ADVERTISEMENT

ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು; ಕಾಫಿ ತೋಟಕ್ಕೂ ಹಬ್ಬಿದ ಬೆಂಕಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2012, 19:30 IST
Last Updated 28 ಫೆಬ್ರುವರಿ 2012, 19:30 IST
ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು; ಕಾಫಿ ತೋಟಕ್ಕೂ  ಹಬ್ಬಿದ ಬೆಂಕಿ
ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು; ಕಾಫಿ ತೋಟಕ್ಕೂ ಹಬ್ಬಿದ ಬೆಂಕಿ   

ಗೋಣಿಕೊಪ್ಪಲು: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಹಬ್ಬಿರುವ ಕಾಳ್ಗಿಚ್ಚು 4ನೇ ದಿನವಾದ ಮಂಗಳವಾರವೂ ನಿಯಂತ್ರಣಕ್ಕೆ ಬಂದಿಲ್ಲ. ಬೇರೆ ಬೇರೆ ವಲಯದಿಂದ ಆಗಮಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ನೌಕರರು ಹಗಲು ರಾತ್ರಿ ಶ್ರಮಿಸುತ್ತಿದ್ದರೂ ಒಣಗಿದ ಬಿದಿರು ಅಗ್ನಿ ಶಮನಕ್ಕೆ ಆಸ್ಪದ ನೀಡುತ್ತಿಲ್ಲ.

ಬೆಂಕಿಯ ಕೆನ್ನಾಲಗೆಗೆ ಸಿಕ್ಕಿರುವ ಬಿದಿರು ಬಾಂಬ್ ರೀತಿಯಲ್ಲಿ ಸಿಡಿದು ಇಡೀ ಕಾಡಿಗೆ ಬೆಂಕಿ ಹಬ್ಬಿಸುತ್ತಿದೆ. ಸಿಡಿದ ಬಿದಿರಿನ ಕಿಡಿಗಳು ನೂರಾರು ಮೀಟರ್‌ವರೆಗೆ ಹಾರಿ ಕಾಳ್ಗಿಚ್ಚಿಗೆ ದಾರಿ ಮಾಡಿಕೊಡುತ್ತಿವೆ. ಬಿದಿರಿನ ಸಿಡಿತಕ್ಕೆ ಹಸಿರಿನ ಹೆಮ್ಮರಗಳು ಸುಟ್ಟು ಬೂದಿಯಾಗುತ್ತಿವೆ. ಮುಗಿಲೆತ್ತರಕ್ಕೆ ಸಿಡಿದ ಬೆಂಕಿಯ ಕಿಡಿ ಇನ್ನೊಂದು ಮರದ ಪೊಟರೆಯೊಳಗೆ ಬಿದ್ದು ಅಲ್ಲಿಯೂ ಬೆಂಕಿ ಬುಗ್ ಎಂದು ಹತ್ತಿಕೊಳ್ಳುತ್ತಿದೆ.

~ಈ ಹಿಂದೆಯೂ ಅರಣ್ಯಕ್ಕೆ ಬೆಂಕಿ ಬೀಳುತ್ತಿತ್ತು. ಅದು ಒಂದೆರಡು ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈ ಬಾರಿ ಅರಣ್ಯದಲ್ಲಿ ವ್ಯಾಪಕವಾಗಿ ಬಿದಿರು ಒಣಗಿರುವುದರಿಂದ ನಿಯಂತ್ರಣ ಸಾಧಿಸಲು ಬಹಳ ಕಷ್ಟವಾಗಿದೆ~ ಎಂದು ಅಸಾಹಾಯಕತೆಯಿಂದ ನುಡಿಯುತ್ತಾರೆ ನಾಗರಹೊಳೆ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ.

~ಬೆಂಕಿ ನಂದಿಸಲು ಹತ್ತಾರು ವಲಯ ಅರಣ್ಯಾಧಿಕಾರಿಗಳು, ನೂರಾರು ಮಂದಿ ನೌಕರರು ಹಾಗೂ ಹತ್ತಾರು ವಾಹನಗಳನ್ನು ಬಳಸಿಕೊಳ್ಳಲಾಗಿದೆ. ವಾಹನದಲ್ಲಿ ನೀರು ತುಂಬಿಸಿಕೊಂಡು ಬಿದಿರಿನ ಹಿಂಡಲಿಗೆ ಎರಚಿ ಆದಷ್ಟು ಮಟ್ಟಿಗೆ ಅಗ್ನಿಯ ಆರ್ಭಟ ಕಡಿಮೆಗೊಳಿಸಲಾಗುತ್ತಿದೆ. ನಾಗರಹೊಳೆ ಬಿಟ್ಟರೆ ಉಳಿದ ಕಡೆ ನಿಯಂತ್ರಣಕ್ಕೆ ಬಂದಿದೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಆನೆಚೌಕೂರು ಭಾಗದ ಬೀಟೆಕಟ್ಟೆ, ಕಾಟಿಬೆಟ್ಟ, ರಾಜಾಪುರ ಅರಣ್ಯ, ಕುಂಬಾರಕಟ್ಟೆ ಮೊದಲಾದ ಭಾಗಗಳಲ್ಲಿ ಬೆಂಕಿಯ ಕೆನ್ನಾಲಗೆ ನಿರಂತರವಾಗಿ ಮುನ್ನುಗ್ಗುತ್ತಿದೆ. ಪಿರಿಯಾಪಟ್ಟಣ ಭಾಗದ ಅರಣ್ಯದಲ್ಲಿಯೂ ಬೆಂಕಿ ಬಿದ್ದಿದ್ದು ಮತ್ತಿಗೋಡು ಅರಣ್ಯದ ಕಡೆಗೆ ಚಲಿಸುತ್ತಿದೆ. ಇದರ ನಿಯಂತ್ರಣಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲಕೃಷ್ಣ, ಮತ್ತಿಗೋಡು ವಲಯ ಅರಣ್ಯಾಧಿಕಾರಿ ದೇವರಾಜು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ರಾಜಾಪುರ ಸುಳುಗೋಡು ಭಾಗದಲ್ಲಿ ಕಾಳ್ಗಿಚ್ಚಿನ ರಭಸಕ್ಕೆ ಅರಣ್ಯದ ಅಂಚಿನ ನೂರಾರು ಎಕರೆ ಕಾಫಿ  ತೋಟ ಕೂಡ ಸುಟ್ಟು ಹೋಗಿವೆ. ಸುಳುಗೋಡು, ಕೋಣನಕಟ್ಟೆ ಭಾಗದ ಜನತೆ ಕಾಫಿ ತೋಟದ ಬೆಂಕಿ ನಂದಿಸಲು ರಾತ್ರಿ ವೇಳೆಯಲ್ಲಿಯೂ ನೀರು ತುಂಬಿಸಿಕೊಂಡು ಕಾವಲು ಕಾಯುತ್ತಿದ್ದಾರೆ.

~ಗಾಳಿಯ ರಭಸಕ್ಕೆ ಬೆಂಕಿಯ ಆರ್ಭಟವೂ ಅತಿಯಾಗಿದ್ದು ನೋಡ-ನೋಡುತ್ತಿದ್ದಂತೆಯೇ ಕಾಫಿ ತೋಟ ಬೆಂಕಿಗೆ ಆಹುತಿಯಾಯಿತು~ ಎಂದು ಸುಳುಗೋಡಿನ ಕಾಫಿ ಬೆಳೆಗಾರ ಅಜ್ಜಿಕುಟ್ಟಿರ ಮೊಣ್ಣಪ್ಪ ಹೆಳಿದರು. ಈ ಭಾಗದ ಅರಣ್ಯದ ಅಂಚಿನಲ್ಲಿ ನಿರ್ಮಿಸಿದ್ದ ಸೋಲಾರ್ ಬೇಲಿಯೂ ಕೂಡ ಸುಟ್ಟು ಕರಕಲಾಗಿದೆ. ರಾತ್ರಿವೇಳೆ ಬಿದಿರು ಸಿಡಿದು ಮನೆಯ ಮೇಲೆ ಕಿಡಿ ಹಾರಿ ಎಲ್ಲಿ ಬೆಂಕಿ ಹರಡುತ್ತದೆಯೋ ಎಂದು ಅರಣ್ಯದ ಅಂಚಿನ ಜನತೆ ನಿದ್ರೆ ಬಿಟ್ಟು ಬಿಂದಿಗೆ, ಡ್ರಂ ಮುಂತಾದವುಗಳಲ್ಲಿ ನೀರು ತುಂಬಿಸಿಕೊಂಡು ಕಾಯುವ ಸ್ಥಿತಿ ಬಂದಿದೆ. ಈ ಮಧ್ಯೆ ಕಾಳ್ಗಿಚ್ಚಿಗೆ ಬೆದರಿದ ವನ್ಯ ಜೀವಿಗಳು ಕೂಡ ಕೆಲವು ಕಡೆ ಕಾಫಿ ತೋಟದತ್ತ ಮುಖ ಮಾಡಿವೆ.

 ಕಾಳ್ಗಿಚ್ಚಿನಿಂದ ಅಪಾರ ನಷ್ಟ

ಹುಣಸೂರು: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ತಗಲಿದ್ದ ಬೆಂಕಿ ಹುಣಸೂರು ವಲಯದಲ್ಲಿ ಮಂಗಳವಾರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಈ ಘಟನೆಯಿಂದ ಸಾವಿರಾರು ಎಕರೆ ಭಸ್ಮವಾಗಿ ಅಪಾರ ನಷ್ಟ ಸಂಭವಿಸಿದೆ. ನಾಲ್ಕು ದಿನದಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿರುವ ನಾಗರಹೊಳೆ ಉದ್ಯಾನಕ್ಕೆ ಸೇರಿದ ಮಾರಪ್ಪನಕೆರೆ, ಹುಣಸೇಕಟ್ಟೆ, ತೋಳಚಿಕೆರೆ, ನಾಗರಹೊಳೆ, ಮೇಟಿಕುಪ್ಪೆ, ಆನೇಚೌಕೂರು, ಗದ್ದೆಹಾಡಿ ಮತ್ತು ವೀರನಹೊಸಹಳ್ಳಿ ಭಾಗಶಃ ಸುಟ್ಟು ಕರಕಲಾಗಿವೆ.

ಉದ್ಯಾನ ವನಕ್ಕೆ ಬೆಂಕಿ ಬೀಳದಂತೆ ಇಲಾಖೆ ರಸ್ತೆಯ ಎರಡು ಪಕ್ಕದಲ್ಲಿ 10 ಮೀಟರ್ ಅಳತೆಯಲ್ಲಿ ಫೈರ್ ಲೈನ್ ನಿರ್ಮಿಸಿ ಆಗಬಹುದಾದ ಅನಾಹುತ ತಪ್ಪಿಸುವ ಕ್ರಮ ತೆಗೆದುಕೊಂಡಿತ್ತಾದರೂ, ಕಿಡಿಗೇಡಿಗಳು ಅರಣ್ಯದೊಳಗೆ ನುಗ್ಗಿ ಬೆಂಕಿ ಹಾಕುತ್ತಿದ್ದಾರೆ. ಇಲಾಖೆಯಲ್ಲಿ ಇರುವ ಸಿಬ್ಬಂದಿ ಬಳಸಿಕೊಂಡು ಅರಣ್ಯ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಡಿ.ಸಿ.ಎಫ್. ವಿಜಯರಂಜನ್ ಸಿಂಗ್.

ಬೆಂಕಿ ನಂದಿಸಲು ವಿಶೇಷ ತಂಡ ರಚಿಸಿ 200 ಗಿರಿಜನರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದೇವೆ. ಈ ಜನರು ದಿನದ 24 ಗಂಟೆ ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಈ ಘಟನೆಗೆ ವಿವರಣೆ ಕೋರಿದೆ ಎಂದರು.

ಭೇಟಿ: ನಾಗರಹೊಳೆ ಅಭಯಾರಣ್ಯದಲ್ಲಿ ಕಳೆದ ಮೂರು ದಿನದಿಂದ ಹತ್ತಿ ಉರಿಯುತ್ತಿರುವ ಬೆಂಕಿ ಕುರಿತು ಇಲಾಖೆಯಿಂದ ಮಾಹಿತಿ ಸಂಗ್ರಹಿಸಲು ರಾಜ್ಯ ಅರಣ್ಯ ಉನ್ನತ್ತಾಧಿಕಾರಿ ಬಿ.ಕೆ. ಸಿಂಗ್ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.