ADVERTISEMENT

ನ್ಯಾ.ವಿಶ್ವನಾಥ್‌ ಶೆಟ್ಟಿ ಕೊಲೆಗೆ ಯತ್ನ: ಚಾರ್ಜ್‌ಶೀಟ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ವಿಶ್ವನಾಥ್ ಶೆಟ್ಟಿ
ವಿಶ್ವನಾಥ್ ಶೆಟ್ಟಿ   

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದಿದ್ದ ತೇಜ್‌ರಾಜ್ ಶರ್ಮಾ ವಿರುದ್ಧ ಸಿಸಿಬಿ ಪೊಲೀಸರು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ 230 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.

‘ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ 15 ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಐದು ದೂರುಗಳನ್ನು ಕೊಟ್ಟಿದ್ದೆ. ಆ ಪೈಕಿ ಸಾಕ್ಷ್ಯಗಳ ಕೊರತೆಯ ಕಾರಣ ನೀಡಿ ಮೂರು ದೂರುಗಳನ್ನು ಲೋಕಾಯುಕ್ತರು ಮುಕ್ತಾಯಗೊಳಿಸಿದ್ದರು. ಅದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲು ಮುಂದಾಗಿದ್ದೆ’ ಎಂದು ತೇಜ್‌ರಾಜ್ ನೀಡಿರುವ ಹೇಳಿಕೆ ಆರೋಪಪಟ್ಟಿಯಲ್ಲಿದೆ.

‘ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಸರಬರಾಜು ಮಾಡುತ್ತಿದ್ದ ತುಮಕೂರಿನ ತೇಜ್‌ರಾಜ್, ಅವುಗಳನ್ನು ಖರೀದಿಸಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳನ್ನು ಕೊಟ್ಟಿದ್ದ. ಲೋಕಾಯುಕ್ತರು ಆ ದೂರುಗಳನ್ನು ಮುಕ್ತಾಯಗೊಳಿಸಿದ್ದರಿಂದ ಈತನಿಗೆ ₹ 1.71 ಲಕ್ಷ ಕಮಿಷನ್ ಸಿಗುವುದು ತಪ್ಪಿತ್ತು. ಇದರಿಂದ ಮುನಿಸಿಕೊಂಡಿದ್ದ’ ಎಂದು ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಸಿಸಿಬಿ ಡಿಸಿಪಿ ಜೀನೇಂದ್ರ ಖಣಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆರೋಪಿ ಲೋಕಾಯುಕ್ತರ ಕಚೇರಿಯೊಳಗೆ ಹೋಗಿರುವ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳು ಸೇರಿದಂತೆ 145 ದಾಖಲೆಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಿದ್ದೇವೆ. ಕಚೇರಿ ನೌಕರರು, ದಲಾಯತ್ ಸುಬ್ರಮಣಿ, ಲೋಕಾಯುಕ್ತರನ್ನು ಆಸ್ಪತ್ರೆಗೆ ಕರೆದೊಯ್ದ ಸಿಎಆರ್ ಪೊಲೀಸರು, ಮಲ್ಯ ಆಸ್ಪತ್ರೆ ವೈದ್ಯರು, ತೇಜ್‌ರಾಜ್ ಆರೋಪಿಸಿದ್ದ ಅಧಿಕಾರಿಗಳು ಸೇರಿದಂತೆ 58 ಸಾಕ್ಷಿಗಳ ಹೇಳಿಕೆಗಳೂ ಅದರಲ್ಲಿವೆ’ ಎಂದು ಮಾಹಿತಿ ನೀಡಿದರು.

‘ಭವಿಷ್ಯ ನೋಡಿ ಹೋಗಿದ್ದೆ’: ‘ನಾನು ವಿಶಾಖ ನಕ್ಷತ್ರದಲ್ಲಿ ಹುಟ್ಟಿರೋನು. ವಿಷ್ಣುವಿನ ಆರಾಧಕ. ಮಾರ್ಚ್ 7ರಂದು (ಬುಧವಾರ) ಬೆಳಿಗ್ಗೆ ಯುಟ್ಯೂಬ್‌ನಲ್ಲಿ ಭವಿಷ್ಯ ನೋಡಿದಾಗ, ‘ಈ ದಿನ ಏನೇ ಕೆಲಸ ಮಾಡಿದರೂ, ನಿಮಗೆ ಜಯ ಸಿಗುತ್ತದೆ’ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಹೀಗಾಗಿ, ಚಾಕು ಹಾಗೂ ದಾಖಲೆಗಳನ್ನು ತೆಗೆದುಕೊಂಡು ಲೋಕಾಯುಕ್ತರ ಭೇಟಿಗೆ ಹೊರಟಿದ್ದೆ. ಮೊದಲು ನ್ಯಾಯ ಕೇಳೋಣ. ಸಿಗಲಿಲ್ಲ ಎಂದರೆ ಮುಂದುವರಿಯೋಣ ಎಂದು ನಿರ್ಧರಿಸಿಕೊಂಡೇ ಕಚೇರಿಗೆ ತೆರಳಿದ್ದೆ’ ಎಂದು ತೇಜ್‌ರಾಜ್ ಹೇಳಿಕೆ ನೀಡಿದ್ದಾನೆ.

‘ಪ್ರತಿ 15 ದಿನಗಳಿಗೊಮ್ಮೆ ಲೋಕಾಯುಕ್ತರ ಕಚೇರಿಗೆ ಹೋಗಿ, ರದ್ದುಗೊಳಿಸಿರುವ ಪ್ರಕರಣಗಳ ಮರುತನಿಖೆಗೆ ಆದೇಶಿಸುವಂತೆ ಮನವಿ ಮಾಡುತ್ತಿದ್ದೆ. ಕೊನೆ ಸಲ ಹೋದಾಗ, ‘ಯಾವಾಗಲೂ ಸುಳ್ಳು ದೂರುಗಳನ್ನು ತೆಗೆದುಕೊಂಡು ಬರುತ್ತಾನೆ. ಈತನನ್ನು ಒಳಗೆ ಕಳುಹಿಸುವುದು ಬೇಡ’ ಎಂದು ಕಚೇರಿ ಸಿಬ್ಬಂದಿ ವಾಪಸ್ ಕಳುಹಿಸಿದ್ದರು. ಆಗಲೇ, ಅವೆನ್ಯೂ ರಸ್ತೆಗೆ ಹೋಗಿ ₹ 60 ಕೊಟ್ಟು ಚಾಕು ಖರೀದಿಸಿ ಇಟ್ಟುಕೊಂಡಿದ್ದೆ.’

‘ಮಾರ್ಚ್ 7ರ ಮಧ್ಯಾಹ್ನ ಚಾಕುವಿನೊಂದಿಗೆ ಕಚೇರಿಗೆ ಹೋದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಟೇಬಲ್‌ ಮೇಲಿಟ್ಟೆ. ಲೋಕಾಯುಕ್ತರು ಸಾಕ್ಷ್ಯಗಳನ್ನು ಕೇಳಿದರು. ಆ ಕೂಡಲೇ ಜೇಬಿನಿಂದ ಚಾಕು ತೆಗೆದ ನಾನು, ಟೇಬಲ್‌ ಮೇಲೆ ಹತ್ತಿ ಅವರಿಗೆ ಚುಚ್ಚಲಾರಂಭಿಸಿದೆ. ಅಷ್ಟರಲ್ಲಿ ಅಲ್ಲಿನ ನೌಕರರು ಬಂದು ನನ್ನನ್ನು ಹಿಡಿದುಕೊಂಡರು.’

‘ಈ ಹಂತದಲ್ಲಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಹೊಡೆದರು. ಆಗ ತಪ್ಪಿನ ಅರಿವಾಯಿತು. ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಿತ್ತು ಎನಿಸಿತು. ಅನ್ಯಾಯವಾಗಿ ಅವರಿಗೆ ಚುಚ್ಚಿಬಿಟ್ಟೆ. ಪಾಪ ಲೋಕಾಯುಕ್ತರಿಗೆ ವಯಸ್ಸಾಗಿದೆ. ಹಾಗೆ ಮಾಡಬಾರದಿತ್ತು ಎನಿಸಿತು’ ಎಂದೂ ಹೇಳಿದ್ದಾನೆ.

‘ಸುಪಾರಿ ಕಿಲ್ಲರ್ಸ್ ಕೈವಾಡ’

‘ಆರೋಪಪಟ್ಟಿ ಸಲ್ಲಿಸುವ ಮುನ್ನ ಲೋಕಾಯುಕ್ತರನ್ನು ಭೇಟಿ ಮಾಡಿದ್ದೆವು. ‘ನನ್ನ ಕೊಲೆಗೆ ದೊಡ್ಡ ಮಟ್ಟದ ಸಂಚು ನಡೆದಿರುವ ಸಾಧ್ಯತೆ ಇದೆ. ಯಾರೋ ಸುಪಾರಿ ಹಂತಕರು ನನ್ನನ್ನು ಮುಗಿಸಲು ತೇಜ್‌ರಾಜ್‌ನನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ. ಆ ಆಯಾಮದಲ್ಲೂ ತನಿಖೆ ಮಾಡಿ’ ಎಂದು ಅವರು ಹೇಳಿದರು. ಆದರೆ, ‘ಕೊಲೆ ಮಾಡುವಂತೆ ನನಗೆ ಯಾರೂ ಹೇಳಿರಲಿಲ್ಲ’ ಎಂದು ತೇಜ್‌ರಾಜ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ.ಆದರೂ, ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.