ADVERTISEMENT

ಪಂಚಾಯ್ತಿ ತೆರಿಗೆ ಪರಿಷ್ಕರಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ದಾವಣಗೆರೆ: ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ತೆರಿಗೆ ಪರಿಷ್ಕರಣೆ ಮತ್ತು ವಸೂಲಾತಿ ಮಾಡುವ ಕಾರ್ಯವನ್ನು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ನ್ನು ಜಾರಿಗೊಳಿಸುವ ಮೂಲಕ ಹಾಗೂ ವಿಕೇಂದ್ರೀಕರಣದ ತತ್ವಕ್ಕೆ ಅನುಸಾರವಾಗಿ ಮೂರು ಹಂತದ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಅನುದಾನ, ಕಾರ್ಯ ನಿಗದಿ ಮಾಡಲಾಗಿದೆ. ಸಿಬ್ಬಂದಿ ಒದಗಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡಲಾಗಿದೆ. ಅದರಂತೆ ಪ್ರತಿ ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯ್ತಿಗೆ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ, ಪಂಚಾಯ್ತಿಗಳು ಸ್ಥಳೀಯ ಸರ್ಕಾರದಂತೆ ಕಾರ್ಯ ನಿರ್ವಹಿಸಲು ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವುದು ಮಹತ್ವ ಪಡೆಯುತ್ತದೆ. ಆದರೆ ಏಳು-ಎಂಟು ವರ್ಷಗಳಿಂದ ಈ ಪರಿಷ್ಕರಣೆ ಕಾರ್ಯ ನಡೆದಿಲ್ಲ!

ಗ್ರಾಮ ಪಂಚಾಯ್ತಿಗೆ ಅಧಿಕಾರ: ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 199ರಲ್ಲಿ ಗ್ರಾಮ ಪಂಚಾಯ್ತಿಗಳು ತಮ್ಮ ಪ್ರದೇಶದ ಪರಿಮಿತಿಯ ಒಳಗಿರುವ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಕಟ್ಟಡ, ನಿವೇಶನ ಹಾಗೂ ಕುಡಿಯುವುದಕ್ಕೆ ಮತ್ತು ಇತರ ಉದ್ದೇಶಗಳಿಗಾಗಿ ನೀರು ಸರಬರಾಜು ಮಾಡಲು ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

 ಈ ಪ್ರಕರಣದ ಅಡಿ, ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯ್ತಿಗಳ ತೆರಿಗೆಗಳು ಮತ್ತು ಫೀಜುಗಳು) ನಿಯಮಗಳು 1994ನ್ನು ರಚಿಸಲಾಗಿದ್ದು, ಇದರಲ್ಲಿ ತೆರಿಗೆ ಮತ್ತು ಫೀಜುಗಳನ್ನು ವಿಧಿಸಲು ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ. ಪ್ರತಿ ನಾಲ್ಕು ವರ್ಷಗಳಿಗೆ ಒಂದು ಬಾರಿಗಿಂತ ಕಡಿಮೆ ಇಲ್ಲದಂತೆ ಸಂಪೂರ್ಣ ತೆರಿಗೆಗಳನ್ನು ಪರಿಷ್ಕರಿಸಲು ಅಧಿಕಾರವಿದೆ. ಮೂರು ಹಂತದ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಗಳು ಮಾತ್ರ ತೆರಿಗೆ ವಿಧಿಸುವ ಅಧಿಕಾರ ಹೊಂದಿವೆ. ಈ ಕರ್ತವ್ಯ ಬಹುತೇಕ ಪಂಚಾಯ್ತಿಗಳು ಸಮರ್ಪಕವಾಗಿ ನಿರ್ವಹಿಸದ ಕಾರಣ, ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಕಡ್ಡಾಯವಾಗಿ ತೆರಿಗೆ ಪರಿಷ್ಕರಣೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿ ಈಚೆಗೆ ಆದೇಶ ಹೊರಡಿಸಿದ್ದಾರೆ.

ಅತ್ಯಂತ ಶೋಚನೀಯ! `ಗ್ರಾಮ ಪಂಚಾಯ್ತಿಗಳು ತೆರಿಗೆ ಪರಿಷ್ಕರಣೆ, ವಸೂಲಾತಿ, ಶುಲ್ಕ, ಉಪಕರ ಹಾಗೂ ಚರ ಮತ್ತು ಸ್ಥಿರಾಸ್ತಿಗಳಿಂದ ಬರುವ ಆದಾಯದ ಮೂಲಕ ಸ್ವಂತ ಸಂಪನ್ಮೂಲ ವೃದ್ಧಿಗೆ ಸರ್ಕಾರ ವ್ಯಾಪಕ ಅವಕಾಶ ನೀಡಿದೆ. ಆದರೂ ತೆರಿಗೆ ವಸೂಲಾತಿಯಲ್ಲಿ ಗ್ರಾಮ ಪಂಚಾಯ್ತಿಗಳು ಆಸಕ್ತಿ ವಹಿಸದೆ ಸ್ವಂತ ಸಂಪನ್ಮೂಲದಿಂದ ಸಿಬ್ಬಂದಿ ವೇತನ ಪಾವತಿಸಲು ಸಹ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿರವುದು ಶೋಚನೀಯವಾಗಿದೆ~ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

2011-12ನೇ ಸಾಲಿನಲ್ಲಿ ರಾಜ್ಯದ ಗ್ರಾಮ ಪಂಚಾಯ್ತಿಗಳ ಒಟ್ಟು ತೆರಿಗೆ ವಸೂಲಾತಿ ಬೇಡಿಕೆ ರೂ 508.10 ಕೋಟಿಗಳಿದ್ದು, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ರೂ 223.82 ಕೋಟಿಯಷ್ಟು ಮಾತ್ರ ವಸೂಲಾಗಿದೆ.

ರೂ 282.49 ಕೋಟಿ ಬಾಕಿ ಇದೆ. ಅಂದರೆ ವಸೂಲಾತಿ ಪ್ರಮಾಣ ಶೇಕಡಾ 44.05 ಮಾತ್ರ. 2012-13ನೇ ಸಾಲಿನಲ್ಲಿ ಈ ಪ್ರಮಾಣ ಹೆಚ್ಚಿಸುವ ಹಾಗೂ ಬಾಕಿ ವಸೂಲಿಯ ಗುರಿ ಸರ್ಕಾರದ್ದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಗತಿಯಲ್ಲಿ: `ಮನೆ ಕಂದಾಯ, ಅಂಗಡಿ, ಮಳಿಗೆಗಳು, ಹೋಟೆಲ್‌ಗಳಿಗೆ ತೆರಿಗೆ, ಪರವಾನಗಿ ನೀಡುವುದಕ್ಕೆ ಶುಲ್ಕ, ಜಾಹೀರಾತು ಫಲಕಗಳಿಗೆ ತೆರಿಗೆ ವಿಧಿಸುವುದು ಸೇರಿದಂತೆ ಪಂಚಾಯ್ತಿಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಬಹಳಷ್ಟು ಅವಕಾಶ ಕಲ್ಪಿಸಲಾಗಿದೆ.  ಮೂಲಸೌಲಭ್ಯ ಕಲ್ಪಿಸಲು ಪ್ರಮುಖ ಆದಾಯ ಮೂಲ ಇದಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ಆಗಬೇಕಾದ ಕಾರ್ಯ ಬಹಳ ವರ್ಷಗಳಿಂದ ನಡೆದಿಲ್ಲ. ಈ ಸಾಲಿನಲ್ಲಿ ಕಟ್ಟುನಿಟ್ಟಾಗಿ ಮಾಡಲು ಸೂಚಿಸಲಾಗಿದೆ. ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಪಂಚಾಯ್ತಿಗಳಲ್ಲಿ ಪರಿಷ್ಕರಣೆ ಹಾಗೂ ವಸೂಲಾತಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ~ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.