ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಮನೆ ಮಾರಾಟ: ರೋಷನ್ ಬೇಗ್ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 8:45 IST
Last Updated 26 ಅಕ್ಟೋಬರ್ 2011, 8:45 IST

ಬೆಂಗಳೂರು (ಪಿಟಿಐ): ಮನೆಯ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ಮಂಗಳವಾರ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

ನಗರದ ಇಂಡಿಯಾ ಬಿಲ್ಡರ್ಸ್ ಸಂಸ್ಥೆಯ ಮ್ಯಾನೇಜರ ಜಿಯಾವುಲ್ಲಾ ಷರೀಫ್ ಅವರು, ರೋಷನ್ ಬೇಗ್ ಪತ್ನಿ ಹಾಗೂ ವಿ.ಜಿ.ವೈಜಯಂತಿಮಾಲಾ ಎಂಬುವವರ ವಿರುದ್ಧ ಮನೆಯ ನಕಲಿ ಪವರ್ ಆಫ್ ಅರ್ಟಾನಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.

1998ರಲ್ಲಿ ಎಸ್.ಎಂ.ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ವೇಳೆ ರೋಷನ್ ಬೇಗ್ ಅವರು ಷರೀಫ್ ನಿರ್ಮಿಸಿದ್ದ ಪಾರ್ಕ್‌ ವಿವ್ ಅಪಾರ್ಟ್‌ಮೆಂಟ್‌ನಲ್ಲಿ 50 ಲಕ್ಷ ರೂಪಾಯಿಗೆ ಫ್ಲ್ಯಾಟ್‌ವೊಂದನ್ನು ಖರೀದಿಸಿದ್ದರು. ಒಪ್ಪಂದದ ಕರಾರಿನಂತೆ ಮೊದಲ ಕಂತಾಗಿ ಬೇಗ್ ಅವರು ಐದು ಲಕ್ಷ ರೂಪಾಯಿ ಪಾವತಿಸಿದ್ದರು. ಹಾಗೂ ಬಾಕಿ ಹಣವನ್ನು ನೊಂದಣಿ ಸಮಯದಲ್ಲಿ ನೀಡುವುದಾಗಿ ತಿಳಿಸಿದ್ದರು.

ಆದರೆ, ನಂತರ ಫ್ಲ್ಯಾಟ್‌ ನೊಂದಣಿ ಮಾಡಿಸದೇ ಬೇಗ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಮಾಡಿ ವೈಜಯಂತಿಮಾಲಾ ಎಂಬುವವರಿಗೆ 2009ರಲ್ಲಿ 1.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಷರೀಫ್ ದೂರಿನಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.