ಮೈಸೂರು: ಸಾಂಸ್ಕೃತಿಕ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಎನಿಸಿರುವ ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದೇಶದಲ್ಲೇ ಪ್ರಪ್ರಥಮವಾದ ‘ಮರಳುಶಿಲ್ಪ ಸಂಗ್ರಹಾಲಯ’ವು (ಸ್ಯಾಂಡ್ ಸ್ಕಲ್ಪ್‌ಚರ್ ಮ್ಯೂಸಿಯಂ) ಮೈಸೂರಿನಲ್ಲಿ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.
ಮೈಸೂರಿನ ಮರಳುಶಿಲ್ಪ ಕಲಾವಿದೆ ಎಂ.ಎನ್. ಗೌರಿ ಅವರು ಶಾಶ್ವತವಾದ ಮರಳುಶಿಲ್ಪ ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಬಹುದಿನಗಳಿಂದ ಕನಸು ಕಂಡಿದ್ದರು. ಆ ಕನಸು ಅವರ ಸತತ ಪರಿಶ್ರಮ ಹಾಗೂ ಕುಟುಂಬದವರ ನೆರವಿನಿಂದ ಇಂದು ನನಸಾಗಿದೆ.
ನಗರದ ಚಾಮುಂಡಿಬೆಟ್ಟ ಮುಖ್ಯರಸ್ತೆಯಲ್ಲಿರುವ ಜಾಕಿ ಕ್ವಾರ್ಟರ್ಸ್ ಸಮೀಪದ ತೆಂಗಿನತೋಟದ ಸುಂದರ ಪರಿಸರದಲ್ಲಿ 1,350 (15x90 ಅಡಿ) ಚದರ ಅಡಿಯಲ್ಲಿ ಈ ಮ್ಯೂಸಿಯಂ ಅನಾವರಣಗೊಂಡಿದೆ. 115 ಲಾರಿ ಲೋಡ್ ಮರಳನ್ನು ಬಳಸಿ, 16 ಪರಿಕಲ್ಪನೆಗಳಲ್ಲಿ 150ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಲಾಗಿದೆ.
ಸಾಮರಸ್ಯದ ದ್ಯೋತಕ: ಇಲ್ಲಿನ ಮರಳುಶಿಲ್ಪಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಪರಿಸರ ಕಾಳಜಿ, ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುತ್ತವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ -–ಹೀಗೆ ಅನೇಕ ಧರ್ಮಗಳಿಗೆ ಸಂಬಂಧಪಟ್ಟ ಕಲಾಕೃತಿಗಳು ಕೋಮು ಸೌಹಾರ್ದ ಬಿಂಬಿಸುತ್ತಿವೆ. ಮ್ಯೂಸಿಯಂ ಒಳಗೆ ಪ್ರವೇಶಿಸಿದ ಕೂಡಲೇ ‘ಪರಿಸರಸ್ನೇಹಿ ಗಣೇಶ’ನ ಕಲಾಕೃತಿ ಎದುರಾಗುತ್ತದೆ.
ಅದರ ಪಕ್ಕದಲ್ಲೇ ನಾಡಿನ ಅಧಿದೇವತೆ ‘ಶ್ರೀ ಚಾಮುಂಡೇಶ್ವರಿ’, ‘ಲಾಫಿಂಗ್ ಬುದ್ಧ’ನ ಕಲಾಕೃತಿಗಳು ಗಮನ ಸೆಳೆಯುತ್ತವೆ. ಮಧ್ಯಭಾಗದಲ್ಲಿ ಮೈಸೂರು ದಸರಾ ವೈಭವವನ್ನು ಪ್ರತಿಬಿಂಬಿಸುವ ‘ದಸರಾ ಮೆರವಣಿಗೆ’ ಹಾಗೂ ನವರಾತ್ರಿ ಸಂದರ್ಭದಲ್ಲಿ ಸಿಂಹಾಸನದಲ್ಲಿ ಆಸೀನರಾಗಿರುವ ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್’ ಕಲಾಕೃತಿಗಳು ಆಕರ್ಷಕವಾಗಿ ಮೂಡಿಬಂದಿವೆ.
12 ರಾಶಿಗಳ ಸಂಕೇತಗಳನ್ನು ಒಳಗೊಂಡಿರುವ ‘ರಾಶಿ ಚಕ್ರ’, ಮಹಾಭಾರತದಲ್ಲಿ ಯುದ್ಧಕ್ಕೆ ಹೊರಟ ‘ಕೃಷ್ಣಾರ್ಜುನರ ರಥ’ದ ಮರಳುಶಿಲ್ಪಗಳು ವಿಶಿಷ್ಟವಾಗಿವೆ. ಚೀನಾ, ಈಜಿಪ್ಟ್, ಬ್ಯಾಬಿಲೋನಿಯಾ, ಗ್ರೀಕ್, ಹರಪ್ಪ ಮತ್ತು ಮೊಹೆಂಜೊದಾರೊ ಮುಂತಾದ ಪ್ರಾಚೀನ ನಾಗರಿಕತೆಗಳ ಕಥೆ ಹೇಳುವ ಕಲಾಕೃತಿಗಳು ಇಲ್ಲಿವೆ.
ಮನಮೋಹಕ ಮತ್ಸ್ಯಕನ್ಯೆ: ಜಲಪ್ರಪಂಚ ಪರಿಕಲ್ಪನೆಯಡಿ ಮೂಡಿಬಂದಿರುವ ಮತ್ಸ್ಯಕನ್ಯೆ, ಸಮುದ್ರರಾಜ, ಮೀನು, ಆಮೆ, ಡಾಲ್ಫಿನ್, ಅಷ್ಟಪದಿ, ಸಮುದ್ರಕುದುರೆ, ಶಂಖು, ಕಪ್ಪೆಚಿಪ್ಪು, ಹವಳ, ಸ್ಕೂಬಾ ಡೈವರ್, ದೋಣಿ ಮುಂತಾದ ಆಕೃತಿಗಳು ಮನಮೋಹಕವಾಗಿದ್ದು, ಜಲಚರಗಳ ಜೀವನಶೈಲಿಯನ್ನು ಬಿಂಬಿಸುತ್ತವೆ.
ಅದರ ಪಕ್ಕದಲ್ಲೇ ಇರುವ ‘ಭೂತ ಪ್ರಪಂಚ’ದ ರಕ್ತಪಿಶಾಚಿ, ದೆವ್ವ, ಅಸ್ಥಿಪಂಜರ, ಮಾಟದ ಕುಂಬಳದ ಕಲಾಕೃತಿಗಳು ನೋಡುಗರಲ್ಲಿ ಭೀತಿಯನ್ನು ಉಂಟುಮಾಡುವಷ್ಟರ ಮಟ್ಟಿಗೆ ನೈಜವಾಗಿವೆ.
ಜಿಹಾದ್ ವಾರಿಯರ್, ಖುರಾನ್, ಮೆಕ್ಕಾ–ಮದೀನಾ, ಗುಂಬಜ್, ಮಿನಾರ್‌ಗಳ ಆಕೃತಿಗಳು ಮುಸ್ಲಿಂ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿದಿವೆ. ಇನ್ನು, ಮರಳುಗಾಡು, ಒಂಟೆ, ಈಚಲುಮರ, ‘ಊದ್’ ಸಂಗೀತ ಪರಿಕರ ಹಿಡಿದಿರುವ ದಂಪತಿಯ ಮರಳುಶಿಲ್ಪಗಳು ಅರೇಬಿಯನ್ ಸಂಸ್ಕೃತಿಯನ್ನು ಅನಾವರಣಗೊಳಿಸಿವೆ. ‘ಡಿಸ್ನಿಲ್ಯಾಂಡ್’ನಲ್ಲಿ ಮಿಕ್ಕಿಮೌಸ್, ಟ್ವೀಟಿ, ಟಾಮ್ ಅಂಡ್ ಜೆರ್ರಿ, ಡೊನಾಲ್ಡ್ ಡಕ್ ಮಕ್ಕಳನ್ನು ಕೈ ಬೀಸಿ ಕರೆಯುತ್ತವೆ. ಕ್ರಿಸ್‌ಮಸ್ ಟ್ರೀ, ಸಾಂಟಾಕ್ಲಾಸ್, ವಿಂಟೇಜ್ಕಾರುಗಳು ಎಲ್ಲರನ್ನು ಬೆರಗುಗೊಳಿಸುತ್ತವೆ.
ವನ್ಯಜೀವಿ ರಕ್ಷಿಸಿ:
ಹುಲಿ, ಸಿಂಹ, ಗೊರಿಲ್ಲಾ, ಆನೆ, ಜಿರಾಫೆ, ನವಿಲು, ಚಿಂಪಾಂಜಿ, ಘೇಂಡಾಮೃಗ, ಹೆಬ್ಬಾವು, ನಾಗರಹಾವು, ಗರುಡ ಮುಂತಾದ ಪ್ರಾಣಿ ಪಕ್ಷಿಗಳ ಕಲಾಕೃತಿಗಳು ‘ಪರಿಸರ ಉಳಿಸಿ– ವನ್ಯಜೀವಿ ರಕ್ಷಿಸಿ’ ಎಂಬ ಸಂದೇಶವನ್ನು ಸಾರುವಂತಿವೆ.
‘ಒಟ್ಟು ರೂ.16 ಲಕ್ಷ ಅಂದಾಜು ವೆಚ್ಚದ ಈ ಯೋಜನೆಗೆ ಸಾಲವನ್ನು ಪಡೆದು ಮ್ಯೂಸಿಯಂ ಸ್ಥಾಪಿಸಿದ್ದೇವೆ. 115 ಲಾರಿ ಲೋಡು ಮರಳಿಗೆ ಅಗತ್ಯವಿರುವಷ್ಟು ಸಂಯುಕ್ತವಸ್ತುಗಳನ್ನು ಮಿಶ್ರಣ ಮಾಡಿ ಮರಳನ್ನು ಹದಗೊಳಿಸಿಕೊಂಡು 3 ತಿಂಗಳ ನಿರಂತರ ಪ್ರಯತ್ನದಿಂದ ಮರಳುಶಿಲ್ಪಗಳನ್ನು ತಯಾರಿಸಿದ್ದೇನೆ.
ಕಲಾಕೃತಿ ರಚನೆಯಲ್ಲಿ ನನ್ನ ಅಕ್ಕ ನೀಲಾಂಬಿಕಾ, ತಂದೆ ನಂಜುಂಡಸ್ವಾಮಿ, ತಾಯಿ ನಾಗಲಾಂಬಿಕಾ ಅವರ ಪರಿಶ್ರಮ ಮತ್ತು ನೆರವು ಅಪಾರ. ಈ ಮ್ಯೂಸಿಯಂ ಪರಿಸರಸ್ನೇಹಿಯಾಗಿದ್ದು, ಮ್ಯೂಸಿಯಂನ ಸುತ್ತ ಹಸಿರುಬೇಲಿಯನ್ನು ಅಳವಡಿಸಿದ್ದೇವೆ. ವಾಟರ್‌ಪ್ರೂಫ್ ಟ್ರಾನ್ಸ್ಪರೆಂಟ್ ಶೀಟ್ಗಳನ್ನು ಛಾವಣಿಗೆ ಬಳಸಲಾಗಿದೆ. ಕಲಾಕೃತಿಗಳನ್ನು ಕುಳಿತು ವೀಕ್ಷಿಸಲು ತೆಂಗಿನಮರದ ತುಂಡುಗಳನ್ನು ಕುರ್ಚಿಯ ರೀತಿಯಲ್ಲಿ ಇಡಲಾಗಿದೆ.
ಮೈಸೂರಿನ ಜನತೆ ಹಾಗೂ ಪ್ರವಾಸಿಗರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಈ ಮ್ಯೂಸಿಯಂ ಅನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಿದ್ದೇವೆ. ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ವಾರದ ಎಲ್ಲ ದಿನಗಳಲ್ಲಿ ಪ್ರವೇಶವಿರುತ್ತದೆ’ ಎಂದು ಮರಳುಶಿಲ್ಪ ಕಲಾವಿದೆ ಗೌರಿ, ‘ಪ್ರಜಾವಾಣಿ’ಜತೆ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.