ADVERTISEMENT

ನಿರುದ್ಯೋಗಿಗಳಿಬ್ಬರಿಂದ ಆತ್ಮಾಹುತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಮಂಗಳೂರು: ಮೊದಲ ಹಂತದ ಯೋಜನೆ ವೇಳೆ ಭೂಮಿ ಕಳೆದುಕೊಂಡವರಿಗೆ ನೀಡಿದ್ದ ಉದ್ಯೋಗ ಭರವಸೆಯನ್ನು ಎಂಎಸ್‌ಇಝೆಡ್ ಈವರೆಗೂ ಈಡೇರಿಸಿಲ್ಲ ಎಂದು ಖಂಡಿಸಿ ತರಬೇತಿ ಪಡೆದ ನಿರುದ್ಯೋಗಿಗಳು ನಗರದಲ್ಲಿನ ಎಂಎಸ್‌ಇಝೆಡ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಭಾವಾವೇಶಕ್ಕೊಳಗಾದ ಯುವಕರಿಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸಿದರು.

ಎಂಎಸ್‌ಇಝೆಡ್ ಕಚೇರಿಯಿರುವ ನಗರದ ಉರ್ವಸ್ಟೋರ್‌ನ ಮುಡಾ(ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ) ಕಟ್ಟಡದ ಅಂಗಳದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ಆರಂಭವಾಗಿದ್ದು, 11.15ರ ವೇಳೆಗೆ ಯುವಕರಿಬ್ಬರು ಆತ್ಮಹತ್ಯೆಗೆ ಮುಂದಾಗಿದ್ದು ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರನ್ನು ಬೆಚ್ಚಿಬೀಳಿಸಿತು.
ಕಳವಾರಿನ ಲೋಕೇಶ್ ಕುಲಾಲ್ ಕ್ಯಾನಿನಿಂದ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡರು. ಪಕ್ಕದಲ್ಲಿದ್ದ ಕುಮಾರ್ ಪೂಜಾರಿ ಎಂಬವರೂ ತಮ್ಮ ಮೇಲೆಯೂ ಅದೇ ಕ್ಯಾನ್‌ನಿಂದ ಸೀಮೆಎಣ್ಣೆ ಬಗ್ಗಿಸಿಕೊಂಡರು. ತಕ್ಷಣ ಎಚ್ಚೆತ್ತ ಪೊಲೀಸರು ಮುಂದೆ ನುಗ್ಗಿ ಇಬ್ಬರನ್ನೂ ದೂರ ಎಳೆದುಕೊಂಡು ಹೋಗಿ ಸಂಭವಿಸಬಹುದಾಗಿದ್ದ ಪ್ರಾಣಾಪಾಯ ತಪ್ಪಿಸಿದರು.

150 ಮಂದಿ ತರಬೇತಿ ಪಡೆದ ಯುವಕ-ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ: ಯೋಜನೆಯಿಂದಾಗಿ ಭೂಮಿ ಕಳೆದುಕೊಂಡ ಕುಟುಂಬದವರಿಗೆ ಉದ್ಯೋಗದ ಭರವಸೆ ನೀಡಿ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಮೂರೂವರೆ ವರ್ಷಗಳ ತರಬೇತಿ ನೀಡಲಾಗಿತ್ತು. ಆದರೆ ಉದ್ಯೋಗ ಭರವಸೆ ಈಡೇರದ ಕಾರಣ ಜ. 5ರಂದು ಪ್ರತಿಭಟನೆ ನಡೆಸಿದ್ದರು. ನಂತರ ಈ ಬಗ್ಗೆ ಮಾತುಕತೆಗೆ 4 ಬಾರಿ ದಿನಾಂಕ ನಿಗದಿಯಾಗಿ ಮುಂದೆ ಹೋಗಿತ್ತು.

ಇದೇ 29ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎಂಎಸ್‌ಇಝೆಡ್ ಅಧಿಕಾರಿಗಳು, ಸಂಯುಕ್ತ ಹಿತರಕ್ಷಣಾ ಸಮಿತಿ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಸಮಿತಿ ಪದಾಧಿಕಾರಿಗಳು, ಪ್ರತಿಭಟನಾನಿರತರಿಗೆ ಭರವಸೆ ನೀಡಿದ ನಂತರ ಧರಣಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.