ADVERTISEMENT

ನರಭಕ್ಷಕ ಹುಲಿಗೆ ಜ್ವರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಮೈಸೂರು: ಇಲ್ಲಿನ ಮೃಗಾಲಯದಲ್ಲಿ­ರುವ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಕಾರೆಕಟ್ಟೆ ಅರಣ್ಯ ಪ್ರದೇಶ­ದಲ್ಲಿ ಡಿ. 5ರಂದು ಸೆರೆ ಹಿಡಿದಿದ್ದ ‘ನರಭಕ್ಷಕ’ ಹುಲಿಯ ಗಲ್ಲಕ್ಕೆ ಹೊಕ್ಕಿದ್ದ ಮುಳ್ಳುಹಂದಿಯ ಮುಳ್ಳನ್ನು ಹೊರ ತೆಗೆಯಲಾಗಿದೆ. ಹುಲಿಗೆ ಜ್ವರ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದರು.

ಮೃಗಾಲಯದ ಪಶುವೈದ್ಯರು ಶುಕ್ರವಾರ ಸಂಜೆಯಿಂದಲೇ ಈ ಹುಲಿಗೆ ಚಿಕಿತ್ಸೆ ಆರಂಭಿಸಿದ್ದಾರೆ. ಕಪಾಳದಿಂದ ಹೊರತೆಗೆದ ಮುಳ್ಳು ಸುಮಾರು ಎರಡು ಇಂಚು ಉದ್ದ ಇದೆ. ಹುಲಿಯ ರಕ್ತ ಸಂಗ್ರಹಿಸಿ ಪರೀಕ್ಷಿಸಲಾಗಿದ್ದು ಬಿಳಿರಕ್ತ ಕಣಗಳ ಸಂಖ್ಯೆ 31,500 ಇರುವುದು ಕಂಡು ಬಂದಿದೆ. ಆರೋಗ್ಯ­ವಂತ ಹುಲಿಯಲ್ಲಿ 7ರಿಂದ 14 ಸಾವಿರದವರೆಗೆ ಬಿಳಿರಕ್ತ ಕಣಗಳು ಇರುತ್ತವೆ.

ಈ ಹುಲಿಯಲ್ಲಿ ಹೆಚ್ಚು ಕಂಡು ಬಂದಿದ್ದು, ಭಾನುವಾರ ಮತ್ತೊಮ್ಮೆ ರಕ್ತ ಪರೀಕ್ಷಿಸಲಾಗುವುದು. ಗಾಯಗಳ ಮೇಲೆ, ದೇಹದ ಇತರ ಭಾಗಗಳಲ್ಲಿದ್ದ ಕ್ರಿಮಿಗಳನ್ನು ತೆಗೆಯಲಾ­ಗಿದೆ. ಹುಲಿಗೆ ರೋಗ ನಿರೋಧಕ ಚುಚ್ಚುಮದ್ದು, ‘ಬಿ’ ಕಾಂಪ್ಲೆಕ್ಸ್‌ ಮಾತ್ರೆ ಸೇರಿದಂತೆ ಅಗತ್ಯ ಔಷಧಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹುಲಿಗೆ 10 ಕಿಲೋ ಹಂದಿ ಮಾಂಸ ನೀಡಲಾಗಿದ್ದು, ಅದನ್ನು ಭಕ್ಷಿಸಿದೆ. ನೀರು ಸೇವನೆ, ನಿದ್ದೆ, ಮಲ, ಮೂತ್ರ ವಿಸರ್ಜನೆ ಎಲ್ಲವೂ ನಿಯಮಿತವಾಗಿದೆ. ಶನಿವಾರ ಯಾವುದೇ ಔಷಧ ನೀಡಿಲ್ಲ. ಶುಕ್ರವಾರ ರಾತ್ರಿಯೂ ಕೆಲ ಹೊತ್ತು ಕೋಣೆಯ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಕಸರತ್ತು ನಡೆಸಿದೆ. ಈಗ ಆರ್ಭಟ ಕಡಿಮೆಯಾಗಿದೆ.

ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಸುಧಾರಿಸುತ್ತಿದೆ. ಹುಲಿಯ ಮಲವನ್ನು ಸಂಗ್ರಹಿಸಲಾಗಿದೆ. ಡಿ. 9ರಂದು ಮಲವನ್ನು ಪ್ರಯೋಗಾಲ­ಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿ ನಂತರ ಅದು ನರಭಕ್ಷಕ ಹೌದೋ, ಅಲ್ಲವೋ ಎಂದು ತಿಳಿಯಲಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.