ಧಾರವಾಡ: ಸಾಧನೆ ಮಾಡಿದ ಸಂಭ್ರಮ... ಮನ ತಣಿಸಿದ ಖುಷಿ... ತಂದೆ-ತಾಯಿಗಳ ಆಸೆ ಈಡೇರಿಸಿದ ತೃಪ್ತಿ... ಇನ್ನೂ ಸಾಧನೆ ಮಾಡಬೇಕು ಎಂಬ ಹಂಬಲ. ಇದು ಕಂಡು ಬಂದಿದ್ದು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಮುಖದಲ್ಲಿ.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 25ನೇ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಸ್ವೀಕರಿಸಿದ ವಿದ್ಯಾರ್ಥಿಗಳ ಸಂತಸ ಮುಗಿಲು ಮುಟ್ಟಿತ್ತು. ಕೃಷಿ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಗದಗ ತಾಲ್ಲೂಕಿನ ಹೊಂಬಳದ ನೀಲವ್ವ ಕೋಣನವರ ಅವರು ಈ ವರ್ಷದ ಘಟಿಕೋತ್ಸವದ `ಚಿನ್ನದ ಹುಡುಗಿ~ಯಾಗಿ ಹೊರಹೊಮ್ಮಿದರು.
`ನನ್ನ ಈ ಸಾಧನೆಗೆ ತಂದೆ, ತಾಯಿ, ನನ್ನ ಗುರುಗಳಾದ ಡಾ. ವಿ.ಎಸ್.ಕುಲಕರ್ಣಿ ಮತ್ತು ನನಗೆ ಬೋಧನೆ ಮಾಡಿದ ಗುರುಗಳ ಆಶಿರ್ವಾದವೇ ಕಾರಣ. ನಾನು ಪ್ರತಿದಿನ ನಾಲ್ಕು ಗಂಟೆ ಓದಿಗಾಗಿ ಮೀಸಲಿಟ್ಟಿದ್ದೆ. ಈಗ ನಾನು ಅನುವಂಶೀಯತೆ ಮತ್ತು ಸಸ್ಯತಳಿಶಾಸ್ತ್ರದಲ್ಲಿ ಎಂಎಸ್.ಸಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂಶೋಧನೆಯನ್ನು ಕೈಗೊಂಡು ರೈತರಿಗೆ ಏನಾದರೂ ಕೊಡುಗೆ ನೀಡುವ ಮಹಾದಾಸೆಯನ್ನು ಹೊಂದಿದ್ದೇನೆ.
ಇಷ್ಟೊಂದು ಚಿನ್ನದ ಪದಕಗಳು ಲಭಿಸುತ್ತವೆ ಎಂದು ನಿರೀಕ್ಷೆ ಮಾಡಿರಲಿಲ್ಲ, ಪ್ರಯತ್ನಕ್ಕೆ ಪ್ರತಿಫಲ ದೊರಕಿದೆ. ಅಲ್ಲದೇ ನಮ್ಮ ಊರಿನಲ್ಲಿ ಪ್ರಥಮವಾಗಿ ನಾನೇ ಈ 9 ಚಿನ್ನದ ಪದಕಗಳನ್ನು ಪಡೆದದ್ದು~ ಎಂದು ಸಂತೋಷ ವ್ಯಕ್ತಪಡಿಸಿದರು.
ಎಂ.ಎಸ್ಸಿ (ಕೃಷಿ) ಅನುವಂಶೀಯತೆ ಹಾಗೂ ಸಸ್ಯತಳಿಶಾಸ್ತ್ರ ವಿಭಾಗದಲ್ಲಿ ಶೇಖರ ಬಾಬು ಗೆದ್ದಮ್ ಒಟ್ಟು 6 ಚಿನ್ನದ ಪದಕ ಪಡೆದಿದ್ದಾರೆ
`ಈ ಸಾಧನೆಗೆ ಮೂಲ ಕಾರಣ ನನ್ನ ತಂದೆ -ತಾಯಿ ಹಾಗೂ ಶಿಕ್ಷಕರು. ನಾನು ಈಗ ನವದೆಹಲಿಯ ಐಎಆರ್‌ಐನಲ್ಲಿ ಸಂಶೋಧನೆ ಮಾಡುತ್ತಿದ್ದು, ಭಾರತೀಯ ಆಡಳಿತ ಸೇವೆ (ಐಎಎಸ್) ಮೂಲಕ ಜನಸೇವೆ ಮಾಡುವ ಬಯಕೆ ಇದೆ~ ಎಂದು ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಯ ಕೋಗೂರಿನ ಶೇಖರ ಬಾಬು ಗೆದ್ದಮ್ ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು.
ಅರಭಾವಿಯ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಸುಗನಿದೇವಿ 7 ಚಿನ್ನದ ಪದಕ ಪಡೆದಿದ್ದಾರೆ. ಗ್ರಾಮೀಣ ಗೃಹವಿಜ್ಞಾನ ಮಹಾವಿದ್ಯಾಲಯದ ನೇತ್ರಾವತಿ ಎತ್ತಿನಮನಿ ಐದು, ವಿಜಾಪುರದ ಕೃಷಿ ಮಹಾವಿದ್ಯಾಲಯದ ಮಿರ್ನಾಲ್ ಶಂಕರ, ಧಾರವಾಡ ಕೃಷಿ ಮಹಾವಿದ್ಯಾಲಯದ ಚನ್ನವೀರಯ್ಯ ಹಿರೇಮಠ 4 ಚಿನ್ನದ ಪದಕ, ಧಾರವಾಡ ಕೃಷಿ ಮಹಾವಿದ್ಯಾಲಯದ ಬಸನಗೌಡ ಜಿ., ಶಿರಸಿಯ ಅರಣ್ಯ ಮಹಾವಿದ್ಯಾಲಯದ ಸುಮೀತ್ ಕುಮಾರ ಸಿಂಗ್, ಎಂಎಸ್‌ಸಿ (ಕೃಷಿ) ಅರ್ಥಶಾಸ್ತ್ರ ವಿಭಾಗದ ಸಜನೆ ಅಜಿತ ಮಹಾವೀರ, ತೋಟಗಾರಿಕಾ ವಿಭಾಗದ ಪಿಎಚ್.ಡಿ ಪದವಿಯಲ್ಲಿಎ.ವಿ.ಡಿ.ೂರಾಜೀರಾವ್ ತಲಾ 3 ಚಿನ್ನದ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.