ಅಂಕೋಲಾ (ಉತ್ತರ ಕನ್ನಡ) ‘ಜನಪದ ಕೋಗಿಲೆ’ ಎಂದು ನಾಡಿನಾದ್ಯಂತ ಮನೆಮಾತಾಗಿರುವ ತಾಲ್ಲೂಕಿನ ಬಡಗೇರಿ ಗ್ರಾಮದ ಸುಕ್ರಿ ಬೊಮ್ಮು ಗೌಡ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಜನಪದ ಕಲೆ, ತಮ್ಮ ಬದುಕು ಮತ್ತು ಹೋರಾಟವನ್ನು ಅವರು ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಪ್ರ: ನಿಮ್ಮ ಬಾಲ್ಯ ಹೇಗಿತ್ತು? ಜನಪದ ನಂಟು ಹೇಗೆ ಬೆಳೆಯಿತು?
ತಾಯಿ ದೇವಿ, ತಂದೆ ಸುಬ್ಬಾ ಗೌಡ. ಅಂದಿನ ಸಂದರ್ಭದಲ್ಲಿ ಗೇಣಿ ಜಮೀನಿನಲ್ಲಿ ದುಡಿಯುವುದು, ಒಡೆಯರು ಕೊಟ್ಟಷ್ಟನ್ನು ಪಡೆದು ಜೀವನ ಮಾಡುವುದು ಶಿರಕುಳಿಯ ನಮ್ಮ ಬಹುತೇಕ ಹಾಲಕ್ಕಿ ಕುಟುಂಬಗಳ ಪರಿಸ್ಥಿತಿಯಾಗಿತ್ತು. ಹೀಗೆ ಗದ್ದೆ ಕೆಲಸಗಳನ್ನು ಮಾಡುತ್ತಿರುವಾಗಲೇ ಸಂಪ್ರದಾಯದ ಪದಗಳನ್ನು,ಮದುವೆ, ಹೆಣ್ಣು ನೋಡುವ ಸಂಪ್ರದಾಯ ಇತ್ಯಾದಿ ಸನ್ನಿವೇಶಗಳನ್ನು ಚಿತ್ರಿಸುವ ಹಾಡುಗಳನ್ನು ಮಹಿಳೆಯರು ಗುಂಪಾಗಿ ಹಾಡುತ್ತಿದ್ದೆವು. ಆಗಿನಿಂದಲೇ ಜನಪದ ಹಾಡುಗಳನ್ನು ರೂಢಿ ಮಾಡಿಕೊಂಡೆ.
ಸುಮಾರು 13ನೇ ವಯಸ್ಸಿಗೆ ಬಡಗೇರಿಯ ಬೊಮ್ಮು ಗೌಡ ಅವರೊಂದಿಗೆ ಮದುವೆಯಾಯಿತು. ಹುಟ್ಟಿದ ಎರಡು ಮಕ್ಕಳು ಬದುಕುಳಿಯಲಿಲ್ಲ. ನನ್ನ ತಮ್ಮನಾದ ಮಂಗು ಗೌಡನ ಮಗ ಶಂಕರನನ್ನು ದತ್ತು ತೆಗೆದುಕೊಂಡೆ. ಆದರೆ ಅವನು ದುಶ್ಚಟಗಳಿಗೆ ದಾಸನಾಗಿ ಮೃತಪಟ್ಟ. ಅದು ನನ್ನ ಜೀವನದ ಅತ್ಯಂತ ನೋವಿನ ಘಟನೆ.
ಪ್ರ: ಹೋರಾಟಗಳ ಜೊತೆಗಿನ ನಂಟು...?
ನಾನು ಚಿಕ್ಕವಳಿದ್ದಾಗ, ದಿನಕರ ದೇಸಾಯಿಯವರು ರೈತ ಕೂಟಗಳನ್ನು ಕಟ್ಟಿ, ರೈತರ ಭೂಮಿ ರೈತರಿಗೇ ಸಿಗಬೇಕು ಎಂದು ಹೋರಾಡುತ್ತಿದ್ದರು. ಭ್ರಷ್ಟಾಚಾರ ವಿರೋಧಿಸಿ ಅವರು 1960ರ ದಶಕದಲ್ಲಿ ನಡೆಸಿದ್ದ ಹಿಡಿಕೊಚ್ಚಿನ (ಪೊರಕೆ) ಮೆರವಣಿಗೆಯಲ್ಲಿ ನಾನೂ ಒಂದು ಪೊರಕೆ ಹಿಡಿದು ಭಾಗವಹಿಸಿದ್ದೆ.
ಸಾರಾಯಿ ವಿರೋಧಿಸಿ ಕಳೆದ ದಶಕದಿಂದಲೇ ಶಿರಸಿಯ ವಕೀಲ ರವೀಂದ್ರನಾಥ ನಾಯ್ಕ ಮತ್ತಿತರರ ಜೊತೆಗೂಡಿ ಹೋರಾಟ ಪ್ರಾರಂಭಿಸಿದ್ದೇವೆ. ಮುಖ್ಯವಾಗಿ ನಮ್ಮ ಹಾಲಕ್ಕಿ ಸಮುದಾಯದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಈ ಚಟಕ್ಕೆ ಬಲಿಯಾಗುತ್ತಿದ್ದು, ಅವರ ಮಡದಿ, ಮಕ್ಕಳು ಅನಾಥರಾಗುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲಿ, ಹಾಲಕ್ಕಿ ಕೊಪ್ಪಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಕೆಲವೊಬ್ಬರು ನನ್ನ ಮಾತಿಗೆ ಬೆಲೆ ಕೊಟ್ಟು ಸಾರಾಯಿ ಬಿಟ್ಟಿದ್ದಾರೆ.
ಪ್ರ: ನಿಮ್ಮ ಬುಡಕಟ್ಟು ಸಂಸ್ಕೃತಿ ಮತ್ತು ಜನಪದ ಕಲೆಗಳ ಮುಂದುವರಿಕೆ ಹೇಗೆ?
ನನಗೆ ಮಾತ್ರ ಪ್ರಶಸ್ತಿ, ಪುರಸ್ಕಾರ ಸಿಗುವುದು ದೊಡ್ಡದಲ್ಲ. ನನ್ನ ಹಾಗೆಯೇ ಸಾಕಷ್ಟು ಜನಪದ ಹಾಡುಗಳನ್ನು ಬಲ್ಲಂತಹ ಹಾಲಕ್ಕಿ ಮಹಿಳೆಯರು ಜಿಲ್ಲೆಯ ತುಂಬ ಇದ್ದಾರೆ. ಅವರನ್ನು ಗುರುತಿಸಿ ಗೌರವಿಸುವಂತಾಗಬೇಕು.
ನನ್ನಷ್ಟಕ್ಕೆ ನಾನು ಹಾಡಿಕೊಂಡು ಜೀವನ ನಡೆಸುತ್ತಿದ್ದೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದ ನಮ್ಮ ಊರಿನ ಗೋವಿಂದ ಮಹಾಲೆ ಅವರು ನನ್ನನ್ನು ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹಾಡುಗಳ ಧ್ವನಿ ಮುದ್ರಣಕ್ಕೆ ನೆರವಾದರು. ಆ ನಂತರ ಎನ್.ಆರ್. ನಾಯಕ ದಂಪತಿ ನನ್ನ ಹಾಡು ಕೇಳಿದರು. ಹೀಗೆ ಒಬ್ಬರಿಂದ ಒಬ್ಬರಿಗೆ ಪ್ರಚಾರವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ. ಹಿ.ಚಿ. ಬೋರಲಿಂಗಯ್ಯನವರು ನಮ್ಮ ಮನೆಗೆ ಬಂದು ದಿನಗಟ್ಟಲೆ ಕುಳಿತು ಹಾಡುಗಳನ್ನು ಕೇಳಿಸಿಕೊಂಡರು. ಇದರಿಂದ ಮುಂದೆ ಹಲವಾರು ಪ್ರಶಸ್ತಿ-ಪುರಸ್ಕಾರ ದೊರೆಯಲು ಕಾರಣವಾಯಿತು. ಆದರೆ, ಈಗಿನ ಹೆಣ್ಣುಮಕ್ಕಳಿಗೆ ಜನಪದ ಹಾಡುಗಳ ಕುರಿತು ಅಷ್ಟು ಕಾಳಜಿ ಇಲ್ಲ.
ಪ್ರ: ವಿದ್ವಾಂಸರು, ಹಿರಿಯರೊಡನೆ ಒಡನಾಟ ಹೇಗಿತ್ತು?
ಜಾನಪದ ವಿದ್ವಾಂಸ ಡಾ.ಎಚ್.ಎಲ್. ನಾಗೇಗೌಡ, ಹಿರಿಯ ಜನಪದ ಹಾಡುಗಾರ ಬಾನಂದೂರು ಕೆಂಪಯ್ಯ ಮುಂತಾದವರು ನನ್ನ ಹಾಡುಗಳನ್ನು ಮೆಚ್ಚಿಕೊಂಡಿದ್ದರು. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಕೆಲವು ವಿದೇಶಿ ವಿದ್ವಾಂಸರೂ ನನ್ನ ಹಾಡುಗಳ ಧ್ವನಿಮುದ್ರಿಸಿಕೊಂಡಿದ್ದಾರೆ.
ಪ್ರ: ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಎಲ್ಲಿಗೆ ಬಂತು?
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಅವರ ಜೊತೆಗೆ ಸೇರಿಕೊಂಡು ಸುಮಾರು ಐದು ಬಾರಿ ದೆಹಲಿ ಮತ್ತು ಬೆಂಗಳೂರಿಗೆ ಹೋಗಿ ನಮ್ಮ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಿ ನಮ್ಮ ಯುವಕರಿಗೆ ಉದ್ಯೋಗ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸ್ಥಾನ-ಮಾನಗಳು ದೊರಕುಂತಾಗಲಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದೇವೆ. ನಾನು ಬದುಕಿರುವಾಗಲೇ ನನ್ನ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಕನಸನ್ನು ಸರ್ಕಾರಗಳು ನನಸಾಗಿಸಬೇಕು ಎಂಬುದು ನನ್ನ ಕೋರಿಕೆ.
–ಸಂದರ್ಶನ: ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.