ADVERTISEMENT

ದೇಶ ಇಬ್ಭಾಗ ಖಚಿತ: ನ್ಯಾ. ಶಿವರಾಜ್ ಪಾಟೀಲ್ ಆತಂಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಮೈಸೂರು: `ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತೀಯ ಮತ್ತು ಪೂರ್ವನಿಶ್ಚಿತ ಹಿಂಚಾಚಾರ ತಡೆ ಮಸೂದೆಯಿಂದ ದೇಶ ಇಬ್ಭಾಗವಾಗುವುದು ಖಚಿತ. ನೂತನ ಮಸೂದೆ ಜಾರಿ ಬದಲು ಈಗಿರುವ ಕಾನೂನುಗಳಿಗೆ ಬದಲಾವಣೆ ತರುವುದು ಒಳಿತು~ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ.ಪಾಟೀಲ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್‌ಎಸ್ ಕಾನೂನು ಕಾಲೇಜಿನ ವತಿಯಿಂದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ `ಭಾರತ ಸಂವಿಧಾನ; ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಹಿತರಕ್ಷಣೆ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಮತೀಯ ಮತ್ತು ಪೂರ್ವನಿಶ್ಚಿತ ಹಿಂಚಾಚಾರ ತಡೆ ಮಸೂದೆಯನ್ನು ಪ್ರಜ್ಞಾಪೂರ್ವಕವಾಗಿ ಇನ್ನೊಮ್ಮೆ ಪರಿಶೀಲಿಸಬೇಕು. ನೂತನ ಮಸೂದೆ ಜನರಿಗೆ ಉಪಯುಕ್ತವೇ? ಎಂದು ಪರೀಕ್ಷಿಸಬೇಕು. ಪ್ರಜಾಪ್ರತಿನಿಧಿಗಳು, ಬುದ್ಧಿಜೀವಿಗಳು, ಸಂಘ-ಸಂಸ್ಥೆಗಳು, ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು ಮಸೂದೆ ಅಂಗೀಕಾರಕ್ಕೂ ಮುನ್ನ ತಮ್ಮ ಅನಿಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಇದು ಎಲ್ಲರ ಕರ್ತವ್ಯವಾಗಿದ್ದು, ಎಲ್ಲರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು~ ಎಂದು ಸಲಹೆ ನೀಡಿದರು.

ADVERTISEMENT

`ನೂತನ ಮಸೂದೆ ಸಂವಿಧಾನದ ತತ್ವಗಳಡಿ ಇದೆಯೇ ಎಂಬುದನ್ನು ಕಾನೂನು ರಚಿಸುವವರು ಯೋಚಿಸಬೇಕು. ಅಲ್ಪಸಂಖ್ಯಾತರ ರಕ್ಷಣೆಗೆ ಈಗಿರುವ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜಾತಿ ಶೋಷಣೆ ಕಾಯಿದೆ, ನಾಗರಿಕ ಹಕ್ಕು ರಕ್ಷಣಾ ಕಾಯ್ದೆಗಳನ್ನು ಬಲಪಡಿಸಬೇಕೆ ಹೊರತು ನೂತನ ಮಸೂದೆ ಜಾರಿ ಸಲ್ಲದು~ ಎಂದು ಅಭಿಪ್ರಾಯಪಟ್ಟರು.

`ಯಾವುದೇ ಕಾನೂನುಗಳನ್ನು ಸಂವಿಧಾನ ತತ್ವಗಳ ವಿರುದ್ಧ ಮಾಡುವ ಹಾಗಿಲ್ಲ. ದಲಿತರಿಗೆ, ತುಳಿತಕ್ಕೆ ಒಳಗಾದವರಿಗೆ ಹೊಸ ಮಸೂದೆಯಿಂದ ಉಪಯೋಗ ಆಗಬಹುದಾದರೂ ಬಹುಸಂಖ್ಯಾತರಿಗೆ ತೊಂದರೆ ಆಗಲಿದೆ. ಅಲ್ಪಸಂಖ್ಯಾತರ ರಕ್ಷಣೆಗೆ ಈಗಿರುವ ಕಾನೂನುಗಳಲ್ಲಿ ನ್ಯೂನತೆ ಇದ್ದರೆ ಅವುಗಳನ್ನು ಸರಿಪಡಿಸಬೇಕು.  ವರದಕ್ಷಿಣೆ ಕಿರುಕುಳ ಮತ್ತು ಜಾತಿ ಶೋಷಣೆ ಕಾಯ್ದೆಗಳೇ ದುರುಪಯೋಗ ಆಗುತ್ತಿವೆ. ಹೀಗಿರುವಾಗ ನೂತನ ಮಸೂದೆ ಜಾರಿ ಸಮಂಜಸವಲ್ಲ. ಆದ್ದರಿಂದ ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಬೇಕು~ ಎಂದು ಅಭಿಪ್ರಾಯಪಟ್ಟರು.

`ಈಚೆಗೆ ನಡೆದ ಅಧಿವೇಶನದಲ್ಲಿ 12 ನಿಮಿಷಗಳಲ್ಲಿ 17 ಮಸೂದೆಗೆ ಅಂಗೀಕಾರ ಪಡೆಯಲಾಗಿದೆ. ಅವುಗಳಲ್ಲಿ ಬಹುತೇಕ ವಿಷಯಗಳು ಚರ್ಚೆಗೇ ಬರಲಿಲ್ಲ. ಜನರ ಸಮಸ್ಯೆ ಪರಿಹರಿಸಲು, ಜನರಿಗೆ ಅನುಕೂಲವಾಗುವ ಮಸೂದೆಗಳು ಜಾರಿಗೆ ಬಂದರೆ ತೊಂದರೆ ಇಲ್ಲ. ಆದರೆ, ಕೆಲವೊಮ್ಮೆ ರಾಜಕೀಯ ಇಚ್ಛಾಶಕ್ತಿಯಿಂದ ದಿಢೀರ್ ಎಂದು ಮಸೂದೆ ಅಂಗೀಕಾರ ಆಗಿರುವ ಉದಾಹರಣೆಗಳೂ ಇವೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮಸೂದೆಗಳನ್ನು ಸರಿಯಾಗಿ ಅಧ್ಯಯನ ಮಾಡಬೇಕು~ ಎಂದರು.

ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮಾತನಾಡಿ, `ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ವಿಧೇಯಕದ ಬಗ್ಗೆ ಯಾರಿಗೂ ಗೊತ್ತಿಲ್ಲ. ಸರ್ಕಾರಗಳಿಗೆ ನಾಗರಿಕರ ಹಿತ ಮುಖ್ಯವಾಗಬೇಕೇ ಹೊರತು ಮತದಾರರ ಹಿತವಲ್ಲ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅತ್ಯಂತ ಆತಂಕಕಾರಿ ವಿಧೇಯಕ ಇದಾಗಿದ್ದು, ಇದರಿಂದ ದೇಶ ಮತ್ತಷ್ಟು ಛಿದ್ರವಾಗಲಿದೆ. ಆದ್ದರಿಂದ ವಿಧೇಯಕದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸಿ, ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.