ADVERTISEMENT

ನೀರಿನ ಸಮಸ್ಯೆ: ತುರ್ತು ದುರಸ್ತಿಗೆ ಸರ್ವ ಸನ್ನದ್ಧ ಬಸ್

ಭೀಮಸೇನ ಚಳಗೇರಿ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಕೊಪ್ಪಳ: ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿನ ನೀರಿನ ಬವಣೆಯನ್ನು ನಿವಾರಿಸಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಕೊಳವೆಬಾವಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿನ ತೊಂದರೆಗಳನ್ನು ತುರ್ತಾಗಿ ದುರಸ್ತಿ ಮಾಡಲು ಹೊಸ ವ್ಯವಸ್ಥೆ ರೂಪಿಸಿ ಗಮನ ಸೆಳೆದಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿರುವ ಜಿಲ್ಲಾಡಳಿತ, ಕೆಟ್ಟು ಹೋಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ ಬಳಕೆಗೆ ಸಿದ್ಧಗೊಳಿಸಲು ಎರಡು ಬಸ್‌ಗಳನ್ನು ನಿಯೋಜಿಸಿದೆ.

ದೂರದ ಗ್ರಾಮದಲ್ಲಿ ಕೊಳವೆಬಾವಿಯೊಂದು ಕೆಟ್ಟು ಹೋದರೆ ಅದನ್ನು ದುರಸ್ತಿಗೊಳಿಸಲು ಸಮಯ ಹಿಡಿಯುತ್ತಿತ್ತು. ಅಲ್ಲದೇ, ದುರಸ್ತಿ ತಡವಾದಷ್ಟೂ ಜನರು ತೊಂದರೆ ಅನುಭವಿಸಬೇಕಾಗಿತ್ತು. ಈ ವ್ಯವಸ್ಥೆಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡು ಕೊಳವೆಬಾವಿಗಳು ಮತ್ತೆ ಬಳಕೆಗೆ ಸಿದ್ಧಗೊಳ್ಳುತ್ತಿವೆ ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಎರಡು ಹಳೆಯ ಬಸ್‌ಗಳನ್ನು ಖರೀದಿಸಲಾಗಿದೆ. ಕೊಳವೆಬಾವಿಗಳ ದುರಸ್ತಿ, ಫ್ಲಷಿಂಗ್, ರಿಚಾರ್ಜ್ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಸಲಕರಣೆಗಳು, ಬಿಡಿಭಾಗಗಳು ಹಾಗೂ ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ಈ ಬಸ್‌ಗಳಲ್ಲಿ ಇರುತ್ತಾರೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವಿವರಿಸುತ್ತಾರೆ.

ನೀರಿನ ತೊಂದರೆ ಕುರಿತಂತೆ ಜನರು ಕರೆ ಮಾಡಿ ದೂರು ದಾಖಲಿಸಲು ಜಿಲ್ಲಾ ಕೇಂದ್ರದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಕೊಠಡಿಗೆ ಕರೆ ಮಾಡುವವರಿಂದ ಯಾವ ಗ್ರಾಮ, ಸಮಸ್ಯೆ ಯಾವ ಸ್ವರೂಪದ್ದು ಮತ್ತಿತರ ಮಾಹಿತಿಯನ್ನು ಪಡೆದು ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಆ ಅಧಿಕಾರಿಗಳು ಈ ಬಸ್‌ಗಳನ್ನು ಸಂಬಂಧಪಟ್ಟ ಗ್ರಾಮಕ್ಕೆ ಕಳುಹಿಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನೋಡಿಕೊಳ್ಳುತ್ತಾರೆ ಎಂದೂ ವಿವರಿಸುತ್ತಾರೆ.

ಕೋಲಾರ ಘಟಕದ ಬಸ್ ಅನ್ನು 3,71,126 ರೂಪಾಯಿ ಹಾಗೂ ಹಾಸನ ಘಟಕದ ಬಸ್‌ಅನ್ನು 3,16,329 ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗಿದೆ. ಜಿಲ್ಲಾ ಪಂಚಾಯಿತಿ ಈ ಬಸ್‌ಗಳನ್ನು ನಿರ್ವಹಿಸುತ್ತಿದೆ.

ಈ ವ್ಯವಸ್ಥೆ ಆರಂಭಗೊಂಡಾಗಿನಿಂದ ಈ ವರೆಗೆ 51 ಕರೆಗಳು ಬಂದಿವೆ. ಕರೆಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ತಕ್ಷಣವೇ ನಿವಾರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ ಎಂದು ನಿಯಂತ್ರಣ ಕೊಠಡಿ ಉಸ್ತುವಾರಿ ಅಧಿಕಾರಿಗಳು ವಿವರಿಸುತ್ತಾರೆ.

ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ಒಂದು ಬಸ್ ಸಂಚರಿಸಿದರೆ, ಮತ್ತೊಂದು ಬಸ್ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿದೆ.

ಇಷ್ಟಾದರೂ ನೀರಿನ ಸಮಸ್ಯೆ ಇಲ್ಲವೆಂದಲ್ಲ. ಇಂದು ದುರಸ್ತಿ ಮಾಡಿರುವ ಕೊಳವೆಬಾವಿಯಲ್ಲಿ ಮತ್ತೆ ಬೇರೊಂದು ತರಹದ ಸಮಸ್ಯೆ ಕಂಡು ಬರಬಹುದು. ಕೊಳವೆಬಾವಿ ಸೇರಿದಂತೆ ನೀರು ಪೂರೈಕೆಗಾಗಿ ಅಳವಡಿಸಲಾಗಿರುವ ಸಾಧನಗಳ ಬಳಕೆ ಬಗ್ಗೆ ಜನರೂ ಕಾಳಜಿ ವಹಿಸುವುದು ಮುಖ್ಯ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಹೇಳುತ್ತಾರೆ.

ಕೊಳವೆಬಾವಿ ಸೇರಿದಂತೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಲೋಪದೋಷ ಕಂಡು ಬಂದರೆ ದುರಸ್ತಿಗೆ ಈ ಮುಂಚಿನ ವರ್ಷಗಳಲ್ಲಿ ಹಲವು ದಿನಗಳೇ ಬೇಕಾಗುತ್ತಿದ್ದವು. ಬಿಡಿಭಾಗಗಳಿದ್ದಾಗ ತಾಂತ್ರಿಕ ಸಿಬ್ಬಂದಿ ಇಲ್ಲ. ಸಿಬ್ಬಂದಿ ಇದ್ದಾಗ ಸಲಕರಣೆ-ಬಿಡಿಭಾಗಗಳ ಕೊರತೆ ಎಂಬಂತಿತ್ತು. ಈಗ ಅಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಕರೆ ಬಂದ ಕೆಲವೇ ಗಂಟೆಗಳಲ್ಲಿ ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.