ADVERTISEMENT

ನಮ್ಮವರ ತ್ಯಾಗದ ಫಲ ಆಂಧ್ರಕ್ಕೆ!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 12:45 IST
Last Updated 31 ಡಿಸೆಂಬರ್ 2010, 12:45 IST
ನಮ್ಮವರ ತ್ಯಾಗದ ಫಲ ಆಂಧ್ರಕ್ಕೆ!
ನಮ್ಮವರ ತ್ಯಾಗದ ಫಲ ಆಂಧ್ರಕ್ಕೆ!   

ವಿಜಾಪುರ: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು ಎಂಬ ಈ ಭಾಗದ ದಶಕದ ಬೇಡಿಕೆಗೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ ಕೃಷ್ಣಾ ಎರಡನೆಯ ನ್ಯಾಯಮಂಡಳಿ ಸಮ್ಮತಿಸಿದೆ. ಆದರೆ, ನೀರು ಹಂಚಿಕೆಯ ಸೂತ್ರ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.ಆಲಮಟ್ಟಿ ಜಲಾಶಯ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರ ತ್ಯಾಗದ ಫಲ. ಈ ಫಲವನ್ನು ಈಗ ಮತ್ತೆ ಆಂಧ್ರಪ್ರದೇಶಕ್ಕೆ ದೊರಕಿಸಿಕೊಟ್ಟಂತಾಗಿದೆ ಎಂಬ ಆಕ್ರೋಶ ರೈತರದ್ದಾಗಿದೆ.

ಅಣೆಕಟ್ಟೆಯ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಿದರೆ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 22 ಗ್ರಾಮಗಳು ಹಾಗೂ 48 ಸಾವಿರ ಹೆಕ್ಟೇರ್ ಜಮೀನು ಮುಳುಗಡೆಯಾಗಲಿವೆ. ‘ಎ ಸ್ಕೀಂ’ನಲ್ಲಿ ಈಗಾಗಲೆ ಅವಳಿ ಜಿಲ್ಲೆಯ 147 ಗ್ರಾಮಗಳ 1.55 ಲಕ್ಷ ಎಕರೆ ಜಮೀನು ಮುಳುಗಡೆಯಾಗಿದೆ. ಇಷ್ಟೆಲ್ಲ ಆದರೂ, ಅವಳಿ ಜಿಲ್ಲೆ ಮಾತ್ರ ನೀರಾವರಿಯಿಂದ ವಂಚಿತಗೊಂಡಿವೆ.

‘ಬಿ’ ಸ್ಕೀಂನಲ್ಲಿ ಲಭ್ಯವಾಗಲಿರುವ ನೀರಿನಲ್ಲಿ ಶೇ.50ರಷ್ಟು ನೀರು ಕರ್ನಾಟಕಕ್ಕೇ ದೊರೆಯಬೇಕು ಎಂಬ ಬೇಡಿಕೆ ಈಡೇರಿಲ್ಲ. ಕೃಷ್ಣಾ ಮೊದಲ ನ್ಯಾಯಾಧೀಕರಣದ ನೇತೃತ್ವ ವಹಿಸಿದ್ದ ನ್ಯಾ.ಬಚಾವತ್ ಅವರ ಅಭಿಪ್ರಾಯಕ್ಕೂ ಮಾನ್ಯತೆ ಸಿಕ್ಕಿಲ್ಲ ಎಂಬ ಅಸಮಾಧಾನ ಜಿಲ್ಲೆಯ ರೈತರದ್ದಾಗಿದೆ.‘ಕೃಷ್ಣಾ ಕೊಳ್ಳದಲ್ಲಿ ಸರಾಸರಿ ನೀರು ಲಭ್ಯತೆ 2,660 ಟಿಎಂಸಿ ಅಡಿ ಎಂಬ ಲೆಕ್ಕಾಚಾರದ ಆಧಾರದ ಮೇಲೆ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದೆ. 10 ವರ್ಷಗಳಲ್ಲಿ ಐದು ವರ್ಷ ಮಾತ್ರ ಇಷ್ಟು ಪ್ರಮಾಣದ ನೀರು ಲಭ್ಯವಾಗಲಿದೆ. ಒಂದು ವರ್ಷದಲ್ಲಿ ಕೃಷ್ಣಾ ಕೊಳ್ಳದಲ್ಲಿ ಕೇವಲ 1,500 ಟಿಎಂಸಿ ಅಡಿಯಷ್ಟು ನೀರು ಲಭ್ಯವಾದರೆ ನೀರು ಹಂಚಿಕೆ ಹೇಗೆ ಎಂಬುದೇ ಈಗಿರುವ ದೊಡ್ಡ ಪ್ರಶ್ನೆ. ನೀರಿನ ಲಭ್ಯತೆಯ ಆಧಾರದ ಮೇಲೆ ಆಂಧ್ರಕ್ಕೆ ನೀರು ಬಿಡುವುದಾದರೆ ಸರಿ. ನೀರು ಲಭ್ಯವಿರಲಿ ಬಿಡಲಿ ಪ್ರತಿ ವರ್ಷವೂ ಆಂಧ್ರಕ್ಕೆ ನಿಗದಿತ ಪ್ರಮಾಣದ ನೀರು ಬಿಡಲೇಬೇಕು ಎಂಬ ಷರತ್ತು ಇದ್ದರೆ ಅದು ಕರ್ನಾಟಕಕ್ಕೆ ದೊಡ್ಡ ಅನ್ಯಾಯ’ ಎಂದು ಹೆಸರು ಬಹಿರಂಗಪಡಿಸಲು ಒಲ್ಲದ ನೀರಾವರಿ ತಜ್ಞರು ಹೇಳಿದ್ದಾರೆ.

‘ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಆಂಧ್ರ ಪ್ರದೇಶಕ್ಕೆ 8 ಟಿಎಂಸಿ ಅಡಿಯಷ್ಟು ನೀರು ಬಿಡಬೇಕು ಎಂಬ ಷರತ್ತು ವಿಧಿಸಿದ್ದು ಕರ್ನಾಟಕದ ಪಾಲಿಗೆ ದೊಡ್ಡ ಅನ್ಯಾಯ. ಏಕೆಂದರೆ, ಈ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಬಿಟ್ಟು ಇರುವುದೇ ಸುಮಾರು ಹತ್ತು ಟಿಎಂಸಿಯಷ್ಟು ನೀರು ಮಾತ್ರ. ಜಲಾಶಯಕ್ಕೆ ನೀರು ಹರಿದು ಬರುವುದು ಜುಲೈ ಕೊನೆ ವಾರದ ನಂತರ. ಈ ವೇಳೆಯಲ್ಲಿ ನಮ್ಮ ರೈತರೇ ನೀರಿನ ಸಮಸ್ಯೆ ಎದುರಿಸುತ್ತಿರುತ್ತಾರೆ. ಆಗ ಆಂಧ್ರಕ್ಕೆ ನೀರು ಬಿಡಬೇಕು ಎಂದರೆ ಅದು ಕಾವೇರಿಯಂತೆ ಪ್ರತಿ ವರ್ಷವೂ ಸಂಘರ್ಷ ಹುಟ್ಟುಹಾಕಲಿದೆ’ ಎಂಬುದು ಕೃಷ್ಣಾ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಮಿತಿಯ ಜಿ.ಸಿ. ಮುತ್ತಲದಿನ್ನಿ ಅವರ ಆತಂಕ.

‘ತೀರ್ಪು ನಮ್ಮ ಪರ ಬಂದಿದೆ ಎಂದು ಬೀಗಿ ಕೈಕಟ್ಟಿ ಕುಳಿತುಕೊಳ್ಳುವುದು ಬೇಡ. ‘ಬಿ’ ಸ್ಕೀಂ ಅನುಷ್ಠಾನಕ್ಕೆ ಬೇಕಿರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿ ತಕ್ಷಣವೇ ಪುನರ್ವಸತಿ ಹಾಗೂ ಯೋಜನೆಗಳ ಅನುಷ್ಠಾನ ಆರಂಭಿಸಬೇಕು’ ಎಂಬುದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರ ಸಲಹೆ.
‘ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ 90 ಟಿಎಂಸಿ ಅಡಿಯಷ್ಟು ಖೋತಾ ಆಗಿದೆ. ಬಿ ಸ್ಕೀಂನ ಎಲ್ಲ ಯೋಜನೆಗಳಿಗೆ ಬೇಕಿರುವ ಮೂಲಸೌಲಭ್ಯವನ್ನು ಆಂಧ್ರ ಪ್ರದೇಶದವರು ಈಗಾಗಲೆ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಆ ಕಾರ್ಯ ಆಗಿಯೇ ಇಲ್ಲ. ನೀರಾವರಿ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ’ ಎಂಬುದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರ ಆಗ್ರಹ.

‘ಲಭ್ಯವಾಗಿರುವ ನೀರಿನಲ್ಲಿ ‘ಬಿ’ ಸ್ಕೀಂನ ಎಲ್ಲ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸಿ ಅವಳಿ ಜಿಲ್ಲೆಯ ಮೂರು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸರ್ಕಾರ ತುರ್ತಾಗಿ ಮುಂದಾಗಬೇಕು’ ಎಂಬುದು ಮುಳವಾಡ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ ಸೂಳಿಭಾವಿ ಒತ್ತಾಯ.‘ಜಲಾಶಯದ ಎತ್ತರ 524.256 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿದ್ದು ಹಾಗೂ ಕೃಷ್ಣಾ ಕೊಳ್ಳದ ನದಿಗಳಲ್ಲಿ ನೈಸರ್ಗಿಕ ಹರಿವನ್ನು 116 ಟಿಎಂಸಿ ಅಡಿಯಷ್ಟು ಕಾಯ್ದುಕೊಳ್ಳಬೇಕು ಎಂಬ ಷರತ್ತು ವಿಧಿಸಿದ್ದು ಐತಿಹಾಸಿಕ ತೀರ್ಪು. ಭೀಮಾ ನದಿ ವಿಷಯದಲ್ಲಿ ನಾವು ನಡೆಸಿದ ಹೋರಾಟಕ್ಕೆ ಸಿಕ್ಕ ಫಲ ಇದು’ ಎಂದು ಭೀಮಾ ನದಿ ನೀರು ಹೋರಾಟ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಹೇಳಿದ್ದಾರೆ.

‘ಬಿ ಸ್ಕೀಂನಲ್ಲಿ ಲಭ್ಯವಾಗುವ ನೀರಿನಲ್ಲಿ ಶೇ.50ರಷ್ಟು ಕರ್ನಾಟಕಕ್ಕೆ ಪಾಲು ಸಿಗಬೇಕು ಎಂದು ಬಚಾವತ್ ಹೇಳಿದ್ದರು. ಆ ನಿಯಮ ಪಾಲನೆಯಾಗಿಲ್ಲ. ಜೂನ್-ಜುಲೈ ತಿಂಗಳಲ್ಲಿ ಆಂಧ್ರಕ್ಕೆ ನೀರು ಬಿಡಬೇಕು ಎಂಬುದು ಅವೈಜ್ಞಾನಿಕ. ಈ ವಿಷಯಗಳ ಬಗ್ಗೆ ರಾಜ್ಯ ಸರ್ಕಾರ ನ್ಯಾಯ ಮಂಡಳಿ ಎದುರು ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು’ ಎಂದು ಪಂಚಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.