ADVERTISEMENT

`ದೊಡ್ಡ ನಮಸ್ಕಾರ' ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಬಳ್ಳಾರಿ: ಆರ್ಸೆಲರ್ ಮಿತ್ತಲ್ ಹಾಗೂ ಬ್ರಹ್ಮಿಣಿ ಉಕ್ಕಿನ ಕಾರ್ಖಾನೆಗಳಿಗಾಗಿ ತಾಲ್ಲೂಕಿನ ಕುಡತಿನಿ, ವೇಣಿವೀರಾಪುರ ಹಾಗೂ ಕೊಳಗಲ್ಲು ಗ್ರಾಮಗಳ ಬಳಿ ವಶಪಡಿಸಿಕೊಂಡಿರುವ ರೈತರ ಭೂಮಿಗೆ ಅಧಿಕ ಪರಿಹಾರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಕುಡತಿನಿಯಿಂದ `ದೊಡ್ಡ ನಮಸ್ಕಾರ' ಪಾದಯಾತ್ರೆ ನಡೆಸಿದರು.

ಕುಡತಿನಿಯಿಂದ ಅಲ್ಲಿಪುರ ಮೂಲಕ 20 ಕಿಮೀ ದೂರದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, `ಭೂಮಿಯ ದರ ನಿಗದಿಯಲ್ಲಿ ತಾರತಮ್ಯ ಎಸಗಿರುವ ರಾಜ್ಯ ಸರ್ಕಾರಕ್ಕೆ ನಮಸ್ಕಾರ, ದೊಡ್ಡ ನಮಸ್ಕಾರ' ಎಂದು ಘೋಷಣೆ ಕೂಗಿದರು.

ಜಿಲ್ಲೆಯಲ್ಲಿ ಕೈಗಾರಿಕೆಯ ಅಭಿವೃದ್ಧಿಗಾಗಿ ರೈತರ ಸಾವಿರಾರು ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ವಶಪಡಿಸಿಕೊಂಡಿರುವ ಸರ್ಕಾರ, ಕೇಂದ್ರೀಯ ಮೌಲ್ಯಮಾಪನ ಸಮಿತಿ (ಸಿವಿಸಿ) ನಿಗದಿ ಮಾಡಿರುವ ಕನಿಷ್ಠ ದರ ನೀಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ್ ಕೋರಿದರು.

ಸಿವಿಸಿ ಸೂಚನೆಯಂತೆ ದರ ಪರಿಷ್ಕರಿಸಿ, ಉತ್ತಮ ದರ ನೀಡುವವರೆಗೆ ರೈತರ ಜಮೀನನ್ನು ಈ ಕಾರ್ಖಾನೆಗಳ ಸುಪರ್ದಿಗೆ ನೀಡಬಾರದು ಎಂದ ಅವರು ಆಗ್ರಹಿಸಿದರು. ಬ್ರಹ್ಮಿಣಿ, ಆರ್ಸೆಲರ್ ಮಿತ್ತಲ್ ಕಂಪೆನಿಗಳ ಮಾಲೀಕರೊಂದಿಗೆ ಪ್ರಮುಖ ರಾಜಕಾರಣಿಗಳು, ಪ್ರಭಾವಿಗಳು ಷಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಒಂದು ತಾಲ್ಲೂಕಿನ ಜಮೀನಿಗೆ ಒಂದೇ ದರ ನಿಗದಿ ಮಾಡಬೇಕು ಎಂಬ ನಿಯಮದ ಅನುಸಾರ ಬೆಲೆ ನೀಡಬೇಕು. ರಾಜ್ಯದ ಕೋಲಾರ, ದೇವನಹಳ್ಳಿಗಳಲ್ಲಿ ನೀಡಿದ ಮಾದರಿಯಲ್ಲೇ ಇಲ್ಲಿನ ರೈತರ ಜಮೀನಿಗೂ ದರ ನೀಡಬೇಕು ಎಂದು  ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.