ADVERTISEMENT

ಪಂಚಪೀಠಗಳ ನಾಶಕ್ಕೆ ಸರ್ಕಾರದ ಕುತಂತ್ರ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ರಂಭಾಪುರಿ ಶ್ರೀ
ರಂಭಾಪುರಿ ಶ್ರೀ   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ರಾಜ್ಯ ಸರ್ಕಾರ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವುದರ ಹಿಂದೆ ಪಂಚಪೀಠಗಳನ್ನು ನಾಶ ಮಾಡುವ ಹುನ್ನಾರವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಬುಧವಾರ ಇಲ್ಲಿ ಆಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತವನ್ನು ಪ್ರತ್ಯೇಕ ಧರ್ಮ ಮಾಡಿ ಮೀಸಲಾತಿ ನೀಡುವುದರಿಂದ ಈಗ ಅಸ್ತಿತ್ವದಲ್ಲಿ ಇರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಕಷ್ಟ ಎದುರಾಗಲಿದೆ. ಪ್ರತ್ಯೇಕ ಧರ್ಮ ಮಾಡುವುದನ್ನು ಬಿಟ್ಟು ಇರುವ ವ್ಯವಸ್ಥೆಯನ್ನೇ ಇನ್ನಷ್ಟು ಸುಧಾರಿಸಿದ್ದರೆ ಎಲ್ಲರಿಗೂ ಒಳ್ಳೆಯದು ಆಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಪ್ರತ್ಯೇಕ ಧರ್ಮದ ಹೋರಾಟಗಾರರು ವೀರಶೈವ ಮಠಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಇಡಬೇಕು ಎಂಬ ದುಷ್ಟ ಆಲೋಚನೆ ಹೊಂದಿದ್ದಾರೆ. ಅದು ಎಂದಿಗೂ ಈಡೇರದು. ಪಂಚಪೀಠಗಳ ಮೇಲಿನ ಜನರ ವಿಶ್ವಾಸ ಎಂದಿಗೂ ಅಳಿಯದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿಗಳು ಹಟಮಾರಿತನದ ಧೋರಣೆ ಕೈ ಬಿಡದಿದ್ದರೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ. ಮಾರ್ಚ್‌ 23ರಂದು ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಸಭೆ ನಡೆಯಲಿದ್ದು, ಸರ್ಕಾರಕ್ಕೆ ಸ್ಪಷ್ಟ ನಿರ್ಧಾರ ತಿಳಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಶಿಫಾರಸು ಹಿಂಪಡೆಯಲು ಆಗ್ರಹ: ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕೆಂಬ ಶಿಫಾರಸ್ಸನ್ನು ರಾಜ್ಯ ಸರ್ಕಾರ ಹಿಂಪಡೆ
ಯಬೇಕು ಎಂದು  ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಬುಧವಾರ ಹುಬ್ಬಳ್ಳಿಯಲ್ಲಿ ಆಗ್ರಹಿಸಿದರು.

‘ವೀರಶೈವ ಮಠಾಧೀಶರು ಬೀದಿಗಿಳಿಯುವ ಮುನ್ನವೇ ಈ ಬಗ್ಗೆ ಪರಾಮರ್ಶೆ ನಡೆಸಬೇಕು. ರಾಜ್ಯದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ, ಶಿಫಾರಸು ಹಿಂಪಡೆಯಲು ಈಗಲೂ ಕಾಲ ಮಿಂಚಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಶೈವ ಸಮಾಜದ ಶಾಪಕ್ಕೆ ಗುರಿಯಾಗುವ ಬದಲು ಸಮಾಜಕ್ಕೆ ವರವಾಗುವ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅತಂತ್ರ ಸ್ಥಿತಿ: ಪ್ರತ್ಯೇಕ ಧರ್ಮವಾಗುವುದರಿಂದ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ರಾಜ್ಯ ಸರ್ಕಾರ ಮೊದಲು ಆಮಿಷ ಒಡ್ಡಿತ್ತು. ಆದರೆ, ಈಗ ಶೈಕ್ಷಣಿಕ ಸೌಲಭ್ಯಗಳು ಮಾತ್ರ ಸಿಗುತ್ತವೆ. ಉಳಿದಂತೆ ಈಗಿರುವ ಸ್ಥಾನಮಾನಗಳೇ ಮುಂದುವರಿಯಲಿವೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಲಿಂಗಾಯತ– ವೀರಶೈವರು ಇತ್ತ ಪ್ರತ್ಯೇಕ ಧರ್ಮೀಯರೂ ಅಲ್ಲ, ಅತ್ತ ಅಲ್ಪಸಂಖ್ಯಾತರೂ ಅಲ್ಲದ ಅತಂತ್ರ ಸ್ಥಿತಿಯಲ್ಲಿ ಸಿಲುಕಲಿದ್ದಾರೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಲಾಭವಾಗುತ್ತದೆಯಾದ್ದರಿಂದ ಲಿಂಗಾಯತ– ವೀರಶೈವ ಸಂಘ, ಸಂಸ್ಥೆಗಳ ಮುಖಂಡರು ಶಿಫಾರಸ್ಸನ್ನು ಸ್ವಾಗತಿಸುತ್ತಿದ್ದಾರೆ ಎಂದು ಟೀಕಿಸಿದರು.

ನಾಳೆ ಸಂಪುಟ ಸಭೆ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಣಯ ಅನುಮೋದಿಸಿ ಕೇಂದ್ರಕ್ಕೆ ಕಳುಹಿಸುವ ಸಂಬಂಧ  ಇದೇ 23ರಂದು ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ.

ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸುಗಳನ್ನು ಮತ್ತು ವರದಿಯನ್ನು ಈ ಸಭೆಯಲ್ಲಿ ಅನುಮೋದಿ
ಸಲಾಗುವುದು. ಅದೇ ದಿನ ಸಂಜೆ ಅಥವಾ ಮರುದಿನ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಇದರಲ್ಲಿ ಏನಾದರೂ ಬದಲಾವಣೆ ಮಾಡಬೇಕೇ ಅಥವಾ ಹೊಸ ಅಂಶಗಳನ್ನು ಸೇರಿಸಬೇಕೇ ಎಂಬುದರ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.