ADVERTISEMENT

ನೋವು ಕೇಳಿ ಗಿರಾಕಿಗಳೇ ಪಾರು ಮಾಡಿದರು!

ರಾಜೇಶ್ ರೈ ಚಟ್ಲ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ನೋವು ಕೇಳಿ ಗಿರಾಕಿಗಳೇ ಪಾರು ಮಾಡಿದರು!
ನೋವು ಕೇಳಿ ಗಿರಾಕಿಗಳೇ ಪಾರು ಮಾಡಿದರು!   

ಬೆಂಗಳೂರು: ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿ, ರಾಜ್ಯದ ‘ಕೆಂಪು ದೀಪ’ ತಲುಪಿ ‘ದಂಧೆ’ಯ ಹಾದಿ ಹಿಡಿದ ಅಮಾಯಕ ಹೆಣ್ಣು ಮಕ್ಕಳು ಈ ಕೂಪದಿಂದ ಪಾರಾಗಲು ಗಿರಾಕಿಗಳೇ ನೆರವಾಗಿರುವ  ಸಂಗತಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಕಾಮತೃಷೆ ತೀರಿಸಿಕೊಳ್ಳಲು ವೇಶ್ಯಾಗೃಹಗಳಿಗೆ ಹೋದ ಅನೇಕ ಗಿರಾಕಿಗಳು, ದೇಹ ಸುಖ ನೀಡಲು ಬಂದ ಹೆಣ್ಣು ಮಕ್ಕಳ ಒಡಲ ನೋವು ಕೇಳಿ ಅವರನ್ನು ಅಲ್ಲಿಂದ ಪಾರು ಮಾಡಿದ್ದಾರೆ. ಹೀಗೆ ಪಾರಾಗಲು ನೆರವಾದವರ ಪೈಕಿ, ಗಿರಾಕಿಗಳ ಪ್ರಮಾಣ ಶೇ 45.9ರಷ್ಟು.

ಉಳಿದಂತೆ, ಪೊಲೀಸರು (ಶೇ 12.6), ನೆರೆಹೊರೆಯವರು (ಶೇ 16.3), ಹಿತೈಷಿಗಳು (ಶೇ 6.5) ಅವರ ರಕ್ಷಣೆಗೆ ಬಂದಿದ್ದಾರೆ. ಮಾನವ ಕಳ್ಳಸಾಗಣೆ ತಡೆ ಘಟಕ (ಆ್ಯಂಟಿ ಟ್ರಾಫಿಕಿಂಗ್‌ ಸೆಲ್‌– ಶೇ 12.9) ಕೂಡಾ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದೆ.

ADVERTISEMENT

ದಂಧೆಯಿಂದ ಪಾರಾಗಿ ಬಂದವರಲ್ಲಿ ಶೇ 95.5ರಷ್ಟು ಮಂದಿಗೆ ಶಿಕ್ಷಣ ಮುಂದುವರಿಸಲು ಸಾಧ್ಯ ಆಗುತ್ತಿಲ್ಲ. ಸರಾಸರಿ  ಶೇ 30ಕ್ಕೂ ಹೆಚ್ಚು ಮಂದಿಗೆ ಓದು ಮುಂದುವರಿಸಲು ಆಸಕ್ತಿ ಇಲ್ಲ. ಶೇ 41ರಷ್ಟು ಮಂದಿಗೆ ಓದಲು ಅನುಕೂಲಕರ ವಾತಾವರಣ ಇಲ್ಲ.  ಆದರೆ, ಈ ಹೆಣ್ಣು ಮಕ್ಕಳು ಮತ್ತೆ  ದಂಧೆಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗದಂತೆ, ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.

ಇನ್ನೊಂದು ಸಂಗತಿಯೆಂದರೆ, ಪಾರಾಗಿ ಬಂದ ಹೆಣ್ಣು ಮಕ್ಕಳಲ್ಲಿ ಹೆಚ್ಚು ಮಂದಿ (ಶೇ 33.5) ಲೈಂಗಿಕ ವೃತ್ತಿಯನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿರುವುದು ಅಧ್ಯಯನ ಸಂದರ್ಭದಲ್ಲಿ ಗೊತ್ತಾಗಿದೆ.

ಉಳಿದಂತೆ, ವ್ಯವಸಾಯ (ಶೇ 4.8), ಮನೆಕೆಲಸ (ಶೇ18.9), ಗಾರ್ಮೆಂಟ್‌ ಕೆಲಸ (ಶೇ 3.2), ಸ್ವ ಉದ್ಯೋಗ (ಶೇ 4.2), ಕೂಲಿ (ಶೇ 8.4), ಗಾರೆ ಕೆಲಸ (ಶೇ 6.1), ಟೈಲರಿಂಗ್‌ (ಶೇ 7.2), ವ್ಯಾಪಾರ (ಶೇ 2.3) ಮಾಡುತ್ತಾರೆ.

ಕಳ್ಳಸಾಗಣೆಗೆ ಇಲ್ಲ ಕಡಿವಾಣ: ಲೈಂಗಿಕ ವೃತ್ತಿ ನಿರತರಲ್ಲಿ ಅರ್ಧದಷ್ಟು ಹೆಣ್ಣು ಮಕ್ಕಳು ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿ ಈ ಹಾದಿ ಹಿಡಿದಿದ್ದಾರೆ. ಇವರಲ್ಲಿ ಬಹುತೇಕರು ವೇಶ್ಯಾಗೃಹ ಮತ್ತು ವಸತಿಗೃಹಗಳಲ್ಲಿ ಸಂದಿಗ್ಧ ಸ್ಥಿತಿಯಲ್ಲಿ  ಬದುಕು ಸವೆಸುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವ ಜಾಲ ವ್ಯಾಪಕವಾಗಿರುವುದನ್ನು ಅಧ್ಯಯನ ಸಮಿತಿ ಗಂಭೀರವಾಗಿ ಪರಿಗಣಿಸಿದೆ.

‘ಹೌದು, ನಮ್ಮನ್ನು ಕದ್ದೊಯ್ದು ಈ ವೃತ್ತಿಗೆ ತಳ್ಳಲಾಗಿದೆ’ ಎಂದು ದಂಧೆಯಲ್ಲಿ ತೊಡಗಿಸಿಕೊಂಡಿರುವ ಶೇಕಡಾ 45.9ರಷ್ಟು ಮಹಿಳೆಯರು  ಒಪ್ಪಿಕೊಂಡಿದ್ದಾರೆ.

ಹೀಗೆ ಜಾಲಕ್ಕೆ ಬಿದ್ದ ಅನೇಕ ಮಹಿಳೆಯರನ್ನು ಅಪರಿಚಿತರ ಮನೆ ಅಥವಾ ಗೊತ್ತಿಲ್ಲದ ಜಾಗಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ವೃತ್ತಿಗೆ ದೂಡಲಾಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಈ ಬಗ್ಗೆ ಗಂಭೀರ ಕಾರ್ಯಾಚರಣೆ ಅಗತ್ಯ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ. ರಾಜ್ಯದ ಸಾವಿರಾರು ಹೆಣ್ಣುಮಕ್ಕಳನ್ನು ಕಳ್ಳಸಾಗಣೆ ಮೂಲಕ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾಕ್ಕೆ ದಂಧೆಗೆ ಕರೆದೊಯ್ಯಲಾಗಿದೆ. ದೇಶವ್ಯಾಪಿಯಾಗಿ ಈ ಜಾಲ ಹಬ್ಬಿದೆ. ಅದರ ಕೊಂಡಿ ಜಾಗತಿಕ ಮಟ್ಟದಲ್ಲೂ ವಿಸ್ತರಿಸಿದೆ ಎಂದೂ ವರದಿ ಹೇಳಿದೆ.

‘ಸಾಮಾಜಿಕ ಘನತೆ’ಯ ಭಯ
ಕಳ್ಳಸಾಗಣೆಯಿಂದ ಪಾರಾಗಿ ಬಂದ ಲೈಂಗಿಕ ವೃತ್ತಿ ನಿರತರಲ್ಲಿ ಶೇ 42.1ರಷ್ಟು ಮಂದಿ ಮಾತ್ರ ಸ್ವಂತ ಮನೆಗೆ ಹೋಗುತ್ತಾರೆ. ಶೇ 18ರಷ್ಟು ಮಂದಿಗೆ ಸಂಬಂಧಿಕರು ಆಶ್ರಯ ನೀಡಿದ್ದಾರೆ. ಕಳಂಕ ಮತ್ತು ಬಹಿಷ್ಕಾರದಂಥ ಸಾಮಾಜಿಕ ಭಯದಿಂದ ಇಂಥ ಮಹಿಳೆಯರು ಸ್ವಂತ ಮನೆಯಲ್ಲಿ ಬದುಕು ನಡೆಸಲು ಸಾಧ್ಯವಾಗದಂಥ ಸ್ಥಿತಿ ಇದೆ. ಅಷ್ಟೇ ಅಲ್ಲ, ಹೀಗೆ ಬಂದವರನ್ನು ಅವರ ಮನೆಯವರೂ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುವುದಿಲ್ಲ.

ಕಳ್ಳಸಾಗಣೆಗೆ ಒಳಗಾಗಿ ಬಂದವರನ್ನು ಮನೆಗೆ ಸೇರಿಸಿಕೊಂಡರೆ ಇಡೀ ಮನೆತನಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಭಾವನೆ ಶೇ 60.6ರಷ್ಟು ಜನರಲ್ಲಿದೆ.
ಸಾಮಾಜಿಕ ಘನತೆಯ ಭಯದಿಂದ ಲೈಂಗಿಕ ವೃತ್ತಿ ನಿರತರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ವಿವಾಹವಾಗಲು ಯಾರೂ ಮುಂದೆ ಬರುವುದಿಲ್ಲ. ಮನೆಗೇ ಹೊರೆ ಎಂದು ಭಾವಿಸುವವರೂ ಇದ್ದಾರೆ. ಮನೆತನದ ಮಾನ ಕಾಯುವ ಹೊಣೆಗಾರಿಕೆಯನ್ನು ಹೆಣ್ಣು ಮಕ್ಕಳಿಗೆ ಹೊರಿಸಿ ಅವರನ್ನು ಬಹಿಷ್ಕರಿಸುವ ಹುನ್ನಾರ ಸಾಮಾಜಿಕ ಮೌಲ್ಯ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪಾರಾಗಿ ಬಂದ ಬಳಿಕ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಅನೇಕರ ಪಾಲಿಗೆ ಅನಿವಾರ್ಯವಾಗಿದೆ. ಆದರೆ, ಅಂಥವರಿಗೆಂದೇ ಆಶ್ರಯ ನೀಡಲು ರಾಜ್ಯ ಸರ್ಕಾರ ಆರಂಭಿಸಿದ ‘ಉಜ್ವಲ’ ಕೇಂದ್ರಕ್ಕೆ ಸೇರಿದವರು ಕೇವಲ ಶೇ 6.8!

ವಿಜಯಪುರಕ್ಕೆ ಬಂದ ಬಾಂಗ್ಲಾದ ತೆಹಸ್ಸಿನಾ..
24 ವಯಸ್ಸಿನ ತೆಹಸ್ಸಿನಾ (ಹೆಸರು ಬದಲಿಸಲಾಗಿದೆ) ಬಾಂಗ್ಲಾ ದೇಶದವಳು. ಆಡುವ ಭಾಷೆ ಬಂಗಾಳಿ. ಅವಳಿಗೆ ಮದುವೆಯಾಗಿ ಎಂಟು ವರ್ಷದ ಮಗ ಇದ್ದಾನೆ. ಗಂಡ ಬಿಟ್ಟು ಹೋಗಿದ್ದಾನೆ. ಎಲ್ಲಿಗೆ ಹೋಗಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ತವರು ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆಕೆಗೆ ಇಬ್ಬರು ತಂಗಿಯರು. ಒಬ್ಬ ತಮ್ಮ . ತಂದೆ ಪಾರ್ಶ್ವವಾಯು ಪೀಡಿತರು. ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಸುತ್ತಮುತ್ತಲಿನ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ತೆಹಸ್ಸಿನಾ ಕುಟುಂಬದ ಜವಾಬ್ದಾರಿಯನ್ನೂ ಹೊತ್ತಿದ್ದಳು. ಅದೊಂದು ದಿನ ಅವಳು ಕೆಲಸ ಮಾಡುತ್ತಿದ್ದ ಮನೆಯೊಂದರ ಆಳು, ದಾರೋಜಿ ಎಂಬಾತ, ‘ನಿನಗೆ ಬೇರೆ ಊರಲ್ಲಿ ಕೆಲಸ ಕೊಡಿಸುತ್ತೇನೆ. ಒಳ್ಳೆಯ ದುಡ್ಡು ಬರುತ್ತದೆ. ಆರಾಮವಾಗಿ ಜೀವನ ಮಾಡಬಹುದು’ ಎಂದು ಆಸೆ ತೋರಿಸಿದ. ಹೊರಗೆ ಹೋಗಿ ದುಡಿದರೆ ಕುಟುಂಬದ ಸ್ಥಿತಿ ಸುಧಾರಿಸಬಹುದು ಎಂದು ಭಾವಿಸಿದ ತೆಹಸ್ಸಿನಾ, ದಾರೋಜಿ ಮಾತಿಗೆ ಒಪ್ಪಿಗೆ ಸೂಚಿಸಿದಳು.

ಯಾರಿಗೂ ಹೇಳದೆ ಬಟ್ಟೆ ಮತ್ತು ಕೆಲವು ದಾಖಲೆಗಳೊಂದಿಗೆ ಅದೊಂದು ದಿನ ಅವಳು ದಾರೋಜಿ ಮನೆಗೆ ಬಂದಳು. ಅವನು  ಆಕೆಯನ್ನು ಬಾಂಗ್ಲಾ– ಭಾರತದ ಗಡಿಯ ಹಳ್ಳಿಗೆ ಕರೆದುಕೊಂಡು ಬರುತ್ತಾನೆ. ಆ ರಾತ್ರಿ ಅವಳು ಮತ್ತು ದಾರೋಜಿ ಹೋಟೆಲ್‌ಗೆ ಊಟಕ್ಕೆ ಹೋದರು. ಅಲ್ಲಿ ತಂಪು ಪಾನೀಯ ಕುಡಿದು ಪ್ರಜ್ಞೆ ತಪ್ಪಿದ ಆಕೆ, ಎಚ್ಚರವಾದಾಗ ಕತ್ತಲೆ ಕೋಣೆಯೊಂದರಲ್ಲಿ ಇದ್ದಳು. ಕರೆದುಕೊಂಡು ಬಂದಿದ್ದ ದಾರೋಜಿ ಇರಲಿಲ್ಲ. ಏನೂ ತೋಚದೆ ಕಿರುಚಾಡಿದಳು. ನೆರವಿಗೆ ಯಾರೂ ಬರಲಿಲ್ಲ. ಆಕೆ ಇದ್ದುದು ಪಶ್ಚಿಮ ಬಂಗಾಳದ ವೇಶ್ಯಾಗೃಹದಲ್ಲಿ!

ಆ ದಾರೋಜಿ, ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಲ್ಲಾಳಿಯಾಗಿದ್ದ. ಈ ವಿಷಯ ಅಲ್ಲಿದ್ದ ಘರ್‌ವಾಲಿಯಿಂದ ಆಕೆಗೆ ಗೊತ್ತಾಯಿತು. ಅಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ತೆಹಸ್ಸಿನಾಳಿಗೆ ಬೆದರಿಕೆ ಹಾಕಲಾಯಿತು. ಅಲ್ಲಿಂದ ಆಕೆಯನ್ನು ಇನ್ನೊಬ್ಬ ದಲ್ಲಾಳಿ ಮೂಲಕ ಮುಂಬೈ ವೇಶ್ಯಾಗೃಹಕ್ಕೆ ಮಾರಾಟ ಮಾಡಲಾಯಿತು. ಅಲ್ಲಿ ಅವಳಿಗೆ ಚಿತ್ರಹಿಂಸೆ ನೀಡಲಾಯಿತು. ಆಕೆಯ ಬಳಿ ಇದ್ದ ಮೊಬೈಲ್‌, ಬ್ಯಾಗ್‌ ಕಿತ್ತುಕೊಳ್ಳಲಾಯಿತು. ವೇಶ್ಯಾವಾಟಿಕೆಗೆ ತೊಡಗುವಂತೆ ಒತ್ತಾಯಿಸಲಾಯಿತು. ವಾರದವರೆಗೆ ಊಟ ನೀಡಲಿಲ್ಲ. ದಾರಿ ಕಾಣದೆ ದಂಧೆಗೆ ಒಪ್ಪಿಕೊಂಡಳು. ಮುಂಬೈಯಲ್ಲಿ ದಲ್ಲಾಳಿಯೇ 15 ದಿನ ಲೈಂಗಿಕ ಕ್ರಿಯೆಗೆ ಬಳಸಿಕೊಂಡು ನಂತರ ದಂಧೆಯಲ್ಲಿ ತೊಡಗಿಸಿಕೊಂಡ. ಕೆಲವು ದಿನಗಳ ಬಳಿಕ ಆಕೆಯನ್ನು ವೇಶ್ಯಾವಾಟಿಕೆಗಾಗಿ ವಿಜಯಪುರಕ್ಕೆ ಕರೆದುಕೊಂಡ ಬರಲಾಯಿತು. ಅವಳಿದ್ದ ಜಾಗಕ್ಕೆ ಪೊಲೀಸರು ದಾಳಿ ನಡೆಸಿದ್ದರು. ತೆಹಸ್ಸಿನಾ ಈಗ ಸರ್ಕಾರದ ರಕ್ಷಣಾ ಕೇಂದ್ರ ದ ಆಶ್ರಯದಲ್ಲಿದ್ದಾಳೆ.

(ನಾಳಿನ ಸಂಚಿಕೆಯಲ್ಲಿ– ದಂಧೆಯಲ್ಲಿ ವಿವಾಹಿತ ಮಹಿಳೆಯರೇ ಹೆಚ್ಚು!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.