುಪುತ್ತದೆ~ ಎಂದು ತಿಳಿಸಿದರು.

`ಇನ್ನೊಂದು ರೈಲು ಅಕ್ಟೋಬರ್ 6ರಿಂದ 9ರವರೆಗೆ ಸಂಚರಿಸಲಿದೆ. ಈ ರೈಲುಸಂಜೆ 5.30ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 8.30ಕ್ಕೆ ಬೆಂಗಳೂರಿಗೆ ತಲುಪುವುದು. ಬೆಂಗಳೂರನ್ನು ರಾತ್ರಿ 12ಕ್ಕೆ ಬಿಟ್ಟು ಬೆಳಗಿನ ಜಾವ 3.30ಕ್ಕೆ ಮೈಸೂರಿಗೆ ಆಗಮಿಸುತ್ತದೆ. ಪ್ರತಿ ಭಾನುವಾರ ಸಂಚಾರ ಸ್ಥಗಿತ ಮಾಡಲಾಗುತ್ತಿದ್ದ ಪ್ಯಾಸೆಂಜರ್ ರೈಲುಗಳು ಓಡಾಟವು ಈ ಭಾನುವಾರ (ಅಕ್ಟೋಬರ್ 2) ಇರುತ್ತದೆ~ ಎಂದು ತಿಳಿಸಿದರು.

`ಮೈಸೂರು-ಚಾಮರಾಜನಗರ ನಡುವೆಯೂ ಅಕ್ಟೋಬರ್ 6ಕ್ಕೆ ದಸರಾ ವಿಶೇಷ ರೈಲು ಸಂಚರಿಸಲಿದೆ. ಮೈಸೂರಿನಿಂದ ರಾತ್ರಿ 8.40ಕ್ಕೆ ಹೊರಡುವ ಈ ರೈಲು 10.20ಕ್ಕೆ ಚಾಮರಾಜನಗರ ತಲುಪುತ್ತದೆ.

ಇದಲ್ಲದೇ ಮೈಸೂರು-ಶಿವಮೊಗ್ಗ-ಮೈಸೂರು (ಕ್ರಮಸಂಖ್ಯೆ; 56269/270), ಮೈಸೂರು-ಬೆಂಗಳೂರು-ಮೈಸೂರು (ಕ್ರ.ಸಂ: 26263/264), ಮೈಸೂರು -ಅರಸಿಕೆರೆ-ಮೈಸೂರು (ಕ್ರ.ಸಂ: 56265/266) ಪ್ಯಾಸೆಂಜರ್ ರೈಲುಗಳಿಗೆ ಸೆಪ್ಟೆಂಬರ್  28ರಿಂದ  ಅಕ್ಟೋಬರ್ 7ರವರೆಗೆ ದ್ವಿತೀಯ ದರ್ಜೆಯ ಎರಡು ಹೆಚ್ಚುವರಿ ಬೋಗಿಗಳನ್ನು ಹಾಕಲಾಗುವುದು~ ಎಂದು ತಿಳಿಸಿದರು.

27ರಂದು ಯಶವಂತಪುರ-ಅಹಮದಾಬಾದ್ ರೈಲು

ಯಶವಂತಪುರ ಮತ್ತು ಅಹಮದಾಬಾದ್ ನಡುವೆ ಸಂಚರಿಸಲು ಗರೀಬ್ ರಥ ಸಾಪ್ತಾಹಿಕ  ರೈಲು ಸೆಪ್ಟೆಂಬರ್ 27ರಂದು ಸಂಚರಿಸಲಿದೆ.

ಈ ರೈಲು 27ರಂದು ಬೆಳಿಗ್ಗೆ 5.20ಕ್ಕೆ ಯಶವಂತಪುರ ಬಿಟ್ಟು, 28ರಂದು ಸಂಜೆ 4.10ಕ್ಕೆ ಅಹಮದಾಬಾದ್ ತಲುಪಲಿದೆ. ಈ ರೈಲು ತುಮಕೂರು, ಅರಸಿಕೆರೆ, ದಾವಣಗೆರೆ, ಹರಿಹರ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಾಪುರ, ಪುಣೆ, ಕಲ್ಯಾಣ್ ಮತ್ತು ಸೂರತ್‌ಗಳಲ್ಲಿ ನಿಲುಗಡೆಯಾಗಲಿದೆ.

28ರಂದು ರಾತ್ರಿ  8.15ಕ್ಕೆ ಅಹಮದಾಬಾದಿನಿಂದ ಹೊರಟು 30ರಂದು ಬೆಳಿಗ್ಗೆ 11.25ಕ್ಕೆ ಯಶವಂತಪುರ ತಲುಪುತ್ತದೆ ಎಂದು  ತಿಳಿಸಲಾಗಿದೆ.

ದಸರಾ ದರ್ಶನಕ್ಕೆ 243 ಬಸ್
ನಾಡಹಬ್ಬ ದಸರಾ ಕಾರ್ಯಕ್ರಮ ಹಾಗೂ ಮೈಸೂರು ನಗರ ಪ್ರದಕ್ಷಿಣೆಗೆ ಈ ಬಾರಿಯೂ `ದಸರಾ ದರ್ಶನ~ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೈಸೂರು ವಿಭಾಗದ ಮೈಸೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಪ್ರವಾಸಿಗರನ್ನು ಕರೆತರಲು 243 ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಡತನ ರೇಖೆ ಕೆಳಮಟ್ಟದಲ್ಲಿರುವ ಆಯ್ದ ಜನರಿಗೆ ಮಾತ್ರ ಈ ಅವಕಾಶ ಲಭ್ಯವಾಗಲಿದ್ದು, 50 ರೂಪಾಯಿಗಳಲ್ಲಿ ಚಾಮುಂಡಿಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ ಹಾಗೂ ಕೆಆರ್‌ಎಸ್ ಜಲಾಶಯವನ್ನು ಕಣ್ತುಂಬಿಕೊಳ್ಳಬಹುದು.

`ಕಳೆದ ಬಾರಿ ದಸರಾ ದರ್ಶನ ಜೊತೆಗೆ `ದಸರಾ ಥಾಲಿ~ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಒಂದಿಷ್ಟು ಗೊಂದಲಗಳಾದ್ದರಿಂದ ಈ ಬಾರಿ `ದಸರಾ ಥಾಲಿ~ಯನ್ನು ಕೈಬಿಡುವ ಚಿಂತನೆ ನಡೆದಿದೆ~ ಎಂದು ದಸರಾ ದರ್ಶನ ಉಪಸಮಿತಿ ಉಪಾಧ್ಯಕ್ಷ   ಎಚ್.ಕೆ.ಅನಂತು ತಿಳಿಸಿದರು.

`ಕೆಎಸ್‌ಆರ್‌ಟಿಸಿಯಿಂದ ಮೈಸೂರು- ಬೆಂಗಳೂರು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 375 ಬಸ್ಸುಗಳನ್ನು ದಸರಾ ಪ್ರಯುಕ್ತ ಅಳವಡಿಸಲಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು. ಪ್ರವಾಸಿಗರ ಸಂಖ್ಯೆ ಹೆಚ್ಚಾದಲ್ಲಿ ನಗರದ ವಿವಿಧ ಬಡಾವಣೆಗಳಿಗೆ ತೆರಳಲು 24 ಗಂಟೆಯೂ ಬಸ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ~ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ `ಪ್ರಜಾವಾಣಿ~ಗೆ       ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT