ADVERTISEMENT

ನಾಲ್ವರ ಬಂಧನ; ನಗದು, ವಸ್ತುಗಳು ವಶ

ಅಮೆಜಾನ್‌ ಕಂಪನಿಗೆ ₹ 1.33 ಕೋಟಿ ಹೈಟೆಕ್‌ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ನಾಲ್ವರ ಬಂಧನ; ನಗದು, ವಸ್ತುಗಳು ವಶ
ನಾಲ್ವರ ಬಂಧನ; ನಗದು, ವಸ್ತುಗಳು ವಶ   

ಚಿಕ್ಕಮಗಳೂರು: ಅಮೆಜಾನ್‌ ಕಂಪನಿಗೆ ₹ 1.33 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ, ₹ 25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.

ನಗರದ ಹಾಲೇನಹಳ್ಳಿಯ ಏಕದಂತ ಕೊರಿಯರ್‌ ಸರ್ವಿಸ್‌ ಡೆಲಿವರಿ ಬಾಯ್‌ ಸಿ.ಎಲ್‌.ದರ್ಶನ್‌ ಅಲಿಯಾಸ್‌ ಯಶವಂತ್‌ (25), ಕಲ್ಯಾಣನಗರದ ಪುನೀತ್‌ (19), ಗೌರಿಕಾಲುವೆಯ ಸಚ್ಚಿನ್‌ ಶೆಟ್ಟಿ (18), ಕೆ.ಅನಿಲ್‌ (24) ಬಂಧಿತರು. ದರ್ಶನ್‌ ಪ್ರಮುಖ ಆರೋಪಿಯಾಗಿದ್ದು, ಸ್ನೇಹಿತರಾದ ಪುನೀತ್‌, ಸುನೀಲ್‌, ತೀರ್ಥಕುಮಾರ್‌, ತೇಜಸ್‌ಗೌಡ, ಸಚ್ಚಿನ್‌ ಶೆಟ್ಟಿ ಜತೆಗೂಡಿ ವಂಚನೆ ಮಾಡಿದ್ದಾನೆ. ಆರೋಪಿಗಳಿಂದ ₹ 6.44 ಲಕ್ಷ ನಗದು, ನಾಲ್ಕು ಬೈಕ್‌, 21 ಮೊಬೈಲ್‌ ಫೋನುಗಳು, ಎರಡು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌, ವಿವಿಧ ಕಂಪನಿ ಶೂಗಳು, ಪ್ಯಾಂಟುಗಳು, ಟಿ ಷರ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಮೆಜಾನ್‌ ಕಂಪನಿಯು ನಗರದ ಏಕದಂತ ಕೊರಿಯರ್‌ ಸರ್ವಿಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೊರಿಯರ್‌ ಡೆಲಿವರಿ ಬಾಯ್‌ ದರ್ಶನ್‌ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸದೆ ವಂಚಿಸಿ, ಹಣ ಲಪಟಾಯಿಸಿರುವುದು ಕಂಡುಬಂದಿದೆ. ವಂಚನೆಗೆ ಸಾಥ್‌ ನೀಡಿದವರಲ್ಲಿ ಕೆಲವರು ದರ್ಶನ್‌ನ ಫೇಸ್‌ಬುಕ್‌ ಸ್ನೇಹಿತರು ಎಂದು ಮಾಹಿತಿ ನೀಡಿದರು.

ADVERTISEMENT

‘ಅಮೆಜಾನ್‌ ಕಂಪನಿಯಿಂದ ದರ್ಶನ್‌ಗೆ ಒದಗಿಸಿದ್ದ ಟ್ಯಾಬ್ಲೆಟ್‌ ದುರುಪಯೋಗವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ವಸ್ತುವಿನ ಹಣ ಪಾವತಿಸಲು ಟ್ಯಾಬ್‌ನಲ್ಲಿ ಗ್ರಾಹಕರ ಕಾರ್ಡ್‌ ಸ್ವೈಪ್‌ ಮಾಡಿದಾಗ ಸಂದಾಯ ಆಗದಿರುವುದು ಕಂಡುಬಂದಿದೆ. ಆದರೆ, ಕಾರ್ಡ್‌ ಸ್ವೈಪ್‌ಗೂ ಮುನ್ನವೇ ‘ಟ್ರಾನ್ಸಾಕ್ಷನ್‌ ಸಕ್ಸಸ್‌ಫುಲ್‌’ ಎಂಬ ಸಂದೇಶವು ಈ ಟ್ಯಾಬ್‌ನ ತೆರೆಯಲ್ಲಿ ಮೂಡುತ್ತದೆ. ಇದರ ಮರ್ಮವನ್ನು ತಿಳಿಯುವ ನಿಟ್ಟಿನಲ್ಲಿ ಟ್ಯಾಬ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಅಣ್ಣಾಮಲೈ ಹೇಳಿದರು.

‘ದರ್ಶನ್‌ ಮತ್ತು ಸ್ನೇಹಿತರು ಅಮೆಜಾನ್‌ ಸೇಲ್ಸ್‌ನಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ಫೋನ್‌, ಕನ್ನಡಕ, ಐಫೋನ್‌, ಪಿಯಾನೊ ಇತರ 5,817 ವಸ್ತುಗಳನ್ನು ಆರ್ಡರ್‌ ಮಾಡಿದ್ದಾರೆ. ಧ್ರುವ– 153, ಮಾಲಾ ಅನಿ–140, ಪುನೀತ್‌– 148, ಸಚ್ಚಿನ್‌ ಶೆಟ್ಟಿ–156 ವಸ್ತುಗಳನ್ನು ಆರ್ಡರ್‌ ಮಾಡಿದ್ದಾರೆ. ‘ಟ್ರಾನ್ಸಾಕ್ಷನ್‌ ಸಕ್ಸಸ್‌ಫುಲ್‌’ ತಂತ್ರ ಬಳಸಿಕೊಂಡು, ವಸ್ತುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ’ ಎಂದರು.

ಆರೋಪಿಗಳ ವಿರುದ್ಧ ನಂಬಿಕೆ ದ್ರೋಹ (ಐಪಿಸಿ 408), ವಂಚನೆ (420), ಅಪರಾಧ ಸಂಚು (34), ಐ.ಟಿ.ಕಾಯ್ದೆ 66ಸಿ (ತಂತ್ರಜ್ಞಾನ ದುರ್ಬಳಕೆ) ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಮೆಜಾನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ ಬೆಂಗಳೂರು ವಿಭಾಗದ ಹಿರಿಯ ವ್ಯವಸ್ಥಾಪಕ ನವೀನ್ ಕುಮಾರ್ ಫೆಡರಿಕ್ ಅವರು ಬಸವನಹಳ್ಳಿ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಏಕದಂತ ಕೊರಿಯರ್ ಸರ್ವಿಸ್ ನಲ್ಲಿ ಡೆಲಿವರಿ ಬಾಯ್ ದರ್ಶನ್‌ ಕಳೆದ ಸೆಪ್ಟೆಂಬರ್‌ನಿಂದ ಈ ಫೆಬ್ರುವರಿಗೆ ₹ 1.33 ಕೋಟಿ ವಂಚಿಸಿದ್ದಾರೆ. 4,604 ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿರುವ 5,817 ವಸ್ತುಗಳ ಹಣ ಕಂಪನಿ ಖಾತೆಗೆ ಪಾವತಿಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.